ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ: ಸೆನ್ಸರ್‌ ಇದ್ದರೂ ತಪ್ಪಲಿಲ್ಲ ಸಮಸ್ಯೆ

ಮಳೆ ಅನಾಹುತ: ಬರಲೇ ಇಲ್ಲ ಮುನ್ನೆಚ್ಚರಿಕಾ ಸಂದೇಶ,ಹೊರವಲಯದಲ್ಲೇ ಹೆಚ್ಚಿನ ಹಾನಿ
Last Updated 15 ಸೆಪ್ಟೆಂಬರ್ 2020, 20:36 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಬಂದಾಗ ಪ್ರವಾಹ ಉಂಟಾಗಬಲ್ಲ 270 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದೇವೆ. ರಾಜಕಾಲುವೆಗಳಲ್ಲಿ 21 ಕಡೆ ಸಂವೇದಕಗಳನ್ನು (ಸೆನ್ಸರ್‌) ಅಳವಡಿಸಲಾಗಿದ್ದು, ಶೇ 75ರಷ್ಟು ನೀರು ತುಂಬಿದ ತಕ್ಷಣ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ’

ಕಂದಾಯ ಸಚಿವ ಆರ್‌.ಅಶೋಕ ಅವರು 2020ರ ಜೂನ್ 1ರಂದು ನೀಡಿದ ಪತ್ರಿಕಾ ಹೇಳಿಕೆ ಇದು. ಕಳೆದ ವಾರ ನಗರದಲ್ಲಿ ಭಾರಿ ಮಳೆಯಾದಾಗ ಜನರಿಗೆ ಯಾವುದೇ ಮುನ್ನೆಚ್ಚರಿಕಾ ಸಂದೇಶ ಬರಲೇ ಇಲ್ಲ. ಎಂದಿನಂತೆಯೇ ಅನೇಕ ಕಡೆ ರಾಜಕಾಲುವೆಗಳು ಉಕ್ಕಿ ಹರಿದವು. ತಗ್ಗು ಪ್ರದೇಶಗಳೆಲ್ಲ ಜಲಾವೃತವಾದವು. ನೂರಾರು ಮಂದಿ ನಿದ್ದೆಗೆದ್ದು ರಾತ್ರಿಯಿಡೀ ಮನೆಯಿಂದ ನೀರು ಹೊರಹಾಕುವ ಪಾಡು ತಪ್ಪಲಿಲ್ಲ.

ಪ್ರತಿವರ್ಷವೂ ಜೋರಾಗಿ ಮಳೆ ಬಂದಾಗ ನಗರದ ಒಂದಲ್ಲ ಒಂದು ಕಡೆ ಸಮಸ್ಯೆಗಳು ಸೃಷ್ಟಿಯಾಗುತ್ತಲೇ ಇವೆ. ಸಮಸ್ಯೆ ಉಂಟಾಗುವುದನ್ನು ತಡೆಯುವ ಸಲುವಾಗಿಯೇ ಪಾಲಿಕೆಯಲ್ಲಿ ವಿಪತ್ತು ನಿರ್ವಹಣಾ ಕೋಶವಿದ್ದು, ವಾರ್ಡ್‌ ಮಟ್ಟದಲ್ಲಿ ಇದರ ಘಟಕಗಳನ್ನು ರಚಿಸಲಾಗಿದೆ. ವಾರ್ಡ್‌ನಲ್ಲಿ ಎಲ್ಲೆಲ್ಲಿ ಪ್ರವಾಹ ಉಂಟಾಗುವ ಸಂಭವ ಇವೆ ಎಂಬುದನ್ನು ಭೌಗೋಳಿಕ ಲಕ್ಷಣಗಳ ಆಧಾರದಲ್ಲಿ ಗುರುತಿಸಬೇಕು. ಈ ಹಿಂದೆ ಸಂಭವಿಸಿರುವ ಪ್ರವಾಹಗಳು ಹಾಗೂ ಅನಾಹುತಗಳ ಆಧಾರದಲ್ಲಿ ವಾರ್ಡ್ ಹಂತದಲ್ಲಿ ವಿಕೋಪ ನಿರ್ವಹಣೆ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಬೇಕು. ಈ ಬಗ್ಗೆ ಬಿಬಿಎಂಪಿ ವೆಬ್‌ಸೈಟ್‌ನಲ್ಲೇ (http://bbmp.gov.in/) ಮಾಹಿತಿಗಳೂ ಸಿಗುತ್ತವೆ. ಆದರೆ, ವಾಸ್ತವದಲ್ಲಿ ಇದು ಅನುಷ್ಠಾನಕ್ಕೆ ಬಂದಿದೆಯೇ ಎಂದರೆ ಬಿಬಿಎಂಪಿ ಅಧಿಕಾರಿಗಳ ಬಳಿ ಉತ್ತರ ಇಲ್ಲ.

ಬಿಬಿಎಂಪಿಯಲ್ಲಿ ಜೂನ್‌ ತಿಂಗಳಿನಲ್ಲೇ ಕಂದಾಯ ಸಚಿವರ ನೇತೃತ್ವದಲ್ಲಿ ಮಳೆ ಸನ್ನದ್ಧತೆ ಬಗ್ಗೆ ಪರಿಶೀಲನಾ ಸಭೆ ನಡೆದಿತ್ತು. ಈ ಬಾರಿ ಮಳೆಯ ಅನಾಹುತಗಳನ್ನು ಎದುರಿಸಲು ಸಂಪೂರ್ಣ ಸನ್ನದ್ಧರಾಗಿದ್ದೇವೆ ಎಂದು ಅಧಿಕಾರಿಗಳು ಹೇಳಿಕೆ ನೀಡಿ
ದ್ದರು. ಆದರೆ, ಪರಿಸ್ಥಿತಿ ಇನ್ನೂ ಪೂರ್ತಿ ಸರಿಯಾಗಿಲ್ಲ ಎಂಬುದನ್ನು ಇತ್ತೀಚೆಗೆ ಸುರಿದ ಮಳೆ ಜಾಹೀರು ಮಾಡಿದೆ.

ರಾಜಕಾಲುವೆಗಳನ್ನು ಈಗ ನಿರಂತರ ನಿರ್ವಹಣೆ ಮಾಡಲಾಗುತ್ತಿದೆ. ನಗರದ 422 ಕಿ.ಮೀ ಉದ್ದದ ರಾಜಕಾಲುವೆಯ ವಾರ್ಷಿಕ ನಿರ್ವಹಣೆಯ ಗುತ್ತಿಗೆ ನೀಡಿರುವ ಪಾಲಿಕೆ ಇದಕ್ಕಾಗಿ ₹ 42 ಕೋಟಿ ಅನುದಾನ ವೆಚ್ಚ ಮಾಡುತ್ತಿದೆ. ಆದರೂ ರಾಜಕಾಲುವೆಗಳು ಉಕ್ಕಿ ಹರಿದು ಪ್ರವಾಹ ಉಂಟಾಗುವುದು ತಪ್ಪುತ್ತಿಲ್ಲ.

ಹೊರವಲಯದಲ್ಲೇ ಅನಾಹುತ ಹೆಚ್ಚು: ನಗರದ ಹೊರವಲಯಗಳಲ್ಲಿ ದಶಕದ ಈಚಿನವರೆಗೂ ಜಮೀನುಗಳು ಖಾಲಿ ಇದ್ದವು. ಒಂದು ದಶಕದಿಂದೀಚೆಗೆ ಇಲ್ಲೆಲ್ಲ ಮನೆಗಳು, ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಭಾರಿ ಪ್ರಮಾಣದಲ್ಲಿ ನಿರ್ಮಾಣವಾಗಿವೆ. ಮಳೆ ನೀರು ಹರಿದು ಹೋಗುವ ಸಹಜ ವ್ಯವಸ್ಥೆಗಳೆಲ್ಲವೂ ಅಸ್ತವ್ಯಸ್ತಗೊಂಡಿವೆ. ಹಾಗಾಗಿ ಪ್ರವಾಹದಿಂದ ಹೆಚ್ಚಿನ ಹಾನಿ ಉಂಟಾಗುತ್ತಿರುವುದು ಹೊರವಲಯದ ಪ್ರದೇಶಗಳಲ್ಲೇ. ಕಳೆದೆರಡು ವರ್ಷಗಳಲ್ಲಿ ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗಳಲ್ಲಿ ಹೆಚ್ಚಿನ ಅನಾಹುತಗಳು ಸಂಭವಿಸಿದ್ದವು. ಈ ವರ್ಷ ದಾಸರಹಳ್ಳಿ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಹೆಬ್ಬಾಳ ಕಣಿವೆ ವ್ಯಾಪ್ತಿಯ ಪ್ರದೇಶದಲ್ಲಿ ಅನೇಕ ಪ್ರದೇಶಗಳು ಜಲಾವೃತಗೊಂಡವು.

‘ಬ್ಯಾಟರಾಯನಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಬಾರಿ ಹೆಚ್ಚಿನ ಪ್ರವಾಹ ಉಂಟಾಗಲು ಈ ಪ್ರದೇಶದ ರಾಜಕಾಲುವೆ ನಿರ್ವಹಣೆ ಸಮರ್ಪ
ಕವಾಗಿ ಆಗದಿರುವುದೂ ಕಾರಣ. ಇಲ್ಲಿನ ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ಹಾಗೂ ಅದರ ಹಿಂದಿನ ಬಡಾವಣೆಗಳ ಪ್ರದೇಶದಲ್ಲಿ ರಾಜ
ಕಾಲುವೆ ಒತ್ತುವರಿಯಾಗಿದೆ. ಅವುಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ’ ಎಂದು ದೂರುತ್ತಾರೆ ಸಂಜೀವ ದ್ಯಾಮಣ್ಣವರ್‌.

‘ಮಾನ್ಯತಾ ಟೆಕ್ ಪಾರ್ಕ್‌, ರಾಚೇನಹಳ್ಳಿ, ಜಕ್ಕೂರು ಪ್ರದೇಶದಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವುದು ಇದೇ ಮೊದಲಲ್ಲ. ಇಲ್ಲಿ ಕೆಲವೆಡೆ ರಾಜಕಾಲುವೆಗಳನ್ನು ಭಾಗಶಃ ಮುಚ್ಚಿದ್ದಾರೆ. ಅಲ್ಲಿ ಅವುಗಳ ನಿರ್ವಹಣೆ ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

ರಾಜಕಾಲುವೆ: ಇನ್ನೂ ತೆರವಾಗಿಲ್ಲ 736 ಒತ್ತುವರಿ

ಅನಾಹುತ ಸಂಭವಿಸಿದ ಬಳಿಕ ಪರಿಹಾರ ಕೈಗೊಂಡರೆ ಪ್ರಯೋಜನವಿಲ್ಲ. ಅನಾಹುತ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಈ ವಿಚಾರದಲ್ಲಿ ಬಿಬಿಎಂಪಿಯ ವೇಗ ಎಷ್ಟಿದೆ ಎಂಬುದಕ್ಕೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯೇ ಕನ್ನಡಿ ಹಿಡಿಯುತ್ತದೆ.

2016ರಲ್ಲಿ ನಗರದಲ್ಲಿ ಅನೇಕ ಕಡೆ ಭಾರಿ ಪ್ರವಾಹ ಉಂಟಾಗಿ ಅನಾಹುತಗಳು ಸೃಷ್ಟಿಯಾದಾಗ ರಾಜಕಾಲುವೆ ಒತ್ತುವರಿಗಳನ್ನು ಗುರುತಿಸಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಸರ್ಕಾರ ಬಿಬಿಎಂಪಿಗೆ ಸೂಚನೆ ನೀಡಿತ್ತು. ಒಟ್ಟು 2,626 ಕಡೆ ರಾಜಕಾಲುವೆ ಒತ್ತುವರಿಯಾಗಿರುವುದನ್ನು ಗುರುತಿಸಲಾಗಿದೆ. ಇನ್ನೂ 736 ಕಡೆ ಒತ್ತುವರಿ ತೆರವು ಬಾಕಿ ಇದೆ. ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಮನ್ವಯ ಸಭೆಗೆ ಬಿಬಿಎಂಪಿ ಅಧಿಕಾರಿಗಳು ತಿಂಗಳ ಹಿಂದಷ್ಟೇ ಈ ಮಾಹಿತಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT