ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತಷ್ಟು ಸಂದೇಹ ಹುಟ್ಟಿಸುವಂತಿದೆ ಬಿಬಿಎಂಪಿ ಸ್ಪಷ್ಟೀಕರಣ

ಜೆಟ್‌ ಪ್ರೆಷರ್‌/ ವಾಷರ್‌ ಯಂತ್ರ ಖರೀದಿ ಟೆಂಡರ್‌ ಅಕ್ರಮ?
Last Updated 4 ಜನವರಿ 2022, 20:37 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೇಂದ್ರ ವಾಣಿಜ್ಯ ಪ್ರದೇಶದ ರಸ್ತೆ, ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿಸಲು ಜೆಟ್ ಪ್ರೆಷರ್‌/ ವಾಷರ್‌ ಯಂತ್ರಗಳ ಖರೀದಿಯ ಟೆಂಡರ್‌ ಪ್ರಕ್ರಿಯೆಯ ಅಕ್ರಮಗಳ ಕುರಿತು ‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಗೆ ಬಿಬಿಎಂಪಿ ಸ್ಪಷ್ಟನೆ ನೀಡಿದೆ. ಈ ಸ್ಪಷ್ಟೀಕರಣವು ಸಂದೇಹಗಳನ್ನು ನಿವಾರಿಸುವ ಬದಲು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

‘ಟೆಂಡರ್‌ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ. ಇದಕ್ಕೆ ಬಿಡ್‌ದಾರರಿಂದ ಆಕ್ಷೇಪಣೆ ವ್ಯಕ್ತವಾಗಿಲ್ಲ. ತಾಂತ್ರಿಕ ಮತ್ತು ಆರ್ಥಿಕ ಮೌಲ್ಯಮಾಪನ ಮತ್ತು ದರ ಸಂಧಾನ ಸಮಿತಿ ತೀರ್ಮಾನದ ಪ್ರಕಾರ ಎ.ಎಲ್‌.ಸತೀಶ್‌ ಕುಮಾರ್‌ ಅವರನ್ನು ಯಶಸ್ವಿ ಬಿಡ್‌ದಾರ ಎಂದು ಪರಿಗಣಿಸಲಾಗಿದೆ’ ಎಂದುಬಿಬಿಎಂಪಿಯ ಕಾರ್ಯಪಾಲಕ ಎಂಜಿನಿಯರ್‌ ಸ‌್ಪಷ್ಟನೆ ನೀಡಿದ್ದಾರೆ.

‘ಇದು ಹೊಸ ಯೋಜನೆಯಾಗಿದ್ದು, ಇದಕ್ಕೆ ಯಂತ್ರ ತಯಾರಿಸುವ ಕಂಪನಿ, ನಿರ್ವಹಣೆ ಮಾಡುವ ಕಂಪನಿ ಅಥವಾ ವ್ಯಕ್ತಿ ಜೊತೆಗೂಡಿ ಒಕ್ಕೂಟ (ಕನ್ಸೊರ್ಟಿಯಂ) ಟೆಂಡರ್‌ ಮಾದರಿಯಲ್ಲಿ ಟೆಂಡರ್‌ ಆಹ್ವಾನಿಸಲಾಗಿದೆ’ ಎಂದು ಸ್ಪಷ್ಟನೆಯಲ್ಲಿ ಹೇಳಲಾಗಿದೆ. ಆದರೆ, ಟೆಂಡರ್‌ ಷರತ್ತುಗಳ ಪ್ರಕಾರ (ಸಂಖ್ಯೆ 6) ಯಾವುದೇ ಜಂಟಿ ಸಂಸ್ಥೆಗಳು/ ಕನ್ಸೋರ್ಟಿಯಂಗಳು ಟೆಂಡರ್‌ನಲ್ಲಿ ಭಾಗವಹಿಸುವಂತಿಲ್ಲ. ಈ ಕುರಿತು ವಿವರಣೆ ಕೇಳಿದಾಗ ಸೂಪರಿಂಟೆಂಡಿಂಗ್ ಎಂಜಿನಿಯರ್‌ (ಕಸ ನಿರ್ವಹಣೆ) ಬಸವರಾಜ ಕಬಾಡೆ ಅವರು, ‘ಈ ಕುರಿತ ಪರಿಷ್ಕೃತ ಟಿಪ್ಪಣಿಯನ್ನು (ಅಡೆಂಡಂ) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ’ ಎಂದು ಸಮರ್ಥಿಸಿಕೊಂಡರು. ಆದರೆ, ಇ–ಪ್ರೊಕ್ಯೂರ್‌ಮೆಂಟ್‌ನಲ್ಲಿ ಲಭ್ಯವಿರುವ ಪರಿಷ್ಕೃತ ಟಿಪ್ಪಣಿಯಲ್ಲಿ ಎಲ್ಲೂ ‘ಟೆಂಡರ್‌ ಪ್ರಕ್ರಿಯೆಯಲ್ಲಿ ಕನ್ಸೊರ್ಟಿಯಂಗಳೂ ಭಾಗವಹಿಸಬಹುದು’ ಎಂಬ ತಿದ್ದುಪಡಿಯ ಉಲ್ಲೇಖವಿಲ್ಲ.

‘ಶುಭ್ರ ಬೆಂಗಳೂರು’ ಯೋಜನೆಯಡಿ ₹ 5 ಕೋಟಿಯಷ್ಟೇ ಲಭ್ಯವಿದ್ದರೂ ₹ 12.40 ಕೋಟಿ ವೆಚ್ಚಕ್ಕೆ ಟೆಂಡರ್‌ ಕರೆದ ಕುರಿತ ಸ್ಪಷ್ಟನೆಯಲ್ಲಿ, ‘₹ 7.81 ಕೋಟಿಗಳಷ್ಟು ವ್ಯತ್ಯಾಸ ಮೊತ್ತವನ್ನು ಬಿಬಿಎಂಪಿ ಬಜೆಟ್‌ನಲ್ಲಿ ಕಸ ನಿರ್ವಹಣೆಗೆ ಮೀಸಲಿಡುವ ₹ 650 ಕೋಟಿವರೆಗಿನ ಇಡುಗಂಟಿನಲ್ಲಿ ಭರಿಸಿ ಮರುಹೊಂದಾಣಿಕೆ ಮಾಡಲು ಮುಖ್ಯ ಆಯುಕ್ತರು ಅನುಮೋದನೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ. ಈ ಇಡುಗಂಟಿನ ಅನುದಾನ ಭರಿಸಲು ಅನುಮೋದನೆ ನೀಡುವ ಅಧಿಕಾರ ಮುಖ್ಯ ಆಯುಕ್ತರಿಗೆ ಇರುವುದಿಲ್ಲ ಎಂಬುದನ್ನು ‘ಪ್ರಜಾವಾಣಿ’ ಬೊಟ್ಟು ಮಾಡಿತ್ತು. ಇದಕ್ಕೆ ಬಿಬಿಎಂಪಿ ಉತ್ತರಿಸಿಲ್ಲ.

‘ಪ್ರಜಾವಾಣಿ’ಯ ವರದಿಯಲ್ಲಿ ಎಲ್ಲೂ ಟೆಂಡರ್‌ ದಾಖಲೆಗಳನ್ನು ಪ್ರಶ್ನೆ ಮಾಡಿಲ್ಲ. ಅದರ ಷರತ್ತುಗಳನ್ನೇ ಕಡೆಗಣಿಸಿ ಅನರ್ಹರಿಗೆ ಗುತ್ತಿಗೆ ನೀಡುವ ಬಗ್ಗೆಯಷ್ಟೇ ಪ್ರಶ್ನೆಗಳನ್ನು ಎತ್ತಲಾಗಿತ್ತು. ಈ ಬಗ್ಗೆ ಮೌನ ವಹಿಸಲಾಗಿದೆ.

ಪೂರ್ವಾನುಭವವಿಲ್ಲದ ಸಂಸ್ಥೆಯಿಂದ ಯಂತ್ರ ಖರೀದಿ?

‘ದೇಶದ ಮೊಟ್ಟ ಮೊದಲ ಯೋಜನೆ ಇದು. ಪ್ರಷರ್‌ ಜೆಟ್‌ ಕ್ಲೀನರ್‌/ ವಾಷರ್‌ ಯಂತ್ರಗಳು ಅತ್ಯಂತ ನವನೂತನ ಯಂತ್ರಗಳು. ಅವುಗಳನ್ನು ದೇಶದ ಯಾವುದೇ ಪಾಲಿಕೆಗಳಲ್ಲಿ ಬಳಸಿಲ್ಲ. ಈ ಯಂತ್ರಗಳನ್ನು 26 ಟನ್‌ ತೂಕದ ಬಿಎಸ್‌–6 ಮಾದರಿಯಟ್ರಕ್‌ನಲ್ಲಿ ಅಳವಡಿಸಿ ಬಳಸಲಾಗುತ್ತದೆ. ಇಂತಹ ಟ್ರಕ್‌ನ ಮಾರುಕಟ್ಟೆ ದರವೇ ₹ 35 ಲಕ್ಷಕ್ಕೂ ಹೆಚ್ಚು ಇದೆ. 10 ಸಾವಿರ ಲೀ ಸಾಮರ್ಥ್ಯದ ತೊಟ್ಟಿಯನ್ನೂ ವಾಹನಕ್ಕೆ ಜೋಡಿಸಬೇಕಿದ್ದು, ಇದಕ್ಕೆ ₹ 15ರಿಂದ 20 ಲಕ್ಷ ವೆಚ್ಚವಾಗುತ್ತದೆ. ವಾಹನಕ್ಕೆ ಹೆಚ್ಚುವರಿ ಎಂಜಿನ್ ಹಾಗೂ ಪ್ರೆಷರ್‌ ನೋಝಲ್‌ ಅಳವಡಿಸಬೇಕು. ಈ ಘಟಕವನ್ನು ವಿದೇಶಗಳಿಂದ ತರಿಸಬೇಕು. ಇಂತಹ ಯಂತ್ರವನ್ನು ಕೇವಲ ನೀರನ್ನು ಸಿಂಪಡಿಸುವ ಯಂತ್ರಗಳ ಜೊತೆ ಹೋಲಿಸುವುದು ₹ 3 ಲಕ್ಷದ ಕಾರನ್ನು ₹ 10 ಕೋಟಿ ದರದ ಕಾರಿಗೆ ಹೋಲಿಸಿದಷ್ಟೇ ಅಸಮಂಜಸ’ ಎಂದು ಕಾರ್ಯಪಾಲಕ ಎಂಜಿನಿಯರ್ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.

ಇದನ್ನು ಒಪ್ಪಿಕೊಂಡಿದ್ದೇ ಆದರೂ, ನೀರನ್ನು ಸಿಂಪಡಿಸುವ ಯಂತ್ರ ಪೂರೈಸಿದ ಸಂಸ್ಥೆಯ ಅನುಭವವನ್ನು ಆಧುನಿಕ ಯಂತ್ರ ಪೂರೈಕೆಯ ಪೂರ್ವಾನುಭವ ಎಂದು ಬಿಬಿಎಂಪಿ ಪರಿಗಣಿಸಿದ್ದೇಕೆ. ಈ ಯಂತ್ರಗಳನ್ನು ದೇಶದ ಯಾವುದೇ ಇತರ ಪಾಲಿಕೆಗಳಲ್ಲಿ ಬಳಸಿಲ್ಲವೆಂದಾದರೆ ದೆಹಲಿಯ ಪಾಲಿಕೆಯಲ್ಲಿನ ಪೂರ್ವಾನುಭವದ ಪ್ರಮಾಣಪತ್ರವನ್ನು ಬಿಬಿಎಂಪಿ ಒಪ್ಪಿಕೊಂಡಿದ್ದೇಕೆ. ಈ ಯಂತ್ರಗಳನ್ನು ಸರಬರಾಜು ಅಥವಾ ನಿರ್ವಹಣೆ ಮಾಡಿಯೇ ಇರದ ಸಂಸ್ಥೆಯಿಂದ ಈ ಯಂತ್ರಗಳನ್ನು ಖರೀದಿಸಲಾಗುತ್ತಿದೆಯೇ ಎಂಬ ಸಂದೇಹವೂ ಮೂಡಿದೆ.

ಗುತ್ತಿಗೆದಾರರು ಯಂತ್ರದ ಅಧಿಕೃತ ಮಾರಾಟಗಾರರೇ?

ಯಂತ್ರಗಳ ಅಧಿಕೃತ ಮಾರಾಟಗಾರ ಎಂಬ ನೆಲೆಯಲ್ಲಿ ಗುತ್ತಿಗೆದಾರ ಎ.ಎಲ್‌ ಸತೀಶ್‌ ಕುಮಾರ್‌ ಅವರನ್ನು ಆರ್ಥಿಕ ಬಿಡ್‌ನಲ್ಲಿ ಅರ್ಹರೆಂದು ಬಿಬಿಎಂಪಿ ಪರಿಗಣಿಸಿದೆ. ‘ಈ ಯಂತ್ರಗಳ ಪೂರೈಕೆ ದಾರ ಸಂಸ್ಥೆ ಎಂದು ಗುರುತಿಸಲಾದ ಕ್ವಾಲಿಟಿ ಎನ್ವಿರೊ ಎಂಜಿನಿಯರ್ಸ್‌ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅದರ ಪ್ರತಿಗಳನ್ನು ಸಲ್ಲಿಸಿದ್ದಾರೆ ಎಂದು ಬಿಬಿಎಂಪಿಯು ಸ್ಪಷ್ಟನೆ ನೀಡಿದೆ. ಆದರೆ ಈ ದಾಖಲೆಗಳು ಇ–ಪ್ರೊಕ್ಯೂರ್‌ಮೆಂಟ್‌ನಲ್ಲಿ ಲಭ್ಯವಿಲ್ಲ. ಗುತ್ತಿಗೆದಾರರು ಈ ಯಂತ್ರಗಳ ಅಧಿಕೃತ ಮಾರಾಟಗಾರ ಹೌದಾದರೆ ಅವರು ಯಾವುದಾದರೂ ಸಂಸ್ಥೆ/ ವ್ಯಕ್ತಿಗೆ ಎಷ್ಟು ಯಂತ್ರಗಳನ್ನು ಪೂರೈಕೆ ಮಾಡಿದ್ದಾರೆ ಎಂಬುದು ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT