ಮಂಗಳವಾರ, ಮೇ 11, 2021
19 °C
ಕೋವಿಡ್‌ ಪರಿಹಾರ ಕ್ರಮಗಳ ಸಿದ್ಧತೆ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ

ಲಸಿಕೆ ವಿತರಣೆ ಹೆಚ್ಚಿಸಲು ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಗರದಲ್ಲಿ ಕೋವಿಡ್‌ ಲಸಿಕೆ ವಿತರಿಸಲು ಸುಮಾರು 500 ಸ್ಥಳಗಳಿವೆ. ಈ ಪ್ರತಿ ಸ್ಥಳದಲ್ಲಿ ಕನಿಷ್ಠ 100ರಿಂದ 150 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಗೌರವ್ ಗುಪ್ತ ಹೇಳಿದರು.

ನಗರದ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿನ ಸಿದ್ಧತೆ, ಲಸಿಕೆ ವಿತರಣೆ ಕೇಂದ್ರ ಹಾಗೂ ಕೋವಿಡ್‌ ಪರೀಕ್ಷಾ ಕೇಂದ್ರಗಳ ಕಾರ್ಯಗಳನ್ನು ಅವರು ಶನಿವಾರ ಪರಿಶೀಲಿಸಿದರು.

‘ಈಗಿರುವ ಲಸಿಕೆ ಕೇಂದ್ರಗಳ ಜೊತೆಗೆ ಅಗತ್ಯವಿರುವ ಕಡೆ ಹೆಚ್ಚುವರಿಯಾಗಿ ಹೊಸ ಕೇಂದ್ರ ತೆರೆಯಲಾಗುವುದು. ಲಸಿಕೆ ಪಡೆಯುವವರಿಗೆ ಅವಶ್ಯಕವಿರುವ ಕಡೆ ವಾಹನಗಳ ವ್ಯವಸ್ಥೆಯನ್ನು ಆಯಾ ವಲಯ ಆಯುಕ್ತರ ಮಟ್ಟದಲ್ಲಿ ಒದಗಿಸಲಾಗುವುದು’ ಎಂದರು.

ಔಷಧಾಲಯಕ್ಕೆ ಭೇಟಿ:

ನಗರದ ಆಡುಗೋಡಿ ಔಷಧಾಲಯವನ್ನು ಮುಖ್ಯ ಆಯುಕ್ತರು ಪರಿಶೀಲಿಸಿದರು. ಈ ವೇಳೆ ಲಸಿಕೆ ಪಡೆಯಲು ಬಂದವರನ್ನು  ಮಾತನಾಡಿಸಿ ಲಸಿಕೆ ನೀಡುವ ವ್ಯವಸ್ಥೆ ಬಗ್ಗೆ ಹಾಗೂ ಪಡೆದ ನಂತರದ ಅನುಭವಗಳ ಬಗ್ಗೆ ಮಾಹಿತಿ ಪಡೆದರು.

ಆರೈಕೆ ಕೇಂದ್ರಗಳ ಸ್ಥಾಪನೆ ಶೀಘ್ರ:

‘ಬಾಷ್ ಸಂಸ್ಥೆಯು ಸಹಭಾಗಿತ್ವದಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದನ್ನು ಪಾಲಿಕೆ ತೆಕ್ಕೆಗೆ ಪಡೆಯಲಿದ್ದೇವೆ. ಈ ಸಂಬಂಧ ಬಾಷ್ ಸಂಸ್ಥೆ ಹಾಗೂ ಪಾಲಿಕೆ ಜೊತೆ ಚರ್ಚೆ ನಡೆಯುತ್ತಿದೆ. ಕೋವಿಡ್ ಆರೈಕೆ ಕೇಂದ್ರ ಪ್ರಾರಂಭಿಸಲು ಇನ್ನೆರಡು ದಿಮಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯ ಆಯುಕ್ತರು ತಿಳಿಸಿದರು.

‘ಪಾಲಿಕೆಯ ಎಲ್ಲ ವಲಯಗಳಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಎರಡು ಅಥವಾ ಮೂರು ಕೋವಿಡ್ ಆರೈಕೆ ಕೇಂದ್ರಗಳನ್ನು ಶೀಘ್ರವಾಗಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಮನೆಯಲ್ಲಿ ಪ್ರತ್ಯೇಕವಾಗಿರಲು ಸಾಧ್ಯವಾಗದಂತಹ ಸೋಂಕಿತ ವ್ಯಕ್ತಿಗಳನ್ನು ಆರೈಕೆ ಕೇಂದ್ರಗಳಲ್ಲಿರಿಸಿ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುವುದು’ ಎಂದು ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು