ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್‌ ವೈದ್ಯಕೀಯ ಪರಿಹಾರ ನಿಧಿಗೆ ₹15 ಕೋಟಿ

ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಕಾಂಗ್ರೆಸ್‌ 14 ಸದಸ್ಯರ ಅನರ್ಹತೆ ವಿಚಾರ ಪ್ರಸ್ತಾಪ– ತಾರಕಕ್ಕೇರಿದ ವಾಕ್ಸಮರ
Last Updated 31 ಡಿಸೆಂಬರ್ 2019, 21:30 IST
ಅಕ್ಷರ ಗಾತ್ರ

ಬೆಂಗಳೂರು:ಮೇಯರ್ ವೈದ್ಯಕೀಯ ಪರಿಹಾರ ನಿಧಿಗೆ ₹15 ಕೋಟಿ ಮಂಜೂರು ಮಾಡುವುದಕ್ಕೆ, ಹಿರಿಯ ಕವಿ ನಿಸಾರ್‌ ಅಹಮದ್ ಹಾಗೂ ಅವರ ಪುತ್ರ ನವೀದ್ ನಿಸಾರ್‌ ಅವರ ಚಿಕಿತ್ಸೆಗೆ ಪಾಲಿಕೆಯಿಂದ ₹20 ಲಕ್ಷ ಆರ್ಥಿಕ ನೆರವು ನೀಡುವುದಕ್ಕೆ ಇಲ್ಲಿ ಮಂಗಳವಾರ ನಡೆದ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

‘ಮೇಯರ್‌ ವೈದ್ಯಕೀಯ ನೆರವು ನಿಧಿಯಿಂದ ಪರಿಹಾರ ಕೋರಿ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅನುದಾನದ ಕೊರತೆ ಇರುವುದರಿಂದ ಇಂತಹ ಮನವಿಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಮಂಜೂರಾದ ₹15 ಕೋಟಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಮೇರೆಗೆ ಪರಿಹಾರ ನೀಡ ಲಾಗುವುದು’ ಎಂದುಸಭೆಯ ನಂತರ ಮೇಯರ್‌ ಎಂ. ಗೌತಮ್‍ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ನಾವೇಕೆ ಅನರ್ಹರಾಗಬೇಕು?: ಕಾಂಗ್ರೆಸ್‌ 14 ಮಂದಿಯನ್ನು ಅನರ್ಹ ಗೊಳಿಸುವಂತೆ ವಿರೋಧ ಪಕ್ಷವು ಆಯುಕ್ತರಿಗೆ ದೂರು ಸಲ್ಲಿಸಿದ ವಿಚಾರವೂ ಪ್ರಸ್ತಾಪವಾಯಿತು.

‘ನಾವು ಕಾಂಗ್ರೆಸ್‌ ಪಕ್ಷವನ್ನು ತೊರೆದಿಲ್ಲ. ಪಕ್ಷ ವಿರೋಧಿ ಚಟುವಟಿಕೆಯನ್ನೂ ಮಾಡಿಲ್ಲ. ಆದರೂ, ನಮ್ಮನ್ನು ಅನರ್ಹಗೊಳಿಸಿ ಎಂದು ಪ್ರತಿಪಕ್ಷ ನಾಯಕ ಅಬ್ದುಲ್‌ ವಾಜಿದ್‌ ದೂರು ಕೊಡುತ್ತಾರೆ. ಇದು ಎಷ್ಟು ಸರಿ’ ಎಂದು ಸದಸ್ಯ ವೇಲು ನಾಯ್ಕರ್‌ ಹಾಗೂ ಜಿ.ಕೆ. ವೆಂಕಟೇಶ್‌ ಪ್ರಶ್ನಿಸಿದರು.

‘ಬಿಜೆಪಿಯವರನ್ನು ಹೊಗಳಿದ್ದು ತಪ್ಪೇ, ಅದು ಪಕ್ಷ ವಿರೋಧಿ ಚಟುವಟಿ ಕೆಯೇ’ ಎಂದರು. ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ‘ಈ ಬಗ್ಗೆ ಎಲ್ಲ ವಿಷಯ ತಿಳಿಸುತ್ತೇನೆ ಅವಕಾಶ ಕೊಡುತ್ತೀರೇನು’ ಎಂದು ಮೇಯರ್‌ಗೆ ಕೋರಿದರು.

‘ಶೋಕಾಚರಣೆ ಹಿನ್ನೆಲೆಯಲ್ಲಿ ಯಾವುದೇ ಚರ್ಚೆಗೆ ಅವಕಾಶವಿಲ್ಲ’ ಎಂದು ಮೇಯರ್‌ ಪ್ರತಿಕ್ರಿಯಿಸಿದರು.

ಸಂತಾಪ:ದೈವಾಧೀನರಾದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಬಿಬಿಎಂಪಿ ಮಾಜಿ ಸದಸ್ಯೆ ನಾಗರತ್ನ ನಾಗರಾಜ್‌ ಅವರಿಗೆ ಸಂತಾಪ ಸೂಚಿಸಲಾಯಿತು.

‘ಎಲ್ಲರಿಂದ, ಎಲ್ಲರ ಮೇಲೆ ಒತ್ತಡ’
‘ನಗರ ವ್ಯಾಪ್ತಿಯಲ್ಲಿ ಹೋರ್ಡಿಂಗ್‌ ಹಾಗೂ ಎಲ್‌ಇಡಿ ಪರದೆ ಅಳವಡಿಕೆಯ ಪರವಾಗಿ ಕೆಲವರು, ವಿರುದ್ಧವಾಗಿ ಕೆಲವರು ರಾಜ್ಯ ಸರ್ಕಾರ, ಮೇಯರ್‌ ಹಾಗೂ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ನಾನು ಹೋರ್ಡಿಂಗ್‌ ಅಳವ ಡಿಕೆಯ ಪರವಾಗಿಯೂ ಇಲ್ಲ. ವಿರುದ್ಧವಾಗಿಯೂ ಇಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

‘ಬಿಬಿಎಂಪಿಗೆ ಜಾಹೀರಾತು ಅವಶ್ಯ ಎಂದ ಮಾತ್ರಕ್ಕೆ, ಹೋರ್ಡಿಂಗ್‌ ಬೇಕು ಎಂದರ್ಥವಲ್ಲ. ಜಾಹೀರಾತು ನೀತಿ ಕುರಿತು ಸರ್ಕಾರ ರೂಪಿಸಿದ ನಿಯಮಗಳನ್ನು ಅನುಷ್ಠಾನಕ್ಕೆ ತರುವುದು ಮಾತ್ರ ನಮ್ಮ ಕೆಲಸ. ಯಾವ ವಲಯದಲ್ಲಿ ಜಾಹೀರಾತು, ಹೋರ್ಡಿಂಗ್‌ ಹಾಕಬೇಕು. ಎಲ್ಲಿ ಹಾಕಬಾರದು ಎಂಬುದನ್ನು ನಂತರ ಬಿಬಿಎಂಪಿ ತೀರ್ಮಾನ ಮಾಡಲಿದೆ’ ಎಂದರು.

‘ಕಸ ಸಂಗ್ರಹಕ್ಕೆ ಟಿಪ್ಪರ್‌ನಲ್ಲಿ 2 ಭಾಗ’
‘ಹಸಿ ಮತ್ತು ಒಣ ಕಸ ಎಂದು ವಿಂಗಡಿಸಿಕೊಟ್ಟರೂ ಕಸ ಸಂಗ್ರಹಿಸುವವರು ಅದನ್ನು ಟಿಪ್ಪರ್‌ನಲ್ಲಿ ಒಟ್ಟಿಗೆ ತುಂಬಿಸಿಕೊಂಡು ಹೋಗುತ್ತಾರೆ. ಇದರಿಂದ ಕಸ ವಿಂಗಡಿಸಿಕೊಟ್ಟರೂ ಪ್ರಯೋಜನವಿಲ್ಲದಂತಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇಯರ್, ‘ಈ ಸಮಸ್ಯೆ ಗಮನಕ್ಕೆ ಬಂದಿದೆ. ಹಸಿ ಮತ್ತು ಒಣ ಕಸ ಸಂಗ್ರಹಿಸಲು ಪ್ರತ್ಯೇಕ ಟಿಪ್ಪರ್‌ಗಳನ್ನು ಬಳಸಿದರೆ ಸಮಯ ಮತ್ತು ಹಣ ವ್ಯರ್ಥವಾಗುತ್ತದೆ. ಹೀಗಾಗಿ, ಒಂದೇ ಟಿಪ್ಪರ್‌ನಲ್ಲಿ ಎರಡು ಕಂಪಾರ್ಟ್‌ಮೆಂಟ್‌ಗಳನ್ನು ಮಾಡಿ, ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ಅವರು ಹೇಳಿದರು.

‘ಬಿಬಿಎಂಪಿಯ ಐದು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು. ನನ್ನ (ಮೇಯರ್‌), ಉಪ ಮೇಯರ್ ರಾಮಮೋಹನ ರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌ ಮತ್ತು ವಿರೋಧ ಪಕ್ಷಗಳ ನಾಯಕರು ಪ್ರತಿನಿಧಿಸುವ ವಾರ್ಡ್‌ಗಳಲ್ಲಿ ಹಾಗೂ ಉಪಮುಖ್ಯಮಂತ್ರಿ ನೆಲೆಸಿರುವ ವಾರ್ಡ್‌ನಲ್ಲಿ ಈ ವ್ಯವಸ್ಥೆಯನ್ನು ಮೊದಲು ಜಾರಿಗೆ ತರಲಾಗುವುದು’ ಎಂದು ಅವರು ತಿಳಿಸಿದರು.

ಕಸ ಹುಡುಕುವ ಸ್ಪರ್ಧೆ
ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ ಹಾಗೂ ಚರ್ಚ್‌ಸ್ಟ್ರೀಟ್‌ನಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಕಸ ಹುಡುಕುವ ಸ್ಪರ್ಧೆಯನ್ನು ಬಿಬಿಎಂಪಿ ಆಯೋಜಿಸಿದೆ. ಪಾಲಿಕೆ ವಿಶೇಷ ಆಯುಕ್ತ (ಘನತ್ಯಾಜ್ಯ) ರಂದೀಪ್‌ ನೇತೃತ್ವದಲ್ಲಿ ಈ ಸ್ಪರ್ಧೆ ನಡೆಯಲಿದೆ.ಸಾರ್ವಜನಿಕರಿಗೆ ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ತ್ಯಾಜ್ಯ ಹುಡುಕುವ ಅವಕಾಶವಿದ್ದು, ಹೆಚ್ಚು ತ್ಯಾಜ್ಯ ಹುಡುಕಿದವರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ಪಾಲಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT