ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದಲ್ಲಿ ಬಿಬಿಎಂಪಿ ಚುನಾವಣೆ: ಇನ್ನೂ ಸಿದ್ಧವಾಗಿಲ್ಲ ಮೀಸಲಾತಿ ಪಟ್ಟಿ

2015ರ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿ ಇಂದಿಗೆ 5 ವರ್ಷ
Last Updated 2 ಆಗಸ್ಟ್ 2020, 21:57 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 2015ನೇ ಸಾಲಿನ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿ ಇಂದಿಗೆ ಸರಿಯಾಗಿ 5 ವರ್ಷಗಳು ತುಂಬಿವೆ. 2020ರ ಸೆ. 10ರ ಒಳಗೆ ಚುನಾವಣೆ ನಡೆದು ಹೊಸ ಆಡಳಿತ ಅಸ್ತಿತ್ವಕ್ಕೆ ಬರಬೇಕಿದೆ. ಆದರೆ, ವಾರ್ಡ್‌ವಾರು ಮೀಸಲಾತಿ ಪಟ್ಟಿ ಇನ್ನೂ ಸಿದ್ಧವಾಗಿಲ್ಲ. ಹಾಗಾಗಿ ನಿಗದಿತ ಅವಧಿಗೆ ಮುನ್ನ ಚುನಾವಣೆ ನಡೆಯುವುದು ಅನುಮಾನ.

ಬಿಬಿಎಂಪಿ ಚುನಾವಣೆಗೆ 2015ರ ಆ.3ರಂದು ಅಧಿಸೂಚನೆ ಪ್ರಕಟವಾಗಿತ್ತು. ನಾಮಪತ್ರ ಸಲ್ಲಿಕೆಗೆ ಆ. 10 ಕೊನೆಯ ದಿನವಾಗಿತ್ತು. ಆ.22ರಂದು ಚುನಾವಣೆ ನಡೆದಿತ್ತು. ಆ. 25ರಂದು ಫಲಿತಾಂಶ ಪ್ರಕಟವಾಗಿತ್ತು.

‘2011ರ ಜನಗಣತಿ ಆಧಾರದಲ್ಲಿ ರಚಿಸಿರುವ ವಾರ್ಡ್‌ ಮರುವಿಂಗಡಣೆಯ ವಿವರಗಳನ್ನು ಮಾತ್ರ ಸರ್ಕಾರ ನೀಡಿದೆ. ವಾರ್ಡ್‌ವಾರು ಮೀಸಲಾತಿ ಪಟ್ಟಿ ಇನ್ನೂ ತಲುಪಿಲ್ಲ. ಮೀಸಲಾತಿ ಪಟ್ಟಿಯನ್ನು ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದ್ದೇವೆ’ ಎಂದು ರಾಜ್ಯ ಚುನಾವಣಾ ಆಯುಕ್ತ ಡಾ.ಬಿ.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬಿರುವುದರಿಂದ ಸದ್ಯಕ್ಕೆ ಚುನಾವಣೆ ನಡೆಸುವುದು ಸೂಕ್ತವಲ್ಲ. ಅದರ ಬದಲು ಪಾಲಿಕೆ ಸದಸ್ಯರ ಅವಧಿಯನ್ನು ವಿಸ್ತರಿಸಬೇಕು ಎಂದು ಪಾಲಿಕೆ ಸದಸ್ಯರು ಒತ್ತಾಯಿಸುತ್ತಿದ್ದಾರೆ.

‘ಪಾಲಿಕೆ ಸದಸ್ಯರ ಅಧಿಕಾರದ ಅವಧಿಯನ್ನು ಮೂರು ತಿಂಗಳು ವಿಸ್ತರಿಸಿದರೆ ಕೊರೊನಾ ಸೋಂಕು ನಿಯಂತ್ರಣ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯ. ಕೊರೊನಾ ತಂದೊಡ್ಡಿರುವ ಸಮಸ್ಯೆಗಳನ್ನು ಬಗೆಹರಿಸಲು ಪಾಲಿಕೆ ಸದಸ್ಯರು ಜನರು ಮತ್ತು ಅಧಿಕಾರಿಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಬಲ್ಲರು. 1982ರಲ್ಲಿ ಒಮ್ಮೆ ಚುನಾಯಿತ ಸದಸ್ಯರ ಅವಧಿಯನ್ನು ವಿಸ್ತರಿಸಲಾಗಿತ್ತು. ಮೂರು ತಿಂಗಳವರೆಗಾದರೂ ಸದಸ್ಯರ ಅವಧಿ ವಿಸ್ತರಿಸಬೇಕು ಎಂಬುದು ನಮ್ಮ ಕೋರಿಕೆ. ಮೇಯರ್‌ ಎಂ.ಗೌತಮ್‌ ಕುಮಾರ್‌ ಜೊತೆ ಸಮಾಲೋಚನೆ ನಡೆಸಿ, ಈ ಕುರಿತು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯುತ್ತೇವೆ’ ಎಂದು ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯಕ್ಕಂತೂ ಕೊರೊನಾ ಸೋಂಕನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆಯನ್ನು ನಡೆಸುವುದು ಕಷ್ಟಸಾಧ್ಯ. ಕೋವಿಡ್‌ ಕಾರಣಕ್ಕೆ ಇತ್ತೀಚೆಗೆ ವಿಧಾನ ಪರಿಷತ್‌ ಚುನಾವಣೆಯನ್ನೂ ಮುಂದೂಡಲಾಗಿದೆ. ಆದರೆ, ಈ ಬಗ್ಗೆ ಸರ್ಕಾರವೇ ನಿರ್ಧರಿಸಬೇಕು’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಕೋವಿಡ್‌ನಂತಹ ಹಬ್ಬುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವುದು ಸ್ವಲ್ಪ ಕಷ್ಟವೇ. ಆದರೆ, ಚುನಾವಣೆ ಮುಂದೂಡುವಂತೆ ಸರ್ಕಾರದಿಂದ ಯಾವುದೇ ಕೋರಿಕೆಗಳು ಬಂದಿಲ್ಲ. ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ಬಗ್ಗೆ ಚರ್ಚಿಸುತ್ತೇನೆ’ ಎಂದು ರಾಜ್ಯ ಚುನಾವಣಾ ಆಯುಕ್ತರು ತಿಳಿಸಿದರು.

ಹೈಕೋರ್ಟ್‌ ಮೊರೆ ಹೋಗಿದೆ ಆಯೋಗ

ಬಿಬಿಎಂಪಿಯ ಅಧಿಕಾರದ ಅವಧಿ ಮುಕ್ತಾಯವಾಗುವ ಒಂದು ವರ್ಷ ಮುನ್ನವೇ ವಾರ್ಡ್‌ವಾರು ಮೀಸಲಾತಿ ಪಟ್ಟಿ ಹಾಗೂ ವಾರ್ಡ್‌ ಮರುವಿಂಗಡಣೆ ವಿವರಗಳನ್ನು ರಾಜ್ಯ ಚುನಾವಣಾ ಆಯೋಗಕ್ಕೆ ನಗರಾಭಿವೃದ್ಧಿ ಇಲಾಖೆ ಒದಗಿಸಬೇಕು. ಆಯೋಗವು ಅನೇಕ ಬಾರಿ ಪತ್ರ ಬರೆದರೂ ಇಲಾಖೆ ಈ ವಿವರಗಳನ್ನು 2019ರ ಸೆಪ್ಟೆಂಬರ್‌ ಒಳಗೆ ನೀಡಿರಲಿಲ್ಲ. ವಾರ್ಡ್ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ ಮೊರೆ ಹೋಗಿದೆ. ಜೂನ್‌ ಅಂತ್ಯದೊಳಗೆ ವಾರ್ಡ್‌ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಿ ಮೀಸಲಾತಿ ‍ಪಟ್ಟಿಯನ್ನು ಆಯೋಗಕ್ಕೆ ಒದಗಿಸುವುದಾಗಿ ಸರ್ಕಾರದ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದರು.

ಸಿದ್ಧತೆ ಆರಂಭಿಸಿದ ಆಯೋಗ

ಮೀಸಲಾತಿ ಪಟ್ಟಿ ಕೈಸೇರಿದ ತಕ್ಷಣವೇ ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. 'ಈಗಾಗಲೇ ಬಿಬಿಎಂಪಿಯ ಮೂವರು ವಿಶೇಷ ಆಯುಕ್ತರನ್ನು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರನ್ನು ಜಿಲ್ಲಾ ಚುನಾವಣಾಧಿಕಾರಿಗಳನ್ನಾಗಿ ನೇಮಿಸಿ ಆದೇಶ ಮಾಡಲಾಗಿದೆ. ಹೊಸ ವಾರ್ಡ್‌ಗಳಿಗೆ ಅನುಗುಣವಾಗಿ ಮತದಾರರ ಪಟ್ಟಿ ಸಿದ್ಧಪಡಿಸುವ ಸಲುವಾಗಿ ಮತದಾರರ ನೋಂದಣಾಧಿಕಾರಿ (ಇಆರ್‌ಒ) ಹಾಗೂ ಮತದಾರರಸಹಾಯಕ ನೋಂದಣಾಧಿಕಾರಿಗಳ (ಎಇಆರ್‌ಒ) ನೇಮಕ ಮಾಡಲಾಗಿದೆ’ ಎಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಭಾರತಿ ‘ಪ್ರಜಾವಾಣಿ’ಗೆ ತಿಳಿಸಿದರು.

* ಕೋವಿಡ್‌ ನಿಯಂತ್ರಣಕ್ಕೆ ತಮ್ಮಿಂದಾದ ಕೊಡುಗೆ ನೀಡುವ ಉದ್ದೇಶದಿಂದ ಬಿಬಿಎಂಪಿ ಸದಸ್ಯರು ಅಧಿಕಾರಾವಧಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಪ್ರಮುಖರ ಜೊತೆ ಚರ್ಚಿಸಿ ಪಾಲಿಕೆಯ ನಿಲುವನ್ನು ಸರ್ಕಾರಕ್ಕೆ ತಿಳಿಸುತ್ತೇವೆ

-ಎಂ.ಗೌತಮ್‌ ಕುಮಾರ್‌, ಮೇಯರ್‌

* ಬಿಬಿಎಂಪಿ ಚುನಾವಣೆ ನಡೆಸಲು ಆಯೋಗ ಸನ್ನದ್ಧವಾಗಿದೆ. ಇಡೀ ಪ್ರಕ್ರಿಯೆಯನ್ನು ಸರ್ಕಾರದ ಆಡಳಿತ ಯಂತ್ರವೇ ನಡೆಸಬೇಕಿದೆ. ಹಾಗಾಗಿ ಸರ್ಕಾರದ ನಿಲುವು ಕೂಡಾ ಮುಖ್ಯ. ಆದರೆ, ಇದುವರೆಗೂ ಸರ್ಕಾರ ಚುನಾವಣೆ ಮುಂದೂಡುವಂತೆ ನಮ್ಮನ್ನು ಕೋರಿಲ್ಲ

- ಡಾ.ಬಿ.ಬಸವರಾಜು, ರಾಜ್ಯ ಚುನಾವಣಾ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT