ಶನಿವಾರ, ನವೆಂಬರ್ 28, 2020
25 °C

ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿ ಮುಚ್ಚಲು 31 ತಂಡ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ 31 ತಂಡಗಳನ್ನು ರಚಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಪಾಲಿಕೆ ಈ ಕ್ರಮ ಕೈಗೊಂಡಿದೆ.

‘ಮುಖ್ಯ ರಸ್ತೆಗಳಲ್ಲಿನ ಗುಂಡಿ ಮುಚ್ಚಲು 10 ತಂಡಗಳು, ಕೇಂದ್ರ ಪ್ರದೇಶದ ಮೂರು ವಲಯಗಳಲ್ಲಿನ ರಸ್ತೆ ಗುಂಡಿ ಮುಚ್ಚಲು ಆರು ತಂಡಗಳು ಹಾಗೂ ಹೊರ ಪ್ರದೇಶದ ಐದು ವಲಯಗಳಲ್ಲಿ ತಲಾ ಮೂರು ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ 25 ಕಾರ್ಮಿಕರು ಇರುತ್ತಾರೆ. ಪಾಲಿಕೆಯ ಡಾಂಬರು ಮಿಶ್ರಣ ಘಟಕದಿಂದ ರಸ್ತೆ ಗುಂಡಿ ಮುಚ್ಚಲೆಂದೇ ನಿತ್ಯ 26 ಲೋಡ್‌ಗಳಷ್ಟು ಬಿಸಿ ಡಾಂಬರು ಮಿಶ್ರಣ ಪೂರೈಸಲು ಸೂಚಿಸಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಹೊರ ವಲಯದ ವಾರ್ಡ್‌ಗಳಲ್ಲಿ ಜಲಮಂಡಳಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಕೊಳವೆ ಅಳವಡಿಸಲು ರಸ್ತೆಗಳನ್ನು ಅಗೆದಿದೆ. ಈ ರಸ್ತೆ ದುರಸ್ತಿಯ ವೆಚ್ಚವನ್ನು ಜಲಮಂಡಳಿ ಬಿಡುಗಡೆ ಮಾಡಿಲ್ಲ. ಇದಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂದು ಅಂದಾಜು ಮಾಡುವಂತೆ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದೇನೆ.  ಈ ರಸ್ತೆಗುಂಡಿಗಳನ್ನು ಹೊರತಾಗಿ ಉಳಿದೆಲ್ಲ ಗುಂಡಿಗಳನ್ನು ಇನ್ನು 15 ದಿನಗಳ ಒಳಗೆ  ಮುಚ್ಚಲಾಗುತ್ತದೆ’ ಎಂದರು. 

‘ನಗರದಲ್ಲಿ ನಿತ್ಯ 1,400 ಟನ್‌ಗಳಷ್ಟು ಸಗಟು ಕಸ ಸಂಗ್ರಹವಾಗುತ್ತದೆ. ಈ ಕಸವನ್ನು ಕೂಡಾ ಒಣ ಕಸ ಹಾಗೂ ಹಸಿ ಕಸ ಎಂದು ವಿಂಗಡಿಸಿ ಬಳಿಕವೇ ಕಸ ವಿಲೇವಾರಿ ಘಟಕಗಳಿಗೆ ಕಳುಹಿಸಬೇಕು. ಇವುಗಳನ್ನು ಮಿಶ್ರಕಸದ ರೂಪದಲ್ಲಿ ಕ್ವಾರಿಗಳಲ್ಲಿ ವಿಲೇ ಮಾಡಬಾರದು ಎಂದು ರಾಜ್ಯ ಪರಿಸರ ಮಾಲಿನ್ಯ  ನಿಯಂತ್ರಣ ಮಂಡಳಿ ಸೂಚನೆ ನೀಡಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು