ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ: ಎಲ್ಲ ಸ್ವತ್ತುಗಳಿಗೆ ಖಾತಾ- ಫೆ.27ರಿಂದ ಆಂದೋಲನ

ಆಸ್ತಿಗಳ ದಾಖಲೆ ಪ್ರಕಾರ ‘ಎ’, ‘ಬಿ’ ವಹಿಗಳಲ್ಲಿ ದಾಖಲು, ಅವಧಿಯೊಳಗೆ ಅನುಮೋದನೆ
Last Updated 24 ಫೆಬ್ರುವರಿ 2023, 16:52 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಸ್ವತ್ತುಗಳನ್ನು ಪಾಲಿಕೆ ವಹಿಗಳಲ್ಲಿ ದಾಖಲಿಸಿಕೊಂಡು ತೆರಿಗೆ ವ್ಯಾಪ್ತಿಗೆ ತರಲು ‘ಖಾತಾ ಆಂದೋಲನ’ವನ್ನು ಫೆ.27ರಿಂದ ಆಯೋಜಿಸಲಾಗುತ್ತಿದೆ.

‘ಖಾತಾ ಆಂದೋಲನ’ದಲ್ಲಿ ನಾಗರಿಕರಿಗೆ ಸಂಪೂರ್ಣ ಮಾಹಿತಿ ನೀಡಿ, ಅರ್ಹರಿಗೆ ‘ಎ’ ಅಥವಾ ‘ಬಿ’ ಖಾತಾಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ಎಲ್ಲ ವಲಯಗಳ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿ ‘ಹೆಲ್ಪ್‌ ಡೆಸ್ಕ್‌’ ಸ್ಥಾಪಿಸಲಾಗುತ್ತಿದ್ದು, ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸಿಕೊಂಡು ಮಾಲೀಕರು ಅರ್ಜಿ ಸಲ್ಲಿಸಬಹುದು ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ. ಆರ್‌.ಎಲ್‌. ದೀಪಕ್‌ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

‘ಎ’ ವಹಿಯಲ್ಲಿ (ಎ ಖಾತೆ) ನೋಂದಾಯಿಸಲು ನೋಂದಣಿ ಶುಲ್ಕದ ಶೇ 2ರಷ್ಟು ಅಥವಾ ಕನಿಷ್ಠ ₹500 (ಎರಡರಲ್ಲಿ ಹೆಚ್ಚಿರುವ ಮೊತ್ತ) ಪಾವತಿಸಬೇಕು. ‘ಬಿ’ ವಹಿಯಲ್ಲಿ (ಬಿ ಖಾತೆ) ನಮೂದಿಸಲು ಯಾವುದೇ ಶುಲ್ಕ ಇಲ್ಲ ಎಂದು ಹೇಳಿದರು.

ನಾಲ್ಕು ಸಾವಿರ ಚದರ ಅಡಿ ವಿಸ್ತೀರ್ಣದ ಸ್ವತ್ತಿಗೆ ಕಂದಾಯ ಅಧಿಕಾರಿ ಏಳು ದಿನಗಳಲ್ಲಿ ಖಾತಾ ನೀಡಬೇಕು. 4 ಸಾವಿರ ಚ.ಅಡಿಯಿಂದ 6 ಸಾವಿರ ಚ. ಅಡಿವರೆಗೆ ವಲಯ ಉಪ ಆಯುಕ್ತರು 10 ದಿನ, 6 ಸಾವಿರ ಚ. ಅಡಿಗೂ ಮೇಲ್ಪಟ್ಟ ಆಸ್ತಿಗಳಿಗೆ ವಲಯ ಜಂಟಿ ಆಯುಕ್ತರು 15 ದಿನಗಳಲ್ಲಿ ಖಾತಾ ಒದಗಿಸಲು ಗಡುವು ನಿಗದಿ ಮಾಡಲಾಗಿದೆ. ನಾಗರಿಕರು 1533 ಅಥವಾ 080–2222 1188ಗೆ ಕರೆ ಮಾಡಿ ಅಥವಾ https://bbmp.gov.in/ ನಲ್ಲಿ ಅರ್ಜಿಗಳಿಗೆ ಸಂಬಂಧಿಸಿದಂತೆ ದೂರು ನೀಡಬಹುದು ಎಂದರು.

ಶೇ 25ರಷ್ಟು ಹೆಚ್ಚು ತೆರಿಗೆ ಸಂಗ್ರಹ: ‘ಕಳೆದ ವರ್ಷ ಮಾರ್ಚ್‌ ಅಂತ್ಯಕ್ಕೆ ₹3 ಸಾವಿರ ಕೋಟಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲಾಗಿತ್ತು. ಈ ಬಾರಿ ಫೆ.23ರ ವೇಳೆಗೆ ₹3,100 ಕೋಟಿ ಸಂಗ್ರಹಿಸಿ ದಾಖಲೆ ಮಾಡಲಾಗಿದೆ. ಬೆಂಗಳೂರಿನ ಆಸ್ತಿ ತೆರಿಗೆದಾರರಿಗೆ ಧನ್ಯವಾದ ತಿಳಿಸುತ್ತೇವೆ. ಇನ್ನುಳಿದ ಒಂದು ತಿಂಗಳಲ್ಲಿ ನಮ್ಮ ಗುರಿಯಾಗಿರುವ ₹4,100 ಕೋಟಿಯ ಸಮೀಪದ ಸಂಗ್ರಹ ಮಾಡಲಾಗುತ್ತದೆ’ ಎಂದು ದೀಪಕ್‌ ಹೇಳಿದರು.

‘ಈ ವರ್ಷ ಆಸ್ತಿ ತೆರಿಗೆ ಪರಿಷ್ಕರಿಸುವ ಯೋಜನೆ ಇಲ್ಲ. ಮುಂದಿನ ವರ್ಷಗಳಲ್ಲಿ ‘ಕ್ಯಾಪಿಟಲ್‌ ವ್ಯಾಲ್ಯೂ’ ಆಧಾರದಲ್ಲಿ ಆಸ್ತಿ ತೆರಿಗೆ ನಿಗದಿಪಡಿಸುವ ಬಗ್ಗೆ ಆಲೋಚನೆ ನಡೆದಿದೆ’ ಎಂದರು.

‘ಖಾತಾ ಆಂದೋಲನದ ಮೂಲಕ ಸುಮಾರು ₹150 ಕೋಟಿ ಹೆಚ್ಚು ಸಂಗ್ರಹವಾಗುವ ನಿರೀಕ್ಷೆ ಇದೆ. ಇನ್ನು, ಬೆಸ್ಕಾಂ ಬಿಲ್‌ ಆಧಾರದಲ್ಲಿ ವಾಣಿಜ್ಯ ಸಂಪರ್ಕ ಪಡೆದು, ವಸತಿ ಆಸ್ತಿ ತೆರಿಗೆ ಪಾವತಿಸುತ್ತಿರುವ 24 ಸಾವಿರ ಆಸ್ತಿಗಳನ್ನು ಗುರುತಿಸಲಾಗಿದ್ದು, ಶೇ 30ರಷ್ಟು ಆಸ್ತಿಗಳಿಗೆ ನೋಟಿಸ್‌ ನೀಡಲಾಗಿದೆ. ಇದೆಲ್ಲದರಿಂದ ನಿಖರ ತೆರಿಗೆ ಬಂದರೆ ಸುಮಾರು ₹150 ಕೋಟಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಾಗಲಿದೆ’ ಎಂದು ಮಾಹಿತಿ ನೀಡಿದರು.

ಖಾತೆ ಯಾರು ಪಡೆಯಬಹುದು?

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸ್ವತ್ತುಗಳ ವಿವರಗಳನ್ನು ಪಾಲಿಕೆಯಲ್ಲಿ ದಾಖಲಿಸಿಕೊಳ್ಳದೇ ಇರುವ ಸ್ವತ್ತಿನ ಮಾಲೀಕರು / ಅನುಭವದಾರರು ಕೆಳಕಂಡ ದಾಖಲೆಗಳಿದ್ದರೆ ಖಾತೆಗೆ ಅರ್ಜಿ ಸಲ್ಲಿಸಬಹುದು.

ಕಂದಾಯ ಪ್ರದೇಶ: ಸ್ವತ್ತಿನ ಹಕ್ಕು ನಿರೂಪಿಸುವ ದಾಖಲೆಗಳು. ಭೂಪರಿವರ್ತನೆ ಆದೇಶ ಮತ್ತು ಸರ್ವೆ ನಕ್ಷೆ, ಹಾಲಿ ಪಹಣಿ, ಸ್ವತ್ತಿನ ಋಣಭಾರ ರಾಹಿತ್ಯ ಪ್ರಮಾಣ ಪತ್ರ (ನಮೂನೆ-15), ಸ್ವತ್ತಿನ ವಿಸ್ತೀರ್ಣ ಮತ್ತು ಪ್ರದೇಶ ಗುರುತಿಸಿರುವ ಸ್ವಯಂ ದೃಢೀಕೃತ ನಕ್ಷೆ.

ಗ್ರಾಮಠಾಣ: ಸ್ವತ್ತಿನ ಹಕ್ಕು ನಿರೂಪಿಸುವ ದಾಖಲೆಗಳು, ಹಿಂದಿನ ಸ್ಥಳೀಯ ಸಂಸ್ಥೆಯು ವಿತರಿಸಿರುವ ನಮೂನೆ-9, ಸ್ವತ್ತಿನ ಋಣಭಾರ ರಾಹಿತ್ಯ ಪ್ರಮಾಣ ಪತ್ರ (ನಮೂನೆ-15), ತಹಶೀಲ್ದಾರ್ /ಭೂಮಾಪಕರು ನೀಡಿರುವ ಸರ್ವೆ ನಕ್ಷೆ, ವಿಸ್ತೀರ್ಣ ಮತ್ತು ಪ್ರದೇಶ ಗುರುತಿಸಿರುವ ಸ್ವಯಂ ದೃಢೀಕೃತ ನಕ್ಷೆ.

ಬಿಡಿಎ, ಕೆಎಚ್‌ಬಿ, ಇತರೆ ಪ್ರಾಧಿಕಾರದಿಂದ ಹಂಚಿಕೆಯಾಗಿರುವ ಸ್ವತ್ತು: ಹಂಚಿಕೆ ಮಾಡಿರುವ ಸ್ವಾಧೀನ ಪತ್ರ, ಗುತ್ತಿಗೆ ಕರಾರು ಪತ್ರ / ಕ್ರಯಪತ್ರ, ಸ್ವತ್ತಿನ ಋಣಭಾರ ರಾಹಿತ್ಯ ಪ್ರಮಾಣ ಪತ್ರ (ನಮೂನೆ-15).

ಬಿಡಿಎ ಅನುಮೋದಿತ ಬಡಾವಣೆ: ಸ್ವತ್ತಿನ ಹಕ್ಕು ನಿರೂಪಿಸುವ ದಾಖಲೆಗಳು (ಹಿಂದಿನ ಮತ್ತು ಪ್ರಸ್ತುತ ಮಾಲೀಕತ್ವ), ಅನುಮೋದಿತ ಬಡಾವಣೆ ನಕ್ಷೆ, ಬಿಡಿಎಯಿಂದ ಬಿಡುಗಡೆ ಆದೇಶ
ಸ್ವತ್ತಿನ ಋಣಭಾರ ರಾಹಿತ್ಯ ಪ್ರಮಾಣ ಪತ್ರ (ನಮೂನೆ-15), ವಿಸ್ತೀರ್ಣ ಮತ್ತು ಪ್ರದೇಶ ಗುರುತಿಸಿರುವ ಸ್ವಯಂ ದೃಢೀಕೃತ ನಕ್ಷೆ.

‌ಬಿಡಿಎ ರೀಕನ್ವೆ ಪ್ರದೇಶ: ಸ್ವತ್ತಿನ ಹಕ್ಕು ವರ್ಗಾವಣೆ ದಾಖಲೆಗಳು (ರಿಕನ್ವೆ ಕ್ರಯಪತ್ರ).
ಸ್ವತ್ತಿನ ಋಣಭಾರ ರಾಹಿತ್ಯ ಪ್ರಮಾಣ ಪತ್ರ (ನಮೂನೆ-15), ವಿಸ್ತೀರ್ಣ ಮತ್ತು ಪ್ರದೇಶ ಗುರುತಿಸಿರುವ ಸ್ವಯಂ ದೃಢೀಕೃತ ನಕ್ಷೆ. ಸುಧಾರಣಾ ವೆಚ್ಚ ಪಾವತಿಸಿರುವ ರಸೀದಿ ಪ್ರತಿ.

ಈ ಐದು ನಮೂನೆಯಲ್ಲಿರುವ ದಾಖಲೆಗಳು ಲಭ್ಯವಿಲ್ಲದೆ ಇದ್ದರೆ ಸ್ವತ್ತುಗಳ ವಿವರಗಳನ್ನು‘ಬಿ’ ವಹಿಯಲ್ಲಿ (ಬಿ ಖಾತೆ) ದಾಖಲಿಸಲಾಗುತ್ತದೆ.

ಫ್ಲೆಕ್ಸ್‌: 40 ಎಫ್‌ಐಆರ್‌

ನಗರದಲ್ಲಿ ಫ್ಲೆಕ್ಸ್‌ ಹಾಕುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿಯ ಎಂಟು ವಲಯಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, 64 ದೂರುಗಳನ್ನು ಸಲ್ಲಿಸಲಾಗಿದೆ. 40 ಎಫ್‌ಐಆರ್‌ ದಾಖಲಿಸಲಾಗಿದೆ. ರಾಜಕೀಯ ಪಕ್ಷಗಳು ವಾಹನಗಳಲ್ಲಿ ನಡೆಸುತ್ತಿರುವ ಸಾಧನೆ ಜಾಹೀರಾತು ಪ್ರದರ್ಶನಕ್ಕೆ ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆದಿಲ್ಲ. ಚುನಾವಣೆ ವಿಭಾಗ ಅದರ ಮೇಲ್ವಿಚಾರಣೆ ನಡೆಸಲಿದೆ ಎಂದು ದೀಪಕ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT