ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಣಾ ಶುಲ್ಕ ಪಾವತಿಸದಿದ್ದರೆ ಕ್ರಮ: ಮೇಯರ್‌

ಎಫ್‌ಐಆರ್ ದಾಖಲಿಸಲು ಕಂದಾಯ ಅಧಿಕಾರಿಗಳಿಗೆ ಮೇಯರ್ ಸೂಚನೆ
Last Updated 12 ಡಿಸೆಂಬರ್ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ನೋಟಿಸ್‌ ನೀಡಿಯೂ ಸುಧಾರಣಾ ಶುಲ್ಕ ಪಾವತಿಸದ ಆಸ್ತಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿ’ ಎಂದು ಮೇಯರ್ ಎಂ. ಗೌತಮ್‌ಕುಮಾರ್ ಅವರು ಬಿಬಿಎಂಪಿ ಮಹದೇವಪುರ ವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹದೇವಪುರ ವಲಯ ಕಚೇರಿಯಲ್ಲಿಆಸ್ತಿ ತೆರಿಗೆ ಸಂಗ್ರಹ ಸಂಬಂಧ ಗುರುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಹಲವು ವರ್ಷಗಳಿಂದ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಳ್ಳಲಾಗಿದೆ. ಅಂಥವರ ವಿರುದ್ಧ ಎಫ್‌ಐಆರ್ ದಾಖಲಿಸುವ ಸಂಬಂಧ ನಗರ ಪೊಲೀಸ್ ಆಯುಕ್ತರ ಜತೆ ಚರ್ಚಿಸಲಾಗುವುದು’ ಎಂದು ಹೇಳಿದರು.

‌‘ಪಾಲಿಕೆಗೆ ಹೆಚ್ಚು ವರಮಾನ ತಂದುಕೊಡುವ ವಲಯವೆಂದರೆ ಮಹದೇವಪುರ. ಹೀಗಾಗಿ, ಕಂದಾಯ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಆಸ್ತಿ ತೆರಿಗೆಗೆ ಸೇರ್ಪಡೆಯಾಗದ ಎಲ್ಲಾ ಆಸ್ತಿಗಳನ್ನು ಪಟ್ಟಿಮಾಡಿ ಸೇರಿಸಬೇಕು. ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೋಟಿಸ್ ಜಾರಿ ಮಾಡಿ. ಟೋಟಲ್ ಸ್ಟೇಷನ್ ಸರ್ವೇ ಮಾಡುವ ಬಗ್ಗೆಯೂ ಯೋಜನೆ ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಕಂದಾಯ ಅಧಿಕಾರಿಗಳು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳುತೆರಿಗೆ ಸಂಗ್ರಹ ಸಂಬಂಧ ಸಮಗ್ರ ಯೋಜನೆ ರೂಪಿಸಿಕೊಂಡು ವಾರ್ಡ್‌ವಾರು ವಾರಕ್ಕೆ 2 ಬಾರಿ ಪರಿಶೀಲನಾ ಸಭೆ ನಡೆಸಬೇಕು. ಜಂಟಿ ಆಯುಕ್ತರ ಜತೆ ವಾರಕ್ಕೊಮ್ಮೆ ಸಭೆ ಸೇರಬೇಕು. ಸಭೆ ನಡೆಸಿರುವ ಬಗ್ಗೆ ನಡಾವಳಿಗಳನ್ನು ಕಡ್ಡಾಯವಾಗಿ ನಿರ್ವಹಣೆ ಮಾಡಬೇಕು’ ಎಂದು ತಾಕೀತು ಮಾಡಿದರು.

ಮೂರು ವರ್ಷಗಳಿಂದ ಒಂದೇ ಕಡೆ ಕಾರ್ಯನಿರ್ವಹಿಸುತ್ತಿರುವ ಕಂದಾಯ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳುವಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.

ಅಂಕಿ–ಅಂಶ(₹ಗಳಲ್ಲಿ)

ತೆರಿಗೆ ಸಂಗ್ರಹ ಗುರಿ; 765 ಕೋಟಿ

ಈವರೆಗಿನ ತೆರಿಗೆ ಸಂಗ್ರಹ: 590 ಕೋಟಿ

ತೆರಿಗೆ ಸಂಗ್ರಹ ಬಾಕಿ: 175 ಕೋಟಿ

ಸ್ಯಾಂಕಿ ರಸ್ತೆ ವಿಸ್ತರಣೆಗೆ ಮತ್ತೆ ನಿರ್ಧಾರ

ಬೆಂಗಳೂರು: ಪರಿಸರವಾದಿಗಳು ಮತ್ತು ಸ್ಥಳೀಯರ ವಿರೋಧದ ಕಾರಣದಿಂದಾಗಿ ಒಂಬತ್ತು ವರ್ಷಗಳಿಂದ ಸ್ಥಗಿತಗೊಂಡಿದ್ದ ಸ್ಯಾಂಕಿ ರಸ್ತೆ ವಿಸ್ತರಣೆ ಯೋಜನೆಗೆ ಮತ್ತೆ ಚಾಲನೆ ನೀಡಲು ಬಿಬಿಎಂಪಿ ನಿರ್ಧರಿಸಿದೆ.

ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಮೇಯರ್ ಎಂ.ಗೌತಮ್‌ಕುಮಾರ್ ಅವರು ಬಿಬಿಎಂಪಿ ಅಧಿಕಾರಿಗಳ ಜತೆಗೆ ಈ ಸಂಬಂಧ ಗುರುವಾರ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಮೇಯರ್, ‘ಶೀಘ್ರವೇ ಕಾಮಗಾರಿ ಆರಂಭಿಸಲು ಉಪಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ’ ಎಂದು ಹೇಳಿದರು.

‘ಮಲ್ಲೇಶ್ವರದ 18ನೇ ಕ್ರಾಸ್ ವೃತ್ತದಿಂದ ಸದಾಶಿವನಗರ ವೃತ್ತದ ತನಕ 1.2 ಕಿ.ಮೀ. ಉದ್ದದ ರಸ್ತೆ ಸದ್ಯ 16.5 ಮೀಟರ್ ಅಗಲ ಇದೆ. ಇದನ್ನು 27 ಮೀಟರ್‌ಗೆ ವಿಸ್ತರಿಸಲುಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಬಿಬಿಎಂಪಿ
ಅಧಿಕಾರಿಯೊಬ್ಬರು ತಿಳಿಸಿದರು.

2011ರಲ್ಲೂ ಈ ಯೋಜನೆ ಪ್ರಸ್ತಾಪವಾಗಿತ್ತು. ಯೋಜನೆಗೆ 20ರಿಂದ 25 ಮರಗಳನ್ನು ಕಡಿಯಬೇಕೆಂದು ಆಗ ಗುರುತಿಸಲಾಗಿತ್ತು. ಪರಿಸರವಾದಿಗಳು ಪ್ರತಿಭಟನೆ ನಡೆಸಿದ್ದರಿಂದ ಯೋಜನೆ ಕೈಬಿಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT