ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಹಸಿರು ಹೊದಿಕೆಗೆ ಬಿಬಿಎಂಪಿ ನಿರ್ಲಕ್ಷ್ಯ

2 ವರ್ಷದ ಹಿಂದೆ ₹19.53 ಕೋಟಿ ಬಿಡುಗಡೆ; 20 ಉದ್ಯಾನ ಅಭಿವೃದ್ಧಿ ಮರೆತ ಪಾಲಿಕೆ
Last Updated 13 ಫೆಬ್ರವರಿ 2023, 5:57 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಗಾರಿಗಳಿಗೆ ಅನುದಾನ ಇಲ್ಲ ಎಂದು ಬಿಬಿಎಂಪಿಯಲ್ಲಿ ಸಾಕಷ್ಟು ಯೋಜನೆಗಳು ನನೆಗುದಿಗೆ ಬೀಳುತ್ತಿರುತ್ತವೆ. ಆದರೆ, ಕೇಂದ್ರದಿಂದ ಅನುದಾನ ಬಿಡುಗಡೆಯಾಗಿ ಎರಡು ವರ್ಷ ಕಳೆದರೂ ಪಾಲಿಕೆ ಅದನ್ನು ಬಳಸಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿಲ್ಲ. ಇದರಿಂದಾಗಿ ‘ಹಸಿರು ಹೊದಿಕೆ ವೃದ್ಧಿ’ ಯೋಜನೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಕೇಂದ್ರ ಸರ್ಕಾರ 2020–21ನೇ ಸಾಲಿನಲ್ಲಿ ₹19.53 ಕೋಟಿ ಅನುದಾನವನ್ನು ಬಿಬಿಎಂಪಿ ತೋಟಗಾರಿಕೆ ಇಲಾಖೆಗೆ ಬಿಡುಗಡೆ ಮಾಡಿದೆ. ಬಿಬಿಎಂಪಿ ವ್ಯಾಪ್ತಿಯ ಉದ್ಯಾನಗಳಲ್ಲಿ ಹೊಸದಾಗಿ ಗಿಡಗಳನ್ನು ನೆಡುವುದು ಸೇರಿದಂತೆ ಅಭಿವೃದ್ಧಿ ಕಾಮಗಾರಿ, ರಸ್ತೆ ವಿಭಜಕಗಳಲ್ಲಿ ಗಿಡಗಳನ್ನು ನೆಟ್ಟು, ಬೆಳೆಸಿ ಹಸಿರು ಹೊದಿಕೆ ಹೆಚ್ಚುವಂತೆ ಮಾಡುವುದು ಈ ಅನುದಾನದ ಉದ್ದೇಶ. ಟೆಂಡರ್‌ ಪ್ರಕ್ರಿಯೆ ಮುಗಿಸಿ, ಅನುದಾನವನ್ನೂ ಪಡೆದು ಪಾಲಿಕೆ ಸುಮ್ಮನಾಗಿದೆ.

ಕೇಂದ್ರ ಅನುದಾನದಲ್ಲಿ ₹10.67 ಕೋಟಿಯನ್ನು 20 ಉದ್ಯಾನಗಳ ಅಭಿವೃದ್ಧಿಗೆ ಕಾಮಗಾರಿಗಳನ್ನು ನಿಗದಿ ಮಾಡಿ ಟೆಂಡರ್‌ ಅಂತಿಮಗೊಳಿಸಲಾಗಿದೆ. ₹6.32 ಕೋಟಿ ವೆಚ್ಚದಲ್ಲಿ ನಗರದ 15 ರಸ್ತೆಗಳ ವಿಭಜಕಗಳಲ್ಲಿ ಗಿಡ ನೆಟ್ಟು ಪೋಷಿಸುವುದಕ್ಕೆ ವಿನಿಯೋಗಿಸಲಾಗುತ್ತದೆ. ಇನ್ನುಳಿದ ಹಣವನ್ನು, ಇಂದಿರಾನಗರದ 12 ಅಡ್ಡರಸ್ತೆಯಲ್ಲಿರುವ ಉದ್ಯಾನದಲ್ಲಿ ‘ಮಿನಿ ಫಾರೆಸ್ಟ್‌’ ಅಭಿವೃದ್ಧಿ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಸೌಂದರ್ಯೀಕರಣ, ಮೂರು ಉದ್ಯಾನಗಳ ನಿರ್ವಹಣೆ, ಗೊಟ್ಟಿಗೆರೆ ಉದ್ಯಾನದಲ್ಲಿ ಕೊಳವೆ ಬಾವಿಗೆ ಟೆಂಡರ್‌ ಅಂತಿಮಗೊಳಿಸಲಾಗಿದೆ.

ಒಣಗಲು ಬಿಡಬೇಡಿ: ‘ಬಿಬಿಎಂಪಿ ಕೋಟ್ಯಂತರ ರುಪಾಯಿಗಳನ್ನು ಉದ್ಯಾನಗಳಿಗೆ ವೆಚ್ಚ ಮಾಡುತ್ತದೆ. ಆದರೆ, ಅವುಗಳ ನಿರ್ವಹಣೆಯನ್ನು ಸರಿಯಾಗಿ ಮಾಡುವುದಿಲ್ಲ. ಗಿಡಗಳನ್ನು ನೆಟ್ಟರಷ್ಟೇ ಸಾಲದು, ಅವು ಮರವಾಗುವವರೆಗೆ ಪೋಷಿಸಬೇಕು. ಗಿಡಗಳನ್ನು ಒಣಗಲು ಬಿಡಬೇಡಿ, ಬೆಳೆಸಿ, ಪೋಷಿಸಿ. ಉದ್ಯಾನಗಳಲ್ಲಿ ಅಲಂಕಾರಿಕ ಗಿಡಗಳು ಕಡಿಮೆಯಾಗಲಿ’ ಎಂದು ರಾಜರಾಜೇಶ್ವರಿನಗರದ ಪರಿಸರ ಕಾರ್ಯಕರ್ತ ಟಿ.ಇ. ಶ್ರೀನಿವಾಸ್‌ ಒತ್ತಾಯಿಸಿದ್ದಾರೆ.

ಸರ್ಕಾರದ ಅನುಮತಿಯತ್ತ ಚಿತ್ತ: ‘ಕೇಂದ್ರ ಸರ್ಕಾರದ ಅನುದಾನದಿಂದ ಉದ್ಯಾನ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ರಾಜ್ಯ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗಿದ್ದು, ಅಲ್ಲಿಂದ ಸಮ್ಮತಿ ಬಂದ ಕೂಡಲೇ ಜಾಬ್‌ಕೋಡ್‌ ನೀಡಿ, ಕಾರ್ಯಾದೇಶ ನೀಡಲಾಗುತ್ತದೆ’ ಎಂದು ಬಿಬಿಎಂಪಿ ತೋಟಗಾರಿಕೆ ವಿಭಾಗದ ಉಪ ನಿರ್ದೇಶಕ ಚಂದ್ರಶೇಖರ್‌ ತಿಳಿಸಿದರು.

10 ಮಿಯಾವಾಕಿ ಅರಣ್ಯ

‘ನಗರದ ಸುತ್ತ 10 ಮಿಯಾವಾಕಿ ಅರಣ್ಯ ಅಭಿವೃದ್ಧಿಪಡಿಸುವ ಯೋಜನೆ ಹೊಂದಿದ್ದು, ತಲಾ ಒಂದು ಸಾವಿರದಿಂದ ಐದು ಸಾವಿರ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತದೆ. ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯದಲ್ಲಿ ಸ್ಥಳಾವಕಾಶವಿದ್ದು, ಕೆಲವು ತಿಂಗಳಲ್ಲಿ ಈ ಯೋಜನೆಯನ್ನು ಆರಂಭಿಸಲಾಗುತ್ತದೆ. ನಗರ ಹಾಗೂ ಸುತ್ತಮುತ್ತ ಹಸಿರು ಪ್ರದೇಶವನ್ನು ವೃದ್ಧಿಸುವುದು ಈ ಯೋಜನೆಯ ಉದ್ದೇಶ. ಕಡಿಮೆ ಜಾಗದಲ್ಲಿ ದಟ್ಟವಾಗಿ ಮರಗಳನ್ನು ಬೆಳೆಸುವುದು ಮಿಯಾವಾಕಿ ಅರಣ್ಯದ ವೈಶಿಷ್ಟ್ಯ. ಇದನ್ನು ಸ್ಥಳೀಯ ಹವಾಗುಣಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುತ್ತದೆ’ ಬಿಬಿಎಂಪಿ ತೋಟಗಾರಿಕೆ ವಿಭಾಗದ ಉಪ ನಿರ್ದೇಶಕ ಚಂದ್ರಶೇಖರ್‌ ತಿಳಿಸಿದರು.

ಬೆಂಗಳೂರು: ಹಸಿರು ಹೊದಿಕೆಗೆ ಬಿಬಿಎಂಪಿ ನಿರ್ಲಕ್ಷ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT