ಬುಧವಾರ, ಮೇ 25, 2022
31 °C
ಪುಟ್ಟೇನಹಳ್ಳಿ ಜಂಕ್ಷನ್‌ನಲ್ಲಿ ಕೆಳಸೇತುವೆ ಕಾಮಗಾರಿ–ಮುಖ್ಯ ಆಯುಕ್ತರಿಗೆ ಪತ್ರ ಬರೆದ ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆ

10 ವರ್ಷ ಹಳೆಯ ಬಿಲ್‌ ಬಾಕಿ ಇಪಿಐ– ಬಿಬಿಎಂಪಿ ತಿಕ್ಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪುಟ್ಟೇನಹಳ್ಳಿ ಜಂಕ್ಷನ್‌ ನಲ್ಲಿ ಕೆಳ ಸೇತುವೆ (ಜಿ.ಆರ್‌.ವಿಶ್ವನಾಥ್‌ ಕೆಳಸೇತುವೆ) ಕಾಮಗಾರಿಯ ಬಿಲ್‌ ಅನ್ನು ಬಿಬಿಎಂಪಿ 10 ವರ್ಷಗಳಿಂದ ಬಾಕಿ ಉಳಿಸಿಕೊಂಡಿದೆ. ಇದು ಕಾಮಗಾರಿಯನ್ನು ನಿರ್ವಹಿಸಿರುವ ಎಂಜಿನಿಯರಿಂಗ್‌ ಪ್ರಾಜೆಕ್ಟ್ಸ್‌ (ಇಂಡಿಯಾ) ಲಿಮಿಟೆಡ್‌ ಸಂಸ್ಥೆ (ಇಪಿಐ) ಹಾಗೂ ಬಿಬಿಎಂಪಿ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ಬಿಬಿಎಂಪಿಯು ಈಕಾಮಗಾರಿಯನ್ನು ಕೇಂದ್ರ ಸರ್ಕಾರ ಸ್ವಾಮ್ಯದ ಮಿನಿರತ್ನ ಸಂಸ್ಥೆಯಾದ ಇಪಿಐಗೆ 2008ರಲ್ಲಿ ಗುತ್ತಿಗೆ ನೀಡಿತ್ತು. 2011ರ ಜ.18ರಂದು ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೆಳ ಸೇತುವೆಯನ್ನು ಉದ್ಘಾಟಿಸಿದ್ದರು. ಈ ಕಾಮಗಾರಿಗೆ ಸಂಬಂಧಿಸಿದ ₹7.48 ಕೋಟಿ ಬಾಕಿಬಿಲ್‌ ಅನ್ನು ಪಾವತಿಸುವಂತೆ ಒತ್ತಾಯಿಸಿ ಇಪಿಐ ಸಂಸ್ಥೆಯು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮೇ 5ರಂದು ಪತ್ರ ಬರೆದಿದೆ. ಕಾಮಗಾರಿ ಮುಗಿಸಿ 10 ವರ್ಷ ಕಳೆದ ಬಳಿಕವೂ ಹಣ ಪಾವತಿ ಮಾಡದ ಬಿಬಿಎಂಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಸ್ಥೆ ಎಚ್ಚರಿಕೆಯನ್ನೂ ನೀಡಿದೆ.

‘ಈ ಕಾಮಗಾರಿಯ ಬಿಲ್‌ ಪಾವತಿಗೆ ಅಗತ್ಯವಿರುವ ಎಲ್ಲ ದಾಖಲೆಗಳು ಹಾಗೂ ಅಳತೆಯ ಮಾಹಿತಿಗಳು ಬಿಬಿಎಂಪಿ ಬಳಿಯೇ ಇವೆ. ಗುತ್ತಿಗೆ ಕರಾರಿಗೆ ಅನುಗುಣವಾಗಿಯೇ ಎಲ್ಲ ಕಾಮಗಾರಿ ಪೂರ್ಣಗೊಳಿಸಿದರೂ, ದೋಷ ಕಾಣಿಸಿಕೊಂಡರೆ ದುರಸ್ತಿಗೊಳಿಸುವುದಕ್ಕೆ ಬದ್ಧವಾದ ಅವಧಿ ಮುಗಿದರೂ ಸಂಸ್ಥೆಗೆ ಹಳೆ ಬಾಕಿ ಇನ್ನೂ ಪಾವತಿ ಆಗಿಲ್ಲ. ಈ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಸೂಚಿಸಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪತ್ರ ಬರೆದ ಬಳಿಕವೂ ಹಣ ಬಿಡುಗಡೆಗೆ ಕ್ರಮ ಕೈಗೊಂಡಿಲ್ಲ’ ಎಂದು ಮುಖ್ಯ ಆಯುಕ್ತರಿಗೆ ಬರೆದ ಪತ್ರದಲ್ಲಿ ಸಂಸ್ಥೆಯ ಹಿರಿಯ (ತಾಂತ್ರಿಕ) ವ್ಯವಸ್ಥಾಪಕ ಎಂ.ಥಾವಸಿರಾಜನ್‌ ಬೇಸರ ತೋಡಿಕೊಂಡಿದ್ದಾರೆ.  

‘ಈ ಕಾಮಗಾರಿಗೆ ಸಂಬಂಧಿಸಿದ ಪಾವತಿ ಸ್ವೀಕೃತಿಯ ವಿವರಗಳನ್ನು ಸರ್ಕಾರಿ ಲೆಕ್ಕಪರಿಶೋಧಕರಿಗೆ ಹಾಗೂ ಮಹಾಲೇಖಪಾಲರಿಗೆ ಸಲ್ಲಿಸಬೇಕಾಗುತ್ತದೆ. 10 ವರ್ಷಗಳಿಂದ ಪಾವತಿ ಬಾಕಿ ಇರುವುದರಿಂದ ಅದರ ವಸೂಲಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ಲೆಕ್ಕಪರಿಶೋಧಕರು ಸಲಹೆ ನೀಡಿದ್ದಾರೆ’ ಎಂದೂ ಅವರು ಗಮನಕ್ಕೆ ತಂದಿದ್ದಾರೆ.

‘ಬಾಕಿ ಮೊತ್ತವನ್ನು ವಾರ್ಷಿಕ ಶೇ 18ಷ್ಟು ಬಡ್ಡಿ ಸಮೇತ ಆದಷ್ಟು ಬೇಗ ಪಾವತಿಸಬೇಕು. ಇಲ್ಲದಿದ್ದರೆ ನಾವು ಈ ವಿಚಾರದಲ್ಲಿ ಕಾನೂನಾತ್ಮಕವಾಗಿ ಮುಂದುವರಿಯದೇ ಬೇರೆ ದಾರಿ ಇಲ್ಲ’ ಎಂದೂ ಅವರು ಎಚ್ಚರಿಸಿದ್ದಾರೆ.

ಈ  ಪತ್ರದ ಪ್ರತಿಯನ್ನು ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಆಡಳಿತಾಧಿಕಾರಿ, ಬಿಬಿಎಂಪಿ ವಿಶೇಷ ಆಯುಕ್ತರು (ಹಣಕಾಸು), ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಹಾಗೂ ಕಾರ್ಯಪಾಲಕ ಎಂಜಿನಿಯರ್‌ ಅವರಿಗೂ ಕಳುಹಿಸಿದ್ದಾರೆ.

‘ಕಾನೂನುಬದ್ಧವಲ್ಲ’

‘ಈ ಕೆಳಸೇತುವೆ ಕಾಮಗಾರಿ ಪರಿಶೀಲನೆಗೆ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಯಾವೆಲ್ಲ ಕಾಮಗಾರಿಗಳನ್ನು ಸಂಸ್ಥೆಯು ಬಾಕಿ ಉಳಿಸಿಕೊಂಡಿದೆ ಎಂದು ಆ ಸಮಿತಿಯು ಪಟ್ಟಿ ಮಾಡಿತ್ತು. ಆ ಬಾಕಿ ಕಾಮಗಾರಿಗಳನ್ನು ಸಂಸ್ಥೆ ನಿರ್ವಹಿಸಿಲ್ಲ. ಕಾಮಗಾರಿಯನ್ನು ಗಡುವಿನ ಒಳಗೆ ಪೂರ್ಣಗೊಳಿಸದ ಕಾರಣಕ್ಕೆ ಸಂಸ್ಥೆಗೆ ದಂಡವನ್ನೂ ವಿಧಿಸಲಾಗಿತ್ತು. ಯಾವ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದೆ ಎಂಬುದಕ್ಕೆ ಸಂಸ್ಥೆ ವಿವರಣೆಯನ್ನೂ ನೀಡಿಲ್ಲ. ಬಿಲ್‌ ಬಾಕಿಇದೆ ಎಂದು ಈಗ ಹೇಳಿಕೊಳ್ಳುವುದು ಕಾನೂನಾತ್ಮಕವಾಗಿ ಸರಿಯಲ್ಲ. ಅದನ್ನು ಈಡೇರಿಸಲೂ ಸಾಧ್ಯವಿಲ್ಲ’ ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ಸ್ಪಷ್ಟಪಡಿಸಿದರು. ‘ಹೆಚ್ಚುವರಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಆದರೆ, ಅದಕ್ಕೆ ಪೂರಕ ಒಪ್ಪಂದವನ್ನು ಸಂಸ್ಥೆ ಮಾಡಿಕೊಂಡಿಲ್ಲ. ಹಾಗಾಗಿ ಹೆಚ್ಚುವರಿ ಬಿಲ್‌ ಅನ್ನು ಪಾವತಿಸಲು ಬರುವುದಿಲ್ಲ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು