ಭಾನುವಾರ, ಜೂನ್ 13, 2021
29 °C
ಬೆಂಗಳೂರಿನ ಎಲ್ಲೆಡೆ, ರಾಜ್ಯದ ಇತರ ನಗರಗಳಿಗೂ ವಿಸ್ತರಿಸಲು ಚಿಂತನೆ

ಮನೆ ಬಾಗಿಲಿಗೇ ಆಮ್ಲಜನಕ ಸಾಂದ್ರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಮ್ಲಜನಕದ ಕೊರತೆ ಎದುರಿಸುತ್ತಿರುವ ಕೋವಿಡ್‌ ಸೋಂಕಿತರಿಗೆ ಅವರ ಮನೆ ಬಾಗಿಲಿಗೇ ಆಮ್ಲಜನಕ ಸಾಂದ್ರಕಗಳನ್ನು (ಆಕ್ಸಿಜನ್‌ ಕಾನ್ಸಂಟ್ರೇಟರ್‌) ಒದಗಿಸುವ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಬುಧವಾರ ಚಾಲನೆ ನೀಡಿದರು.

ಈ ಆಮ್ಲಜನಕ ಸಾಂದ್ರಕಗಳನ್ನು ಓಲಾ ಕ್ಯಾಬ್‌ ಮೂಲಕ ಪೂರೈಸಲಾಗುತ್ತಿದ್ದು, ಗ್ರಿವ್‌ ಇಂಡಿಯಾ ಮತ್ತು ಓಲಾ ಕ್ಯಾಬ್‌ಗಳು ಸಹಯೋಗ ನೀಡಿವೆ. ಬೆಂಗಳೂರಿನಲ್ಲಿ ಆರಂಭಿಸಿರುವ ಈ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ರಾಜ್ಯದ ಇತರ ನಗರಗಳಲ್ಲೂ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.

ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಶ್ವತ್ಥನಾರಾಯಣ, ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಕೆಲಸ ಆರಂಭಿಸಿದೆವು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ  ಈಗ ಇಡೀ ಬೆಂಗಳೂರಿಗೇ ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.

ಹೋಮ್‌ ಐಸೋಲೇಷನ್‌ ಆಗಿರುವ ಯಾವುದೇ ಸೋಂಕಿತರಲ್ಲಿ ಆಮ್ಲಜನಕ ಸ್ಯಾಚುರೇಷನ್‌ ಮಟ್ಟವು ಶೇ 94 ಕ್ಕಿಂತ ಕಡಿಮೆ ಇದ್ದರೆ ಅಂಥವರಿಗೆ ಆಮ್ಲಜನಕದ ಸಾಂದ್ರಕಗಳನ್ನು  ನೀಡಲಾಗುವುದು. ಓಲಾ ಆ್ಯಪ್‌ ಮೂಲಕ ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸಿದ 30 ನಿಮಿಷದೊಳಗೆ ಮನೆ ಬಾಗಿಲಿಗೇ ಸಾಂದ್ರಕ ತಲುಪಿಸಲಾಗುತ್ತದೆ ಎಂದರು.

ಸೋಂಕಿತರು ₹5,000 ಭದ್ರತಾ ಠೇವಣಿಯನ್ನು ಡಿಜಿಟಲ್‌ ಮೂಲಕ ಪಾವತಿಸಿ ಸಾಂದ್ರಕಗಳನ್ನು ಪಡೆಯಬೇಕು. ಸಾಂದ್ರಕಗಳನ್ನು ವಾಪಸ್‌ ಪಡೆಯುವಾಗ ಠೇವಣಿ ಮೊತ್ತವನ್ನು ಹಿಂತಿರುಗಿಸಲಾಗುವುದು. ಈ ಸಾಧನವನ್ನು ಹೇಗೆ ಬಳಸಬೇಕು ಎಂಬುದನ್ನು ಸೋಂಕಿತರಿಗೆ  ಹೇಳಿಕೊಡಲಾಗುವುದು ಎಂದು ವಿವರಿಸಿದರು.

ಸದ್ಯಕ್ಕೆ 500 ಆಮ್ಲಜನಕ ಸಾಂದ್ರಕಗಳ ಜಾಲವನ್ನು ರೂಪಿಸಲಾಗಿದೆ. ಈಗ ಮಲ್ಲೇಶ್ವರ ಮತ್ತು ಕೋರಮಂಗಲದಲ್ಲಿ ಆರಂಭಿಸಲಾಗಿದೆ. ಕ್ರಮೇಣ ಇನ್ನೂ ಹೆಚ್ಚು ಪ್ರಮಾಣದಲ್ಲಿ ವಿಸ್ತರಿಸಲಾಗುವುದು. ಇದರ ಜತೆಗೆ ಟೆಲಿಕನ್ಸಲ್ಟೆನ್ಸಿ ಸೇವೆಯನ್ನು ನೀಡುವ ಚಿಂತನೆ ಇದೆ. ಅಗತ್ಯ ಇದ್ದರೆ ಸೋಂಕಿತರಿಗೆ ಔಷಧೋಪಾಚಾರವನ್ನು ಒದಗಿಸಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು