ಮಂಗಳವಾರ, ಸೆಪ್ಟೆಂಬರ್ 21, 2021
21 °C
ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ

ಬೆಂಗಳೂರು: ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ನಂತರ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಬಿಬಿಎಂಪಿ ಮುಂದಾಗಿದೆ. ನಗರದಲ್ಲಿ ನಾಲ್ಕು ಹೊಸ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹಾಗೂ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ತಲಾ ಒಂದು ದ್ವಿತಿಯ ಹಂತದ ಆಸ್ಪತ್ರೆಗಳನ್ನು ನಿರ್ಮಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

‘ಸದ್ಯ ಬಿಬಿಎಂಪಿ ಪ್ರಾಥಮಿಕ ಹಂತದ ಆರೋಗ್ಯ ಸೇವೆಯನ್ನು ಹಾಗೂ ಆರು ರೆಫರಲ್‌ ಆಸ್ಪತ್ರೆಗಳನ್ನು ನಿರ್ವಹಿಸುತ್ತಿದೆ. ಭವಿಷ್ಯದಲ್ಲಿ ಕೋವಿಡ್‌ನಂತಹ ಸಾಂಕ್ರಾಮಿಕ ಕಾಣಿಸಿಕೊಂಡರೆ, ನಿಭಾಯಿಸಲು  ವೈದ್ಯಕೀಯ ಸೌಕರ್ಯ ಹೆಚ್ಚಳ ಮಾಡಬೇಕಿದೆ. ಇದಕ್ಕಾಗಿ ರೂಪರೇಷೆ ಸಿದ್ಧಪಡಿಸಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ದ್ವಿತೀಯ ಹಂತದ ಆರೈಕೆ ಒದಗಿಸುವ ಆಸ್ಪತ್ರೆಗಳು ಹಾಗೂ ನಗರದಲ್ಲಿ ಮೂರರಿಂದ ನಾಲ್ಕು ಆಸ್ಪತ್ರೆಗಳನ್ನು ನಿರ್ಮಿಸುವ ಉದ್ದೇಶವಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.

‘ಕೆಲವು ಕಡೆ ಆಸ್ಪತ್ರೆಗಳಿಗೆ ಸ್ವಂತ ಕಟ್ಟಡಗಳು ಲಭ್ಯ ಇವೆ. ಇನ್ನು ಕೆಲವು ಕಡೆ ಕಟ್ಟಡಗಳಿಲ್ಲ. ಕೆಲವೆಡೆ ಹೊಸ ಕಟ್ಟಡ ನಿರ್ಮಿಸಬೇಕಾಗುತ್ತದೆ. ಈ ಕುರಿತ ಅಂದಾಜು ವೆಚ್ಚದ ಬಗ್ಗೆಯೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ’ ಎಂದರು.

ನಗರದಲ್ಲಿ ಇತ್ತೀಚಿನ ದಿನದಲ್ಲಿ 200ರಷ್ಟು ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈ ಪ್ರಮಾಣ ದಿಢೀರ್‌ 500ಕ್ಕೆ ಏರಿಕೆ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗೌರವ್‌ ಗುಪ್ತ, ‘ಕೋವಿಡ್‌ ಪ್ರಕರಣಗಳ ಪತ್ತೆ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಅಲ್ಪ ವ್ಯತ್ಯಾಸ ಇದ್ದೇ ಇರುತ್ತದೆ. ಏಳು ದಿನಗಳಲ್ಲಿ ಪತ್ತೆಯಾಗುವ ಪ್ರಕರಣಗಳ ಸರಾಸರಿಯನ್ನು ತೆಗೆದು, ಅದರ ಪ್ರಕಾರ ಸೊಂಕು ಪತ್ತೆ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಕೋವಿಡ್‌ ಪರೀಕ್ಷೆಯ ಪ್ರಮಾಣದಲ್ಲೂ ದಿನದಿಂದ ದಿನಕ್ಕೆ ವ್ಯತ್ಯಾಸ ಇರುತ್ತದೆ. ಹಾಗಾಗಿ ಒಂದು ದಿನದ ಅಂಕಿ ಅಂಶವನ್ನು ಆಧರಿಸಿ ಯಾವುದೇ ನಿರ್ಧಾರಕ್ಕೆ ಬರಲಾಗದು’ ಎಂದರು. 

‘ಕೋವಿಡ್‌ ಪ್ರಕರಣಗಳ ಸಂಖ್ಯೆ ಎಷ್ಟೇ ಇರಲಿ, ನಮ್ಮಲ್ಲಿನ ಸಿದ್ಧತೆ ಹಾಗೂ ಮುನ್ನೆಚ್ಚರಿಕೆ ಕಡಿಮೆ ಆಗಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದನ್ನು ನಿಲ್ಲಿಸಬಾರದು. ಜನಜಂಗುಳಿ ಇರುವ ಕಡೆ ಹೋಗಬಾರದು’ ಎಂದು ತಿಳಿಸಿದರು.

ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆಯ ಮೊದಲ ಡೋಸ್‌ ಸಿಗದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ‘ಸರ್ಕಾರದ ಆದೇಶ ಪ್ರಕಾರ ಒಂದು ಡೋಸ್‌ ಪಡೆದವರು ಮಾತ್ರ ತರಗತಿಗೆ ಹಾಜರಾಗಲು ಅವಕಾಶ ಇದೆ. ವಿದ್ಯಾರ್ಥಿಗಳಿಗೆ ವಿಶೇಷ ಶಿಬಿರಗಳನ್ನು ಆಯೋಜಿಸಿ ಲಸಿಕೆ ನೀಡಿದ್ದೇವೆ. ಈಗಾಗಲೇ ನಗರದಲ್ಲಿ 1.80 ಲಕ್ಷ ವಿದ್ಯಾರ್ಥಿಗಳು ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ’ ಎಂದರು.

‘ತಗ್ಗು ಪ್ರದೇಶ: ಮನೆ ಮುಳುಗಡೆ ತಡೆಯಲು ಕ್ರಮ’
‘ಮಳೆಗಾಲವನ್ನು ಸಮರ್ಥವಾಗಿ ಎದುರಿಸಲು ಬಿಬಿಎಂಪಿ ಸನ್ನದ್ಧವಾಗಿದೆ. ಕಾರಣಾಂತರಗಳಿಂದ ಕೆಲವು ಕಡೆ ತೊಂದರೆ ಆಗಿದೆ. ದೀರ್ಘಕಾಲದ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಂಡಿದ್ದೇವೆ’ ಎಂದು ಗೌರವ್‌ ಗುಪ್ತ ತಿಳಿಸಿದರು.

‘ಕೆಲವು ಕಡೆ ಮನೆಗಳು ರಾಜಕಾಲುವೆಗಿಂತಲೂ ತಗ್ಗಾದ ಪ್ರದೇಶಗಳಲ್ಲಿವೆ. 40– 50 ವರ್ಷಗಳ ಹಿಂದೆ ಕಟ್ಟಿದ ಇಂತಹ ಮನೆಗಳನ್ನು ಸ್ಥಳಾಂತರ ಮಾಡಲು ಸಾಧ್ಯವಿಲ್ಲ. ಇಂತಹ ಕಡೆ ಪ್ರವಾಹ ತಡೆಯಲು ರಾಜಕಾಲುವೆಯ ತಡೆಗೋಡೆ ಎತ್ತರಿಸುವುದು ಒಂದೇ ದಾರಿ. ಅನೇಕ ಕಡೆ ಈಗಾಗಲೇ ರಾಜಕಾಲುವೆಯ ತಡೆಗೋಡೆ ಎತ್ತರಿಸಲಾಗಿದೆ. ಬಾಕಿ ಇರುವ ಕಡೆಯೂ ಶೀಘ್ರವೇ ತಡೆಗೋಡೆ ಎತ್ತರಿಸಲು ಕ್ರಮಕೈಗೊಳ್ಳಲಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.