ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಆರೈಕೆ ಕೇಂದ್ರಗಳಿಗೆ ಆಮ್ಲಜನಕ ಸಾಂದ್ರೀಕರಣ ಸಾಧನ

Last Updated 3 ಮೇ 2021, 19:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವತಿಯಿಂದ ಸ್ಥಾಪಿಸಲಾದ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಆಮ್ಲಜನಕ ಒದಗಿಸುವ ಸಲುವಾಗಿ ಆಮ್ಲಜನಕ ಸಾಂದ್ರೀಕರಣ ಸಾಧನಗಳನ್ನು (ಆಕ್ಸಿಜನ್‌ ಕಾನ್ಸಂಟ್ರೇಟರ್‌) ಪೂರೈಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹಾಗೂ ಕೋವಿಡ್ ಸೋಂಕು ದೃಢಪಡುವ ಪ್ರಮಾಣವು ಹೆಚ್ಚುತ್ತಿದೆ. ಹಾಗಾಗಿ ಸೋಂಕಿನ ಲಕ್ಷಣ ಇಲ್ಲದವರ ಅಥವಾ ಅಲ್ಪ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳನ್ನು ಹೊಂದಿರುವವ ಆರೈಕೆಗಾಗಿ ಬಿಬಿಎಂಪಿ 8 ವಲಯಗಳಲ್ಲಿ 14 ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ನಿರ್ವಹಿಸುತ್ತಿದೆ. ಇವುಗಳಲ್ಲಿ 2,081 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಮನೆಯಲ್ಲೇ ಪ್ರತ್ಯೇಕವಾಗಿ ಆರೈಕೆ ಹೊಂದಲು ವ್ಯವಸ್ಥೆ ಇಲ್ಲದವರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಸೋಂಕಿತರ ಚಿಕಿತ್ಸೆಗಾಗಿ ಆಮ್ಲಜನಕ ಪೂರೈಕೆ ವ್ಯವಸ್ಥೆ ಇರುವ ಹಾಸಿಗೆಗಳ ಅವಶ್ಯಕತೆ ಹೆಚ್ಚಾಗುತ್ತಿದೆ. ಹಾಗಾಗಿ, ಈಗಾಗಲೇ ಸ್ಥಾಪಿಸಲಾಗಿರುವ ಹಾಗೂ ಮುಂದಿನ ದಿನಗಳಲ್ಲಿ ಸ್ಥಾಪಿಸಲಾಗುವ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಕನಿಷ್ಠ ಪಕ್ಷ ಶೇ 20ರಷ್ಟು ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತರು ಸೂಚಿಸಿದ್ದಾರೆ. ಈ ಸಲುವಾಗಿ ಮೊದಲ ಹಂತದಲ್ಲಿ 100 ಆಮ್ಲಜನಕ ಸಾಂದ್ರೀಕರಣ ಸಾಧನಗಳನ್ನು ವಿವಿಧ ವಲಯಗಳ ಕೋವಿಡ್‌ ಆರೈಕೆ ಕೇಂದ್ರಗಳಿಗೆ ಬಿಬಿಎಂಪಿ ಹಂಚಿಕೆ ಮಾಡಿದೆ.

ಕೆಲ ಖಾಸಗಿ ಸಂಸ್ಥೆಗಳು ಆಮ್ಲಜನಕ ಸಿಲಿಂಡರ್‌, ಆಮ್ಲಜನಕ ಸಾಂದ್ರೀಕರಣ ಸಾಧನಗಳು ಸೇರಿದಂತೆ ಅವಶ್ಯಕ ಆರೋಗ್ಯ ಆರೈಕೆ ಪರಿಕರಗಳನ್ನು ಒದಗಿಸಬಹುದು ಎಂದು ಬಿಬಿಎಂಪಿ ಕೋರಿದೆ.

ಸರ್ಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಲು ಯೋಜನೆ ರೂಪಿಸಿದೆ. ಆಮ್ಲಜನಕ ತಯಾರಿಕ ಘಟಕ ಸ್ಥಾಪನೆ, ಅವುಗಳ ಪೂರೈಕೆಗೆ ಕೊಳವೆ ಮಾರ್ಗ ಅಳವಡಿಕೆಗೆ ಕ್ರಮ ಕೈಗೊಂಡಿದೆ. ಅದಕ್ಕೆ ಪೂರಕವಾಗಿ ಆಮ್ಲಜನಕ ಸಾಂದ್ರೀಕರಣ ಸಾಧನಗಳು, ಸಿಲಿಂಡರ್‌ಗಳು, ಎನ್‌ಐವಿ ವೆಂಟಿಲೇಟರ್‌ಗಳ ಅಗತ್ಯವಿದೆ. ರೋಗಿಗಳ ಜೀವ ಉಳಿಸುವುದಕ್ಕೆ ಮಾತ್ರವಲ್ಲ ಕೋವಿಡ್‌ ಹರಡುವಿಕೆ ನಿಯಂತ್ರಣಕ್ಕೂ ಇವು ಅತಿಮುಖ್ಯ. ಸಂಘ ಸಂಸ್ಥೆಗಳು, ಖಾಸಗಿ ಕಂಪನಿಗಳು ಇವುಗಳನ್ನು ಕೊಡುಗೆಯಾಗಿ ನೀಡಬಹುದು. ಈ ಸಂಬಂಧ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್‌ (ಮೊ:9448111066) ಅವರನ್ನು ಸಂಪರ್ಕಿಸಬಹುದು ಎಂದು ಗೌರವ್‌ ಗುಪ್ತ ಕೋರಿದ್ದಾರೆ.

ಆಮ್ಲಜನಕ ಸಾಂದ್ರೀಕರಣ ಸಾಧನ: ಯಾವ ವಲಯಕ್ಕೆ ಎಷ್ಟು?

ವಲಯ; ಸಾಧನಗಳು

ಪೂರ್ವ ; 25

ದಕ್ಷಿಣ ; 10

ಪಶ್ಚಿಮ ; 15

ಮಹದೇವಪುರ ; 13

ಆರ್‌.ಆರ್‌.ನಗರ; 25

ಬೊಮ್ಮನಹಳ್ಳಿ; 12

ಕೇಂದ್ರ ಕಚೇರಿ; 05.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT