ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡುವು ಮೀರಿದರೂ ತೆರವಾಗದ ಒತ್ತುವರಿ

ರಾಜಕಾಲುವೆ: ತಹಶೀಲ್ದಾರ್‌ರಿಂದ ಬಾರದ ಆದೇಶ * ಮಾರ್ಚ್‌10ರಿಂದಲೇ ತೆರವಿಗೆ ಸಜ್ಜು-– ಬಿಬಿಎಂಪಿ
Last Updated 5 ಮಾರ್ಚ್ 2023, 21:23 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ನೀರು ನಿಯಂತ್ರಣ ಅಥವಾ ಪ್ರವಾಹದಂತಹ ಪರಿಸ್ಥಿತಿಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ನೂರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿವೆ. ಆದರೆ, ಅತಿಹೆಚ್ಚಿನ ಮಳೆಯಿಂದ ಅವಾಂತರ ಸೃಷ್ಟಿಸುವ ರಾಜಕಾಲುವೆ ಒತ್ತುವರಿ ತೆರವನ್ನು ಮುಂದೂಡುತ್ತಲೇ ಬಂದಿವೆ.

2022ರಲ್ಲಿ ನಗರ ಅತಿಹೆಚ್ಚು ಅಂದರೆ 195.8 ಸೆಂ.ಮೀ ಮಳೆ ಕಂಡಿದ್ದು, ಇಂತಹ ಮಳೆಯಲ್ಲಿ ಪರಿಸ್ಥಿತಿಯನ್ನು ಯಾವುದೇ ತೊಂದರೆ ಇಲ್ಲದಂತೆ ನಿಭಾಯಿಸಲು ಸರ್ಕಾರ ಹಾಗೂ ಬಿಬಿಎಂಪಿ ಕೆಲವು ಯೋಜನೆಗಳನ್ನು ಪ್ರಕಟಿಸಿವೆ. ರಾಜಕಾಲುವೆಗಳ ಮರುವಿನ್ಯಾಸ, ಬಾಕ್ಸ್‌ ಕಾಂಕ್ರೀಟ್‌ ಸೇರಿದಂತೆ ಕೆರೆಗಳಿಗೆ ತೂಬು ಅಳವಡಿಸಿ ನೀರು ಹರಿಯುವುದನ್ನು ನಿಯಂತ್ರಿಸಲು ಯೋಜಿಸಲಾಗಿದೆ. ಇಷ್ಟೇ ಅಲ್ಲ, ವಿಶ್ವಬ್ಯಾಂಕ್‌ನಿಂದ ₹3 ಸಾವಿರ ಕೋಟಿ ವೆಚ್ಚದಲ್ಲಿ ಹವಾಮಾನ ವೈಪರೀತ್ಯವನ್ನು ತಡೆಯಲೂ ಯೋಜಿಸಲಾಗಿದೆ. ಆದರೆ, ರಾಜಕಾಲುವೆ ಒತ್ತುವರಿ ತೆರವಿನ ಬಗ್ಗೆ ಯಾರೂ ಮಾತನಾಡುತ್ತಿಲ್ಲ.

ರಾಜಕಾಲುವೆಗಳ ಒತ್ತುವರಿಯಿಂದಲೇ ನಗರದಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿತ್ತು. ಪೂರ್ವಭಾಗದ ಪ್ರದೇಶಗಳು ಮುಳುಗಿದ್ದವು. ಇದನ್ನು ಸರ್ಕಾರ, ಬಿಬಿಎಂಪಿಯೂ ಒಪ್ಪಿಕೊಂಡಿತ್ತು. ಆದರೆ, ಆ ಒತ್ತುವರಿ ತೆರವು ಕಾರ್ಯ 6 ತಿಂಗಳಾದರೂ ಸಮಗ್ರವಾಗಿ ಆರಂಭವೇ ಆಗಿಲ್ಲ.

‘ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳು 485 ಪ್ರಕರಣಗಳಲ್ಲಿ ಒತ್ತುವರಿಯಾಗಿವೆ. ಅವುಗಳ ತೆರವಿನ ಆದೇಶ ಹೊರಡಿಸಲು ತಹಶೀಲ್ದಾರ್‌ ಅವರಿಗೆ ಫೆ.15 ಕೊನೆಯ ದಿನ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಜನವರಿಯಲ್ಲಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ಅವರ ಸಭೆಯಲ್ಲಿ ಹೇಳಿದ್ದರು. ಆದರೆ ಈ ಗಡುವು ಮುಗಿದರೂ ಯಾವ ಆದೇಶವೂ ಹೊರಬಂದಿಲ್ಲ. ಇಂತಹ ಸಭೆಯಾದ ಒಂದೆರಡು ದಿನ ಒಂದೆರಡು ಕಡೆ ಸಣ್ಣಮಟ್ಟದಲ್ಲಿ ತೆರವು ಮಾಡಲಾಗುತ್ತದೆ. ನಂತರ ಎಲ್ಲವೂ ಸ್ತಬ್ಧವಾಗುತ್ತದೆ.

‘ಅಧಿಕಾರಿಗಳ ನಿರ್ಲಕ್ಷ್ಯ’: ‘ಬೆಂಗಳೂರಿನ ದಕ್ಷಿಣ ವಲಯದಲ್ಲಿ ರಾಜಕಾಲುವೆ ಒತ್ತುವರಿಯೇ ಇಲ್ಲ ಎಂದು ಹೇಳುತ್ತಿದೆ ಬಿಬಿಎಂಪಿ. ಆದರೆ, ಅಲ್ಲಿರುವ ಒತ್ತುವರಿಯನ್ನು ಅಧಿಕಾರಿಗಳು ಮರೆಮಾಚಿದ್ದಾರೆ’ ಎಂದು ಜಯನಗರದ ನಿವಾಸಿ ದೀಪಕ್‌ ದೂರಿದರು.

‘ರಾಜರಾಜೇಶ್ವರಿನಗರದಲ್ಲಿ ಹಲವು ರೀತಿಯಲ್ಲಿ ರಾಜಕಾಲುವೆಗಳ ಒತ್ತುವರಿಯಾಗಿದೆ. ಮನೆಗಳು ನಿರ್ಮಾಣವಾಗುತ್ತಿರುವ ಚಿತ್ರಗಳನ್ನು ಕಳುಹಿಸಿ, ಬಿಬಿಎಂಪಿ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಬಸವರಾಜ ಕಬಾಡೆ ಸೇರಿದಂತೆ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಹಲಗೆವಡೇರಹಳ್ಳಿ ನಿವಾಸಿ ಗೋಪಾಲ್‌ ಆರೋಪಿಸಿದರು.

ಶೇ 50ರಷ್ಟು ಆದೇಶ ಬಾಕಿ: ‘ಒತ್ತುವರಿ ಗುರುತಿಸಿರುವ ಶೇ 50ರಷ್ಟು ಪ್ರಕರಣಗಳಲ್ಲಿ ತಹಶೀಲ್ದಾರ್‌ ಅವರಿಂದ ಆದೇಶವಾಗಬೇಕಿದೆ. ತಹಶೀಲ್ದಾರ್‌ಗಳು ವರ್ಗಾವಣೆ ಆಗಿದ್ದರಿಂದ ವಿಳಂಬವಾಗಿದೆ. ಆದರೂ, ಮಾರ್ಚ್‌ 15ರ ಒಳಗೆ ಎಲ್ಲ ರೀತಿಯ ಒತ್ತುವರಿಯನ್ನು ತೆರವು ಮಾಡಲು ಸೂಚಿಸಲಾಗಿದೆ. ಮಾರ್ಚ್‌ 10ರೊಳಗೆ ತೆರವಿನ ನೋಟಿಸ್‌ ಜಾರಿ ಮಾಡಲಾಗುತ್ತಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರು ತಿಳಿಸಿದರು.

ಸಮಸ್ಯೆ ಇಲ್ಲದಿದ್ದರೆ ತೆರವು ಇಲ್ಲ: ತುಷಾರ್‌ ಗಿರಿನಾಥ್‌
‘ನಗರದ ಹಲವು ಪ್ರಕರಣಗಳಲ್ಲಿ ಬಿಡಿಎ, ಬಿಬಿಎಂಪಿ ಸೇರಿದಂತೆ ಸಾರ್ವಜನಿಕವಾಗಿ ಹಲವು ರೀತಿಯ ಒತ್ತುವರಿಯಾಗಿವೆ. ಕೆಲವು ಪ್ರಕರಣಗಳಲ್ಲಿ, ಮೂಲ ಕಂದಾಯ ದಾಖಲೆ ನಕ್ಷೆಯ ಕಾಲುವೆಗಳು ಒತ್ತುವರಿಯಾಗಿದ್ದರೂ ಪರ್ಯಾಯ ಮಾರ್ಗ ಇರುವುದರಿಂದ ಅಲ್ಲಿ ಯಾವ ಸಮಸ್ಯೆಗಳೂ ಉಂಟಾಗುತ್ತಿಲ್ಲ. ಆ ಒತ್ತುವರಿಗಳಲ್ಲಿ ನೂರಾರು ಮನೆಗಳನ್ನು ತೆರವು ಮಾಡುವುದರಿಂದ ಯಾವುದೇ ಉಪಯೋಗವಾಗುವುದಿಲ್ಲ. ಇಂತಹ ಪ್ರಕರಣಗಳನ್ನು ಹೈಕೋರ್ಟ್‌ ಗಮನಕ್ಕೆ ತಂದು, ಅಲ್ಲಿನ ಆದೇಶದಂತೆ ಮುಂದುವರಿಯಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಹೇಳಿದರು.

‘ವಲಯ ಆಯುಕ್ತರಿಗೆ ತಮ್ಮ ವ್ಯಾಪ್ತಿಯಲ್ಲಿರುವ ಒತ್ತುವರಿಯನ್ನು ಗುರುತಿಸಲು ಸೂಚಿಸಲಾಗಿದೆ. ಯಾವ ಒತ್ತುವರಿ ತೆರವಿನಿಂದ ಪ್ರಯೋಜನ ಇಲ್ಲ ಎಂಬುದನ್ನು ಜಂಟಿ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಆದೇಶಿಸಲಾಗಿದೆ. ಇಂತಹ ವಲಯ ವರದಿಗಳನ್ನು ಕ್ರೋಡೀಕರಿಸಿ ಯಾವ ಒತ್ತುವರಿಯನ್ನು ತೆರವುಗೊಳಿಸುವ ಅಗತ್ಯ ಇಲ್ಲ ಎಂದು ಹೈಕೋರ್ಟ್‌ ಮುಂದಿರಿಸಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT