ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಿಗೆ ₹ 133 ಕೋಟಿ ಪಾವತಿ

ಬಿಬಿಎಂಪಿ ವ್ಯಾಪ್ತಿಯಲ್ಲಿ 43,863 ಮಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆ
Last Updated 27 ಜನವರಿ 2021, 19:06 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಶಿಫಾರಸಿನ ಆಧಾರದಲ್ಲಿ ಒಟ್ಟು 43,863 ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಮಾಹಿತಿ ನೀಡಿದೆ.

42,467 ರೋಗಿಗಳಿಗೆ ಚಿಕಿತ್ಸೆ ನೀಡಿರುವ ಬಿಲ್‌ಗಳು ಖಾಸಗಿ ಆಸ್ಪತ್ರೆಗಳಿಂದ ಸಲ್ಲಿಕೆಯಾಗಿದ್ದು, ಒಟ್ಟು ₹ 202.23 ಕೋಟಿಯ ಮರುಪಾವತಿ ಮಾಡಬೇಕಿದೆ. ಇದುವರೆಗೆ 31,624 ರೋಗಿಗಳ ಬಿಲ್‌ ಮರುಪಾವತಿ ಮಾಡಲಾಗಿದೆ. ಇದಕ್ಕಾಗಿ 2021ರ ಜ. 13ರವರೆಗೆ ₹ 133.20 ಕೋಟಿಯನ್ನು ಭರಿಸಲಾಗಿದೆ ಎಂದು ಟ್ರಸ್ಟ್‌ ತಿಳಿಸಿದೆ.

ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹ ಮೂರ್ತಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ಸುವರ್ಣ ಆರೋಗ್ಯ ಟ್ರಸ್ಟ್‌ ಈ ಮಾಹಿತಿ ಒದಗಿಸಿದೆ.

‘ಸರ್ಕಾರದ ಬೊಕ್ಕಸದಿಂದ ₹ 200 ಕೋಟಿಗೂ ಅಧಿಕ ಹಣವನ್ನು ಖಾಸಗಿ ಆಸ್ಪತ್ರೆಗಳಿಗೆ ಪಾವತಿಸುವುದು ಗಂಭೀರ ವಿಚಾರ. ಸರ್ಕಾರದಿಂದ ಬಿಲ್‌ ಮೊತ್ತವನ್ನು ಮರುಪಾವತಿ ಮಾಡಿಸಿಕೊಳ್ಳುತ್ತಿರುವ ಕೆಲವು ಖಾಸಗಿ ಆಸ್ಪತ್ರೆಗಳು ಇನ್ನೊಂದೆಡೆ ರೋಗಿಗಳಿಂದಲೂ ಹಣ ಪಡೆದಿವೆ. ಇದಕ್ಕೆ ನಾನೇ ಉದಾಹರಣೆ. ಶೇಷಾದ್ರಿಪುರ ಅಪೋಲೊ ಆಸ್ಪತ್ರೆ ಕೋವಿಡ್‌ ಚಿಕಿತ್ಸೆಯ ವೆಚ್ಚವಾಗಿ ನನ್ನಿಂದ ₹ 10 ಸಾವಿರ ಕಟ್ಟಿಸಿಕೊಂಡಿತ್ತು. ನಾನು ಹೋರಾಟ ಮಾಡಿದ ಬಳಿಕ ಆಸ್ಪತ್ರೆಯವರು ₹ 1ಪರಿಹಾರವನ್ನೂ ಸೇರಿಸಿ ಆ ಮೊತ್ತವನ್ನು ಹಿಂತಿರುಗಿಸಿದರು’ ಎಂದು ನರಸಿಂಹ ಮೂರ್ತಿ ಹೇಳಿದರು.

‘ನಾನು ದೂರು ನೀಡಿದ ಬಳಿಕವೂ ಸರ್ಕಾರ ಖಾಸಗಿ ಆಸ್ಪತ್ರೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಚಿಕಿತ್ಸೆಯ ಮೊತ್ತವನ್ನು ಮರುಪಾವತಿ ಮಾಡುವ ಮುನ್ನ, ಅವರು ರೋಗಿಗಳಿಂದ ಯಾವುದೇ ಮೊತ್ತವನ್ನು ಕಟ್ಟಿಸಿಕೊಂಡಿಲ್ಲ ಎಂಬುದನ್ನು ಸುವರ್ಣ ಆರೋಗ್ಯ ಟ್ರಸ್ಟ್‌ನವರು ಖಾತರಿಪಡಿಸಿಕೊಳ್ಳಬೇಕು. ಸರ್ಕಾರ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವ ಬದಲು ಸಮುದಾಯ ಆಸ್ಪತ್ರೆಗಳನ್ನು ಬಲಪಡಿಸುವ ಬಗ್ಗೆ ಇನ್ನಾದರೂ ಗಂಭೀರ ಚಿಂತನೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಮೀಸಲಿಟ್ಟ ಹಾಸಿಗೆಗಳು ಖಾಲಿ ಇದ್ದರೂ ಸೋಂಕಿತರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಹೊರೆ ಉಂಟಾಗುತ್ತಿದೆ’ ಎಂಬ ದೂರುಗಳು ಬಂದಿದ್ದರಿಂದ ಬಿಬಿಎಂಪಿಯು ಕೋವಿಡ್‌ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡುವುದನ್ನು 2020ರ ನ. 18ರಿಂದ ಸ್ಥಗಿತಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT