ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಅಕ್ರಮ| ತುರ್ತು ಕಾಮಗಾರಿ ‘ದರ ಪಟ್ಟಿ’ಯಲ್ಲಿ ಅಧಿಕಾರಿಗಳ ಆಟ

ಅಕ್ರಮ ನಡೆಸಲು ‘ತುರ್ತು’ ವರದಾನ: ವರದಿಯಲ್ಲಿ ಬಹಿರಂಗ
Last Updated 17 ಸೆಪ್ಟೆಂಬರ್ 2019, 9:11 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಗಾಲದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದು, ಪ್ರವಾಹ ಪರಿಹಾರ ಮುಂತಾದ ಕಾಮಗಾರಿಗಳನ್ನು ಟೆಂಡರ್‌ ಕರೆಯದೆಯೇ ತರಾತುರಿಯಲ್ಲಿ ನಡೆಸಬೇಕಾಗುತ್ತದೆ. ಅಧಿಕಾರಿಗಳು ಅಕ್ರಮ ನಡೆಸುವುದಕ್ಕೆ ಇಂತಹ ‘ತುರ್ತು ಕಾಮಗಾರಿ’ಗಳು ವರದಾನವಾಗಿವೆ. ತುರ್ತು ಕಾಮಗಾರಿಗಳಿಗೆ ದರ ಪಟ್ಟಿಯನ್ನು ಅನ್ವಯಿಸುವಾಗ ಅಧಿಕಾರಿಗಳು ನಾನಾ ರೀತಿಯ ‘ಆಟ’ ಆಡುತ್ತಾರೆ.

ತುರ್ತು ಕಾಮಗಾರಿಗಳಿಗೆ ಎಂಜಿನಿಯರ್‌ಗಳು ಅಂದಾಜು ಪಟ್ಟಿ ತಯಾರಿಸುವಾಗ ತಮಗೆ ಬೇಕಾದ ದರ ಪಟ್ಟಿಯನ್ನು ಬಳಸಿಕೊಳ್ಳುವ ಮೂಲಕ ಅವ್ಯವಹಾರಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಾರೆ. ಬಿಬಿಎಂಪಿಯಲ್ಲಿ ಈ ಹಿಂದಿನ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಲಯಗಳಲ್ಲಿ 2008ರಿಂದ 2012ರ ನಡುವೆ ಅನುಷ್ಠಾನಗೊಳಿಸಿದ್ದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ನೇತೃತ್ವದ ಸಮಿತಿ ಇಂತಹ ಅಕ್ರಮಗಳನ್ನು ಉದಾಹರಣೆ ಸಮೇತ ವಿವರಿಸಿದೆ.

ತುರ್ತು ಕಾಮಗಾರಿ ಕೈಗೆತ್ತಿಕೊಂಡ ಬಳಿಕ ಅದರ ಬಿಲ್‌ ತಯಾರಿಸುವಾಗ ಯಾವ ಕಾಲದಲ್ಲಿ ಕಾಮಗಾರಿ ನಡೆಸಲಾಗಿದೆಯೋ ಅದೇ ಅವಧಿಯ ದರ ಪಟ್ಟಿ ಯನ್ನು ಪರಿಗಣಿಸಬೇಕು. ಮಲ್ಲೇಶ್ವರ ವಿಭಾಗದಲ್ಲಿ ರಸ್ತೆ ಗುಂಡಿ ಮುಚ್ಚಿ ಎರಡು ವರ್ಷ ನಂತರ ಎಂಜಿನಿಯರ್‌ಗಳು ಬಿಲ್‌ ತಯಾರಿಸಿದ್ದಾರೆ. ಆದರೆ, ಕಾಮಗಾರಿ ನಡೆದಾಗ ಜಾರಿಯಲ್ಲಿದ್ದ ದರ ಪಟ್ಟಿಯ ಬದಲು ಬಿಲ್‌ ತಯಾರಿಸಿದ ಅವಧಿಯ ದರ ಪಟ್ಟಿ ಪ್ರಕಾರ ಮೊತ್ತಗಳನ್ನು ನಮೂದಿಸಿದ್ದಾರೆ.

ಮಲ್ಲೇಶ್ವರ ವಿಭಾಗದಲ್ಲಿ 2006ರ ನ.18ರಂದು ರಸ್ತೆ ಗುಂಡಿಗಳನ್ನು ಮುಚ್ಚಲಾಗಿತ್ತು. ಈ ಕಾಮಗಾರಿಗೆ (ಕಡತ ಸಂಖ್ಯೆ ಎಂ–362) 2005–06ರ ದರ ಪಟ್ಟಿ ಪ್ರಕಾರ ಒಟ್ಟು ₹ 9.95 ಲಕ್ಷದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. 2005–06ರ ದರ ಪಟ್ಟಿ ಪ್ರಕಾರ ಸಿದ್ಧ ಪಡಿಸಿದ್ದ ಅಂದಾಜು ಪಟ್ಟಿಗೆ 2008ರ ಡಿ.3ರಂದು ಮಂಜೂರಾತಿಯನ್ನೂ ನೀಡಲಾಗಿತ್ತು. ಆದರೆ, ಈ ಕಾಮಗಾರಿಯ ಟೆಂಡರ್‌ ಕರೆದಿದ್ದು 2008ರ ನ.17ರಂದು ಹಾಗೂ ಗುತ್ತಿಗೆದಾರರ ಜೊತೆ ಒಪ್ಪಂದ ಮಾಡಿಕೊಂಡಿದ್ದು 2009ರ ಮಾ. 2ರಂದು. ಅದರ ಪ್ರಕಾರ 2009ರ ಅ. 14ರಂದು ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗಿತ್ತು.

ಮೂಲ ಅಂದಾಜುಪಟ್ಟಿಯಂತೆ ಗುತ್ತಿಗೆದಾರರಿಗೆ ₹ 9.95 ಲಕ್ಷ ಪಾವತಿಸುವ ಬದಲು ಬಿಬಿಎಂಪಿ ₹ 27.04 ಲಕ್ಷ ಪಾವತಿ ಮಾಡಿತ್ತು. ಅಂದರೆ, ಮೂಲ ದರ ಪಟ್ಟಿಯ ಬಿಲ್‌ಗಿಂತ ಶೇ 171.96ರಷ್ಟು ಹೆಚ್ಚುವರಿ ಪಾವತಿ ಮಾಡಲಾಗಿತ್ತು. ಅಷ್ಟೇ ಅಲ್ಲ, 2008–09ರ ದರ ಪಟ್ಟಿಯ ಪ್ರಕಾರ ರಚಿಸಿದ್ದ ಬಿಲ್‌ಗಿಂತಲೂ ಶೇ 9.98ರಷ್ಟು ಹೆಚ್ಚು ಮೊತ್ತ ಪಾವತಿಸಲಾಗಿತ್ತು. ಒಟ್ಟು ಹೆಚ್ಚುವರಿಯಾಗಿ ₹ 17.59 ಲಕ್ಷ ಪಾವತಿ ಮಾಡಲು ಎಂಜಿನಿಯರ್‌ಗಳು ಬಿಲ್‌ ತಯಾರಿಸುವಾಗ 2005–06ರ ದರ ಪಟ್ಟಿ ಬದಲು 2008–09ನೇ ಸಾಲಿನ ದರ ಪಟ್ಟಿಯನ್ನು ಅನುಸರಿಸಿದ್ದರು. ಅನುಸರಿಸಿದ ದರ ಪಟ್ಟಿಯೇ ಬೇರೆ ಆಗಿದ್ದರಿಂದ ಇದರಲ್ಲಿ ಅಕ್ರಮ ನಡೆದಿರುವುದುಮೇಲ್ನೋಟಕ್ಕೆ ಗೊತ್ತಾಗುತ್ತಲೇ ಇರಲಿಲ್ಲ.

ಮಲ್ಲೇಶ್ವರ ವಿಭಾಗದಲ್ಲಿ ಇನ್ನೂ ಮೂರು ಕಾಮಗಾರಿಗಳಲ್ಲೂ (ಎಂ–497, ಎಂ–499, ಎಂ–362) ಇದೇ ರೀತಿ ಅಕ್ರಮಗಳನ್ನು ನಡೆಸಲಾಗಿದೆ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನೀವೂ ಪ್ರತಿಕ್ರಿಯಿಸಿ

ಬಿಬಿಎಂಪಿಯ ಮೂರು ವಲಯಗಳಲ್ಲಿ 2008ರಿಂದ 2012ರ ನಡುವೆ ನಡೆದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾರಿ ಅಕ್ರಮಗಳು ನಡೆದಿರುವುದು ತನಿಖೆಯಿಂದ ಸಾಬೀತಾಗಿದೆ. ಈ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು. ನಿಮ್ಮ ಅನಿಸಿಕೆಗಳನ್ನು (ಭಾವಚಿತ್ರ ಹಾಗೂ ವಿಳಾಸ ಸಮೇತ) ವಾಟ್ಸ್‌ ಆ್ಯಪ್‌ ಮಾಡಿ

ವಾಟ್ಸ್‌ ಆ್ಯಪ್‌ ಸಂಖ್ಯೆ: 9513322930

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT