ಮಂಗಳವಾರ, ಸೆಪ್ಟೆಂಬರ್ 21, 2021
20 °C
ಮಾರುಕಟ್ಟೆಗಳಿಗೆ, ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತ ಸೂಚನೆ

ಅಂತರ ಕಾಪಾಡಿಕೊಳ್ಳದಿದ್ದರೂ ಬೀಳುತ್ತದೆ ₹ 250 ದಂಡ- ಬಿಬಿಎಂಪಿಯಿಂದ ಬಿಗಿ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂದಿನ ಎರಡು ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಉಂಟಾಗುವುದನ್ನು ತಪ್ಪಿಸುವುದು ಬಿಬಿಎಂಪಿ ಪಾಲಿಗೆ ತಲೆನೋವಾಗಿದೆ. ಹಬ್ಬಗಳ ಖರೀದಿ ಭರಾಟೆ ವೇಳೆ ನಗರದ ಮಾರುಕಟ್ಟೆಗಳಲ್ಲಿ ಹಾಗೂ ಮಳಿಗೆಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ವಾರದಲ್ಲಿ ವರಮಹಾಲಕ್ಷ್ಮೀ ವ್ರತ, ಮೊಹರಂ, ತಿಂಗಳ ಅಂತ್ಯದಲ್ಲಿ ಶ್ರೀಕೃಷ್ಣ ಜಾನ್ಮಾಷ್ಟಮಿ ಹಾಗೂ ಸೆಪ್ಟೆಂಬರ್‌ನಲ್ಲಿ  ಗಣೇಶ ಚತುರ್ಥಿ, ದುರ್ಗಾ ಪೂಜೆ ಹಾಗೂ ಮತ್ತು ಅಕ್ಟೋಬರ್ ತಿಂಗಳಲ್ಲಿ ನವರಾತ್ರಿ ಹಬ್ಬಗಳು ಇವೆ. ಹಬ್ಬದ ಸಾಮಗ್ರಿ ಖರೀದಿ ಸಂದರ್ಭದಲ್ಲಿ ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ತಡೆಯುವ ಉದ್ದೇಶದಿಂದ ಹಲವು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಬಿಬಿಎಂಪಿ ವಿಧಿಸಿದೆ. 

ಮಾರ್ಷಲ್‌ಗಳು, ಹಿರಿಯ ಆರೋಗ್ಯ ಪರಿವೀಕ್ಷಕರು ಮತ್ತು ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಅಂಗಡಿಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು ಮತ್ತು ಮಾರುಕಟ್ಟೆಗಳಿಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಕೋವಿಡ್ ನಿಯಂತ್ರಣ ನಿಯಮಗಳು ಪಾಲನೆ ಆಗುತ್ತಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ರಾತ್ರಿ ಕರ್ಫ್ಯೂ ಸಮಯದಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ಕಡ್ಡಾಯವಾಗಿ ಮುಚ್ಚಿಸಬೇಕು. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ನಿಯಮಗಳನ್ನು ಪಾಲಿಸದಿರುವುದು ಕಂಡು ಬಂದಲ್ಲಿ ಅಂತಹವರಿಗೆ ದಂಡ ವಿಧಿಸುವುದರ ಜೊತೆಗೆ ಅವರ ವಿರುದ್ಧ 2005ರ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತರು ಆದೇಶ ಮಾಡಿದ್ದಾರೆ.

ಮಾಸ್ಕ್‌ ಧರಿಸದವರಿಗೆ ಮಾತ್ರವಲ್ಲ ಅಂತರ ಕಾಪಾಡದ ಸಾರ್ವಜನಿಕರಿಗೆ ಇದಕ್ಕೆ ಕ್ರಮ ಕೈಗೊಳ್ಳದ ವರ್ತಕರಿಗೂ ₹ 250 ದಂಡ ವಿಧಿಸಬೇಕು. ಈ ನಿರ್ದೇಶನಗಳ ಜಾರಿಯ ಬಗ್ಗೆ ಮೇಲ್ವಿಚಾರಣೆ ನಡೆಸುವಂತೆ ಆಯಾ ವಲಯಗಳ ಜಂಟಿ ಆಯುಕ್ತರಿಗೆ, ಆರೋಗ್ಯಾಧಿಕಾರಿಗಳಿಗೆ ಮತ್ತು ಮುಖ್ಯ ಮಾರ್ಷಲ್‌ಗಳಿಗೆ ಸೂಚಿಸಿದ್ದಾರೆ

ಮಾರುಕಟ್ಟೆ–ಮಳಿಗೆಗಳಲ್ಲಿ ಜನಜಾಗೃತಿ: ‘ಕೋವಿಡ್ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸುವುದನ್ನು ಉತ್ತೇಜಿಸಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಪಾಲಿಕೆಯ ಆರೋಗ್ಯ ವೈದ್ಯಾಧಿಕಾರಿಗಳು ತಮ್ಮ ಅಧೀನದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದು ವಾಹನ ಬಳಸಿಕೊಂಡು ಹಬ್ಬದ ಹಿಂದಿನ ದಿನ ಹಾಗೂ ಹಬ್ಬದ ದಿನ ಸಂದೇಶ ಹಾಗೂ ಸೂಚನೆಗಳನ್ನು ಧ್ವನಿವರ್ಧಕದ ಮೂಲಕ ಘೋಷಿಸುವ ಮೂಲಕ ಸಾರ್ವಜನಿಕರಲ್ಲಿ ಮತ್ತು ವರ್ತಕರಲ್ಲಿ ಅರಿವು ಮೂಡಿಸಬೇಕು. ಮುಖ್ಯ ಮಾರ್ಷಲ್‌ ಅವರು ಮಾರ್ಷಲ್‌ಗಳಿಗೆ ನಿಯೋಜಿಸಿರುವ ಗಸ್ತು ವಾಹನಗಳ ಮೂಲಕವೂ ಹಬ್ಬದ ಹಿಂದಿನ ದಿನ ಹಾಗೂ ಹಬ್ಬದ ದಿನ ಕೋವಿಡ್ ಮುಂಜಾಗ್ರತಾ ಕ್ರಮಗಳ ಬಗ್ಗೆ  ಸಂದೇಶ ಹಾಗೂ ಸೂಚನೆಗಳನ್ನು ಧ್ವನಿವರ್ಧಕದ ಮೂಲಕ ಘೋಷಿಸಬೇಕು’ ಎಂದು ಗೌರವ್‌ ಗುಪ್ತ ಸಲಹೆ ನೀಡಿದ್ದಾರೆ.

ಸೋಂಕು ನಿಯಂತ್ರಣಕ್ಕೆ ಮಾರ್ಗಸೂಚಿಗಳು

* ಮಾಸ್ಕ್ ಧರಿಸುವ ಸರಿಯಾದ ಕ್ರಮದ ಬಗ್ಗೆಯೂ ಸರಿಯಾದ ತಿಳಿವಳಿಕೆ ನೀಡಬೇಕು. ಪ್ರಮುಖ ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸದವರಿಗೆ ತಲಾ ₹ 250 ದಂಡ ವಿಧಿಸುವುದನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು.

* ಪಾಲಿಕೆ ವ್ಯಾಪ್ತಿಯ ಎಲ್ಲಾ ಮಾರುಕಟ್ಟೆಗಳಲ್ಲಿ ಅಂತರ ಕಾಯ್ದುಕೊಳ್ಳುವುದಕ್ಕೆ ಮಾರ್ಷಲ್‌ಗಳು ಹಾಗೂ ಹಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಕಿರಿಯ ಆರೋಗ್ಯ ಪರಿವೀಕ್ಷಕರು ಅಗತ್ಯ ಕ್ರಮವಹಿಸಬೇಕು. ಅಂತರ ಕಾಪಾಡಲು ಕ್ರಮ ವಹಿಸದ ವರ್ತಕರಿಗೆ ಮತ್ತು ಈ ನಿಯಮ ಉಲ್ಲಂಘಿಸುವ ಸಾರ್ವಜನಿಕರಿಗೆ ₹ 250 ದಂಡ ವಿಧಿಸಬೇಕು.

* ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಮಾಲ್‌ಗಳ ಮಾಲೀಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕನಿಷ್ಠ ಪಕ್ಷ ಕೋವಿಡ್ ಲಸಿಕೆಯ ಮೊದಲನೇ ಡೋಸ್ ಲಸಿಕೆ ಪಡೆದಿರಬೇಕು.

* ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಮಾಲ್‌ಗಳ ಮಾಲೀಕರು ಹಾಗೂ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಮಾಸ್ಕ್ ಧರಿಸುವಂತೆ ಮತ್ತು ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಕಲ್ಪಿಸಬೇಕು ಮತ್ತು ನಿಗಾ ಇಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು