ಶನಿವಾರ, ಜೂನ್ 25, 2022
25 °C

ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ: ಗಡುವಿಗೆ ಒಂದು ವಾರ ಮುನ್ನವೇ ಅಧಿಸೂಚನೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಹಾಗೂ ವಾರ್ಡ್‌ವಾರು ಮೀಸಲಾತಿ ಅಧಿಸೂಚನೆಯನ್ನು 8 ವಾರಗಳ ಒಳಗೆ ಪ್ರಕಟಿಸುವಂತೆ ಸುಪ್ರೀಂ ಮೇ 20 ರಂದು ಆದೇಶ ನೀಡಿದ್ದು, ಈ ಗಡುವಿಗಿಂತ ಒಂದು ವಾರ ಮುನ್ನವೇ ವಾರ್ಡ್‌ ಮರುವಿಂಗಡಣೆ ಮಾಡಿ ಮೀಸಲಾತಿ ಪ್ರಕಟಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು (ಎಸಿಎಸ್‌), ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮಂಗಳವಾರ ಪತ್ರ ಬರೆದಿದ್ದಾರೆ. ‘2020ರ ಬಿಬಿಎಂಪಿ ಕಾಯ್ದೆ ಅನ್ವಯ ಹೊಸತಾಗಿ ಸ್ಥಾಪನೆಯಾಗಿರುವ ಪಾಲಿಕೆಯ ವಾರ್ಡ್‌ಗಳ ಮರುವಿಂಗಡಣೆ ಮತ್ತು ವಾರ್ಡ್‌ವಾರು ಮೀಸಲಾತಿ ಪಟ್ಟಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಎಂಟು ವಾರಗಳ ಒಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಹೇಳಿದೆ. ಈ ಕುರಿತ ಅಧಿಸೂಚನೆಯನ್ನು ಒಂದು ವಾರ ಮುಂಚೆಯೇ ಹೊರಡಿಸುವಂತೆ ಮುಖ್ಯ ಕಾರ್ಯದರ್ಶಿಯವರು ನಿರ್ದೇಶನ ನೀಡಿದ್ದಾರೆ. ಮರುವಿಂಗಡಣೆಗೆ ಸಂಬಂಧಿಸಿದ ವರದಿಯನ್ನು ತಕ್ಷಣವೇ ಸಲ್ಲಿಸಬೇಕು’ ಎಂದು ಎಸಿಎಸ್‌ ಅವರು ಸೂಚಿಸಿದ್ದಾರೆ. ವಾರ್ಡ್‌ ಮರುವಿಂಗಡಣೆ ವರದಿಯನ್ನು ಎರಡೇ ದಿನಗಳಲ್ಲಿ ಸಲ್ಲಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ನೇತೃತ್ವದ ಸಮಿತಿ ಸಿದ್ಧತೆ ಮಾಡಿಕೊಂಡಿದೆ.

‘2011ರ ಜನಗಣತಿ ಆಧಾರದಲ್ಲಿ ವಾರ್ಡ್‌ಗಳನ್ನು ವಿಂಗಡಿಸಿದ್ದೇವೆ. ಪ್ರತಿ ವಾರ್ಡ್‌ನ ಸರಾಸರಿ ಜನಸಂಖ್ಯೆ 35 ಸಾವಿರ ಇರುವಂತೆ ನೋಡಿಕೊಂಡಿದ್ದೇವೆ. ಯಾವುದೇ ವಾರ್ಡ್‌ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಹೋಗುವುದಿಲ್ಲ’ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು. ‘ನಮಗಿನ್ನೂ 7 ವಾರ ಕಾಲಾವಕಾಶವಿದೆ. ವರದಿಯ ಕರಡು ಪ್ರಕಟಿಸಿದ ಬಳಿಕ ಸಲಹೆ ಹಾಗೂ ಆಕ್ಷೇಪಣೆ ಸಲ್ಲಿಕೆಗೆ ಎರಡು ವಾರ ಕಾಲಾವಕಾಶ ನೀಡಬೇಕಾಗುತ್ತದೆ. ಆ ಬಳಿಕ ಅದನ್ನು ಅಂತಿಮಗೊಳಿಸಲು ಕನಿಷ್ಠ ಒಂದು ವಾರವಾದರೂ ಬೇಕು’ ಎಂದರು.

‘ವಲಯಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ತಿಳಿಸಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು