ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎರವಲು’ ಬಂದರು ಠಿಕಾಣಿ ಹೂಡಿದರು!

ಬಿಬಿಎಂಪಿ: ಎರವಲು ಸೇವೆಯಲ್ಲಿ ನೂರಕ್ಕೂ ಅಧಿಕ ಎಂಜಿನಿಯರ್‌ಗಳು
Last Updated 19 ಜುಲೈ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಮಹಾನಗರ ಪಾಲಿಕೆಗಳಲ್ಲಿ ಸಿಬ್ಬಂದಿಯ ಕೊರತೆ ಇದ್ದಾಗ ಇತರೆ ಇಲಾಖೆಗಳ ಅಧಿಕಾರಿಗಳನ್ನು ಎರವಲು ಮೇಲೆ ಬಳಸಿಕೊಳ್ಳುವುದು ಸಹಜ. ಆದರೆ, ಸಿಬ್ಬಂದಿ ನೇಮಕ ಆದ ಬಳಿಕವೂ ಬಿಬಿಎಂಪಿ ಆಡಳಿತವು ಎರವಲು ಸೇವೆಯಲ್ಲಿರುವ ನೂರಕ್ಕೂ ಅಧಿಕ ಎಂಜಿನಿಯರ್‌ ಗಳನ್ನು ಪೋಷಿಸುತ್ತಿದೆ. ಪರಿಣಾಮವಾಗಿ ಪಾಲಿಕೆಯ ಬೊಕ್ಕಸಕ್ಕೆ ಪ್ರತಿ ತಿಂಗಳೂ ಲಕ್ಷಾಂತರ ರೂಪಾಯಿ ಹೊರೆ ಬೀಳುತ್ತಿದೆ.

ಲೋಕೋಪಯೋಗಿ ಇಲಾಖೆಯ 101 ಎಂಜಿನಿಯರ್‌ಗಳು ಪಾಲಿಕೆಯಲ್ಲಿ ಸುಮಾರು 10 ವರ್ಷಗಳಿಂದ ಠಿಕಾಣಿ ಹೂಡಿದ್ದಾರೆ. ಪುರಪಿತೃಗಳಿಗೆ ಕೆಲವು ಅಧಿಕಾರಿಗಳೆಂದರೆ ಅಚ್ಚುಮೆಚ್ಚು. ಅವರನ್ನು ಯಾವತ್ತೂ ಬಿಟ್ಟುಕೊಡುವುದಿಲ್ಲ. ವರ್ಗಾವಣೆ ಆದೇಶ ಬಂದರೂ ಅದನ್ನು ಒಂದೆರಡು ದಿನಗಳಲ್ಲಿ ರದ್ದು ಮಾಡಿಸಿಕೊಳ್ಳುತ್ತಾರೆ. ಈ ‘ಹೊಂದಾಣಿಕೆ’ಯಿಂದಲೇ ಕೆಲವರು ಇಲ್ಲೇ ಉಳಿದಿದ್ದಾರೆ.

ಪಾಲಿಕೆಯ ಮಾಹಿತಿ ತಂತ್ರಜ್ಞಾನ ಸಲಹೆಗಾರರ ಕಾರ್ಯ ನಿರ್ವಹಣೆ ಬಗ್ಗೆ ಪಾಲಿಕೆ ಸಭೆಯಲ್ಲಿ ಆಗಾಗ ಆಕ್ಷೇಪ ಕೇಳಿ ಬರುತ್ತಲೇ ಇರುತ್ತದೆ. ‘ಸಲಹೆಗಾರರು 11 ವರ್ಷಗಳಿಂದ ಇದ್ದಾರೆ. ಆದರೆ, ಅವರ ಕೊಡುಗೆ ನಗಣ್ಯ’ ಎಂಬುದು ಸದಸ್ಯರ ಆರೋಪ. ರಾಜ್ಯ ಲೆಕ್ಕಪತ್ರ, ತೋಟಗಾರಿಕೆ, ಪಂಚಾಯತ್‌ರಾಜ್, ಕೆಪಿಟಿಸಿಎಲ್‌, ಆರೋಗ್ಯ, ಸಹಕಾರ, ನಗರ ಯೋಜನೆ ಇಲಾಖೆಯಿಂದ ಬಂದವರು ವಾಪಸ್‌ ಹೋಗಲು ಮನಸ್ಸು ಮಾಡಿಲ್ಲ.

ಎರವಲು ಸೇವೆಗೆ ನಿಯೋಜನೆ ಗೊಂಡವರು ಕನಿಷ್ಠ ಮೂರು ವರ್ಷದಿಂದ ಗರಿಷ್ಠ ಐದು ವರ್ಷ ಸೇವೆ ಸಲ್ಲಿಸಬಹುದು. ಆದರೆ, ಹೆಚ್ಚು ಮಂದಿ ಎರವಲು ಸೇವೇ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಇಲ್ಲವೇ ಅಧಿಕಾರಿಗಳ ಕಾರ್ಯ ನಿರ್ವಹಣೆ ಸಮರ್ಪಕವಾಗಿಲ್ಲ ಎನಿಸಿದರೆ ತಕ್ಷಣವೇ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಅವಕಾಶವಿದೆ. ಆದರೆ ಇದ್ಯಾವುದೂ ನಡೆಯುತ್ತಿಲ್ಲ.

ಎರವಲು ಸೇವೆಯ ಅಧಿಕಾರಿಗಳು (5 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ)

ಅಧಿಕಾರಿಗಳು; ಸಂಖ್ಯೆ

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು; 12

ಸಹಾಯಕ ನಿರ್ದೇಶಕ (ನಗರ ಯೋಜನೆ); 1

ಸಹಾಯಕ ಎಂಜಿನಿಯರ್‌ಗಳು; 68

ಕಿರಿಯ ಎಂಜಿನಿಯರ್‌ಗಳು; 28

ಪರಿಸರ ಎಂಜಿನಿಯರ್‌ಗಳು; 2

ಬೇರೆ ನೌಕರರು;3

ನಿರ್ದೇಶನಕ್ಕೂ ಬೆಲೆ ಇಲ್ಲ

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು 1977ರ ನಿಯಮ 16ರ ಅಡಿಯಲ್ಲಿ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಸಮಾನ ವೇತನ ಶ್ರೇಣಿಗೆ ನೇಮಕ ಮಾಡಲು ಅವಕಾಶ ಇದೆ. ಕರ್ನಾಟಕ ನಾಗರಿಕ ಸೇವಾ ನಿಯಮ 50 (3) ಹಾಗೂ 419 (ಬಿ) ಪ್ರಕಾರ ನಿಯೋಜನಾ ಅವಧಿಯನ್ನು ಮೂರು ವರ್ಷಕ್ಕೆ ಮಿತಿಗೊಳಿಸಲಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಈ ಅವಧಿಯನ್ನು ಒಂದು ವರ್ಷ ವಿಸ್ತರಿಸಬಹುದು. ಮೂರು ವರ್ಷ ಪೂರೈಸಿರುವ ಎಂಜಿನಿಯರ್‌ಗಳನ್ನು ಮಾತೃ ಇಲಾಖೆಗೆ ಕಳುಹಿಸುವಂತೆ ನಗರಾಭಿವೃದ್ಧಿ ಇಲಾಖೆ 2016ರಲ್ಲಿ ನಿರ್ದೇಶನ ನೀಡಿತ್ತು. ಆ ಬಳಿಕ ನಾಲ್ಕೈದು ಅಧಿಕಾರಿಗಳಷ್ಟೇ ಮಾತೃ ಇಲಾಖೆಗೆ ಮರಳಿದ್ದಾರೆ.

*ಸಿ ಅಂಡ್‌ ಆರ್‌ ನಿಯಮ ಜಾರಿಗೆ ಬಂದರೆ ಎರವಲು ಸಿಬ್ಬಂದಿಯ ಹಾವಳಿಗೆ ಕಡಿವಾಣ ಬೀಳಲಿದೆ.

–ಅಮೃತ್‌ರಾಜ್‌, ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ

ನೇರ ನೇಮಕಕ್ಕೆ ಆದ್ಯತೆ, ಎರವಲು ಸೇವೆಗೆ ಕಡಿವಾಣ

ಬಿಬಿಎಂಪಿ ವೃಂದ ಹಾಗೂ ನೇಮಕಾತಿ ನಿಯಮ–2018 ಕರಡು ಪ್ರಕಟ

ಬೆಂಗಳೂರು: ಬಿಬಿಎಂಪಿ ನೌಕರರು ಮತ್ತು ಸಿಬ್ಬಂದಿ ನೇಮಕಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯು ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಅಧಿಕಾರಿಗಳು ಮತ್ತು ನೌಕರರ ಸಾಮಾನ್ಯ ವೃಂದ ಮತ್ತು ನೇಮಕಾತಿ) ನಿಯಮಗಳು 2018’ ಕರಡನ್ನು ಪ್ರಕಟಿಸಿದೆ.

ಈ ಮೂಲಕ ಬಿಬಿಎಂಪಿ ನೌಕರರ ಬಹುದಿನಗಳ ಬೇಡಿಕೆ ಈಡೇರಿದ್ದು, ಇದರಿಂದ ನೇಮಕಾತಿಯಲ್ಲಿ ಕ್ರಮಬದ್ಧತೆ ಬರಲಿದೆ.

ಇತರ ಇಲಾಖೆಗಳಿಂದ ಎರವಲು ಸೇವೆ ಪಡೆಯುವುದಕ್ಕೆ ಕಡಿವಾಣ ಹಾಕಿ, ‘ಎ’,‘ಬಿ’ ಮತ್ತು ‘ಸಿ’ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ನೇರ ನೇಮಕಾತಿ ಮಾಡಲು ಅವಕಾಶ ನೀಡಲಾಗಿದೆ.

ಈ ಕರಡನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದ್ದು, 30 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

ಹುದ್ದೆಗಳ ವರ್ಗೀಕರಣ: ಬಿಬಿಎಂಪಿಯಲ್ಲಿ ಎ,ಬಿ,ಸಿ ಮತ್ತು ಡಿ ವರ್ಗದ ಹುದ್ದೆಗಳೆಂದು ವರ್ಗೀಕರಣ ಮಾಡಲಾಗಿದೆ. ಡಿ ವರ್ಗ ಹೊರತುಪಡಿಸಿ ಉಳಿದ ವರ್ಗಗಳ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತದೆ. ಇದಕ್ಕೆ ಕೆಪಿಎಸ್‌ಸಿ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು. ಸರ್ಕಾರ ಅಥವಾ ಬಿಬಿಎಂಪಿ ಆಯುಕ್ತರು ಕಾಲ– ಕಾಲಕ್ಕೆ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳಬಹುದು.

* ‘ಎ’ ವರ್ಗದ ಹುದ್ದೆಗಳು: ₹28,100 ರಿಂದ ₹50,100 ವೇತನ ಶ್ರೇಣಿ

ಈ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಕಾಲ ಕಾಲಕ್ಕೆ ನಿರ್ಧಾರ ತೆಗೆದುಕೊಳ್ಳುತ್ತದೆ.

*‘ಬಿ ವರ್ಗದ ಹುದ್ದೆಗಳು: ₹21,600–₹40,050 ರಿಂದ ₹26,000–₹47,700

* ‘ಸಿ’ ವರ್ಗದ ಹುದ್ದೆಗಳು: ₹16,600–₹21,000 ರಿಂದ ₹20,000–₹36,300

* ‘ಡಿ’ ವರ್ಗದ ಹುದ್ದೆಗಳು: ₹ 9600–₹14,550 ರಿಂದ ₹11,000–₹19,000

ಬಿ, ಸಿ ಮತ್ತು ಡಿ ವರ್ಗದ ಹುದ್ದೆಗಳ ಭರ್ತಿಗೆ ಆಯುಕ್ತರು ಅಥವಾ ಅವರಿಂದ ನೇಮಿಸಲ್ಪಟ್ಟ ಅಧಿಕಾರಿ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಯಾವ ಹುದ್ದೆಗಳಿಗೆ ಐಎಎಸ್‌ ಅಧಿಕಾರಿಗಳು: ಆಯುಕ್ತರು, ವಿಶೇಷ ಆಯುಕ್ತರು (ಯೋಜನೆ), ವಿಶೇಷ ಆಯುಕ್ತರು (ಸಂಪನ್ಮೂಲ ಮತ್ತು ಹಣಕಾಸು), ಹೆಚ್ಚುವರಿ ಆಯುಕ್ತರು (ಆಡಳಿತ) ಹುದ್ದೆಗಳಿಗೆ ಐಎಎಸ್‌ ಅಧಿಕಾರಿಗಳು ಇರುತ್ತಾರೆ.

ಜಂಟಿ ಆಯುಕ್ತರ 11 ಹುದ್ದೆಗಳಿದ್ದು ಇವುಗಳಲ್ಲಿ ಶೇ 90ರಷ್ಟು ಹುದ್ದೆಗಳನ್ನು ಕೆಎಎಸ್‌ನ ಹಿರಿಯ ಶ್ರೇಣಿಯ ಅಧಿಕಾರಿಗಳನ್ನು ಎರವಲು ಸೇವೆ ಮೇಲೆ ಭರ್ತಿ ಮಾಡಲಾಗುವುದು. ಉಳಿದ ಶೇ 10 ಹುದ್ದೆಗಳನ್ನು ಉಪ ಆಯುಕ್ತರ(ಕಂದಾಯ) ವೃಂದದಿಂದ ಬಡ್ತಿ ನೀಡಲಾಗುವುದು.

ಉಪ ಆಯುಕ್ತರ 16 ಹುದ್ದೆಗಳಿದ್ದು, ಇದರಲ್ಲಿ ಶೇ 50ರಷ್ಟು ಕೆಎಎಸ್‌ ಅಧಿಕಾರಿಗಳ(ಹಿರಿಯ ವೇತನ ಶ್ರೇಣಿ) ನಿಯೋಜನೆ, ಉಳಿದ ಶೇ 50 ಹುದ್ದೆಗಳಿಗೆ ಬಿಬಿಎಂಪಿ ಕಂದಾಯ ಅಧಿಕಾರಿಗಳನ್ನು ಹಿರಿತನ ಮತ್ತು ಮೆರಿಟ್‌ ಆಧಾರದಲ್ಲಿ ಬಡ್ತಿ ನೀಡಲಾಗುವುದು.

ವೃಂದ ಬದಲಾವಣೆಗೆ ಅವಕಾಶ: ನೌಕರರು ವೃಂದ ಬದಲಾವಣೆ ಮಾಡಿಕೊಳ್ಳಲು ಅವಕಾಶವೂ ಇದೆ. ಉದಾಹರಣೆಗೆ ಪ್ರಥಮ ದರ್ಜೆ ಕಂದಾಯ ಇನ್ಸ್‌ಪೆಕ್ಟರ್‌ ಪ್ರಥಮ ವಿಭಾಗೀಯ ಸಹಾಯಕ ಹುದ್ದೆ ವೃಂದಕ್ಕೆ ಬದಲಾವಣೆ ಕೋರಬಹುದು. ನಿಯಮ 11 ರಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಸಕ್ಷಮ ನೇಮಕ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿದಾರನ ಹಿರಿತನ ಮತ್ತು ಸೇವೆಯ ಬಗ್ಗೆ ತೃಪ್ತಿ ಕಂಡು ಬಂದರೆ ಮಾತ್ರ ವೃಂದ ಬದಲಿಸಬಹುದಾಗಿದೆ.

ಎರಡು ವರ್ಷ ಪ್ರೊಬೆಷನರಿ: ನೇರ ನೇಮಕಾತಿಗೊಳ್ಳುವ ಎಲ್ಲ ವರ್ಗಗಳ ಹುದ್ದೆಗಳ ಪ್ರೊಬೆಷನರಿ ಅವಧಿ ಎರಡು ವರ್ಷಗಳು. ‘ಸಿ’ ಮತ್ತು ಅದರ ಮೇಲಿನ ದರ್ಜೆಯ ಹುದ್ದೆಗಳಿಗೆ ನೇಮಕಗೊಂಡವರುಬಿಬಿಎಂಪಿ ಆಯುಕ್ತರು ನಿಗದಿ ಮಾಡಿದ ಬೇಸಿಕ್‌ ಮಟ್ಟದ ಕಂಪ್ಯೂಟರ್‌ ತರಬೇತಿ ಪಡೆಯದೇ ಇದ್ದರೆ ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಇದ್ದರೆ, ಕಾಯಂ ಆಗುವುದಿಲ್ಲ.

ಬಡ್ತಿಗೆ ಕನ್ನಡ ಪರೀಕ್ಷೆ ಉತ್ತೀರ್ಣ ಕಡ್ಡಾಯ

ಕರ್ನಾಟಕ ನಗರಪಾಲಿಕೆ ಉದ್ಯೋಗಿಗಳು (ಷರತ್ತು ಮತ್ತು ಸೇವೆ) ನಿಯಮ, 1993 ಅನ್ವಯ ಕನ್ನಡ ಭಾಷೆ ಮತ್ತು ಸೇವೆಗಳ ಪರೀಕ್ಷೆ ನಡೆಸಬೇಕು. ಉನ್ನತ ಹುದ್ದೆಗಳಿಗೆ ಬಡ್ತಿಗಾಗಿ ಕನ್ನಡ ಭಾಷೆ ಮತ್ತು ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ.ಅಷ್ಟೇ ಅಲ್ಲ, ವಾರ್ಷಿಕ ವೇತನ ಹೆಚ್ಚಳ ಮತ್ತು ಕಾಯಂ ಆಗಲು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಈ ನಿಯಮ 40 ವರ್ಷ ವಯಸ್ಸು ದಾಟಿದವರಿಗೆ ಅನ್ವಯವಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT