ಗುರುವಾರ , ಜನವರಿ 27, 2022
27 °C
ರೂಪದರ್ಶಿ ಮಾಡುವುದಾಗಿ ಆಮಿಷ, ಅರೆನಗ್ನ ಫೋಟೊ, ವಿಡಿಯೊ ತರಿಸಿಕೊಂಡು ಬ್ಲ್ಯಾಕ್‌ಮೇಲ್‌

ನಕಲಿ ಖಾತೆ ಮೂಲಕ 20 ಯುವತಿಯರಿಗೆ ಬ್ಲ್ಯಾಕ್‌ಮೇಲ್, ಬಿಸಿಎ ವಿದ್ಯಾರ್ಥಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು, ರೂಪದರ್ಶಿ ಮಾಡುವುದಾಗಿ ಆಮಿಷವೊಡ್ಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಪ್ರಪಂಚ್ ನಾಚಪ್ಪ (21) ಎಂಬಾತನನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೊಡಗಿನ ಪ್ರಪಂಚ್, ನಗರದ ಕಾಲೇಜೊಂದರಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ. ಯುವತಿಯರ ಹೆಸರಿನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆಗಳನ್ನು ತೆರೆದು ವಂಚಿಸುತ್ತಿದ್ದ. ಯುವತಿಯೊಬ್ಬರು ನೀಡಿದ್ದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಇನ್‌ಸ್ಟಾಗ್ರಾಂ ಆ್ಯಪ್‌ನಲ್ಲಿ ನಾಲ್ಕು ನಕಲಿ ಖಾತೆಗಳನ್ನು ಆರೋಪಿ ತೆರೆದಿದ್ದ. ಅದರ ಮೂಲಕ 20 ಯುವತಿಯರನ್ನು ಸಂಪರ್ಕಿಸಿ, ಅವರ ಅರೆನಗ್ನ ಫೋಟೊ ಹಾಗೂ ವಿಡಿಯೊಗಳನ್ನು ತರಿಸಿಕೊಂಡು ಬ್ಲ್ಯಾಕ್‌ಮೇಲ್‌ ಮಾಡಿರುವ ಮಾಹಿತಿ ಇದುವರೆಗಿನ ತನಿಖೆಯಿಂದ ಗೊತ್ತಾಗಿದೆ. ನೊಂದ ಯುವತಿಯರ ಹೇಳಿಕೆ ಪಡೆಯಲಾಗುತ್ತಿದೆ’ ಎಂದೂ ತಿಳಿಸಿದರು.

ನಗ್ನ ಫೋಟೊ ಹಾಗೂ ಹಣಕ್ಕೆ ಬೇಡಿಕೆ: ‘ಆರೋಪಿ ಪ್ರಪಂಚ್, ನಕಲಿ ಖಾತೆಗಳಿಂದ ಯುವತಿಯರಿಗೆ ಫ್ರೇಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಯುವತಿಯರು ರಿಕ್ವೆಸ್ಟ್ ಸ್ವೀಕರಿಸುತ್ತಿದ್ದಂತೆ ಚಾಟಿಂಗ್ ಮಾಡಲಾರಂಭಿಸುತ್ತಿದ್ದ’ ಎಂದೂ ಅಧಿಕಾರಿ ಹೇಳಿದರು.

‘ನನಗೆ ವಸ್ತ್ರ ವಿನ್ಯಾಸಕರ ಪರಿಚಯವಿದೆ. ನಿಮ್ಮನ್ನು ರೂಪದರ್ಶಿ ಮಾಡುತ್ತೇನೆ’ ಎಂಬುದಾಗಿ ಯುವತಿಯರಿಗೆ ಆರೋಪಿ ಹೇಳುತ್ತಿದ್ದ. ಆತನ ಮಾತು ನಂಬುತ್ತಿದ್ದ ಯುವತಿಯರು, ತಮ್ಮ ಫೋಟೊ ಹಾಗೂ ವಿಡಿಯೊಗಳನ್ನು ಕಳುಹಿಸುತ್ತಿದ್ದರು. ಅದೇ ಫೋಟೊ ಹಾಗೂ ವಿಡಿಯೊವನ್ನು ಅಶ್ಲೀಲವಾಗಿ ಬಿಂಬಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಹೇಳಿ ಆರೋಪಿ ಯುವತಿಯರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.