ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖಾಸಗಿ ಪಾಲುದಾರಿಕೆಯಲ್ಲಿ ಅಪಾರ್ಟ್‌ಮೆಂಟ್‌: ಬಿಡಿಎ ಚಿಂತನೆ

Published 10 ಡಿಸೆಂಬರ್ 2023, 20:15 IST
Last Updated 10 ಡಿಸೆಂಬರ್ 2023, 20:15 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ತನ್ನ ಜಮೀನಿನಲ್ಲಿ ಖಾಸಗಿ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ  ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಚಿಂತನೆ ನಡೆಸಿದೆ.

ನಗರದ ವಿವಿಧ ಭಾಗಗಳಲ್ಲಿ ₹ 1,000 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ಬಿಡಿಎ ಫ್ಲಾಟ್‌ಗಳಲ್ಲಿ ಸುಮಾರು 3,000 ಫ್ಲ್ಯಾಟ್‌ಗಳು ಮಾರಾಟವಾಗದಿರುವುದು, ಬಿಡಿಎ ಚಿಂತನೆ ನಡೆಸಲು ಕಾರಣವಾಗಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆಗಳಾಗಿವೆ. ರಿಯಲ್ ಎಸ್ಟೇಟ್ ಡೆವಲಪರ್‌ಗಳೊಂದಿಗೆ ಜಂಟಿ ಉದ್ಯಮಕ್ಕೆ ಪ್ರವೇಶಿಸುವ ಪರಿಕಲ್ಪನೆಯನ್ನು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಗರದಾದ್ಯಂತ ಬಿಡಿಎ ದೊಡ್ಡ ಪ್ರಮಾಣದ ಖಾಲಿ ಜಮೀನು ಹೊಂದಿರುವುದರಿಂದ, ಖಾಸಗಿ ಡೆವಲಪರ್‌ಗಳ ಪಾಲುದಾರಿಕೆಯಲ್ಲಿ ಕೈಗೆಟುಕುವ ದರದಲ್ಲಿ ಫ್ಲ್ಯಾಟ್‌ಗಳನ್ನು ನಿರ್ಮಿಸುವುದು ಉತ್ತಮ. ಬಿಡಿಎ ಭೂಮಿ ಒದಗಿಸುವುದು ಬಿಟ್ಟು ಯಾವುದೇ ಹೂಡಿಕೆ ಮಾಡುವುದಿಲ್ಲ. ಖಾಸಗಿಯವರು ಫ್ಲ್ಯಾಟ್‌ ನಿರ್ಮಿಸಿದ ಬಳಿಕ ನಿರ್ದಿಷ್ಟ ಪ್ರಮಾಣದ ಆದಾಯ ಅಥವಾ ಮಾರಾಟ ಮಾಡಬಹುದಾದ ಫ್ಲ್ಯಾಟ್‌ಗಳು ಬಿಡಿಎಗೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.

ಅಂತಹ ಪ್ರಸ್ತಾವ ಚರ್ಚೆಗೆ ಬಂದಿರುವುದು ನಿಜ. ಆನಂತರ ಈ ಬಗ್ಗೆ ಹೆಚ್ಚಿನ ಸಭೆಗಳು ನಡೆದಿಲ್ಲ. ಉತ್ತಮ ಸೌಕರ್ಯಗಳನ್ನು ಒದಗಿಸಿ ಫ್ಲ್ಯಾಟ್‌ಗಳನ್ನು ಬಿಡಿಎಯಿಂದ ನಿರ್ಮಿಸಲಾಗಿತ್ತು. ಆದರೆ, ಅದಕ್ಕೆ ಉತ್ತಮ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗದ ಕಾರಣ, ಫ್ಲ್ಯಾಟ್‌ಗಳು ಮಾರಾಟವಾಗದೇ ಉಳಿದಿವೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭೂಮಾಲೀಕರೊಂದಿಗೆ ಇದೇ ಮಾದರಿಯಲ್ಲಿ ಫ್ಲ್ಯಾಟ್‌ಗಳನ್ನು ನಿರ್ಮಿಸಿ ಶಸ್ವಿಯಾಗಿರುವ ಡೆವಲಪರ್‌ಗಳು ಬಿಡಿಎ ಪ್ರಸ್ತಾವವನ್ನು ಸ್ವಾಗತಿಸಿದ್ದಾರೆ. ‘ನಿರ್ಮಿಸುವ ಫ್ಲ್ಯಾಟ್‌ಗಳಲ್ಲಿ ಶೇ 28ರಿಂದ ಶೇ 50ರವರೆಗೆ ಜಮೀನು ಮಾಲೀಕರಿಗೆ ನೀಡುವ ಒಪ್ಪಂದದಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದೆ. ಇದೇ ಮಾದರಿಯಲ್ಲಿ ಫ್ಲ್ಯಾಟ್‌ ಹಂಚಿಕೆ ಅಥವಾ ಆದಾಯ ಹಂಚಿಕೆಯ ಬಗ್ಗೆ ಬಿಡಿಎಯೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು’ ಎಂದು ಪ್ರಮುಖ ಬಿಲ್ಡರ್‌ ಒಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT