ಸೋಮವಾರ, ಜನವರಿ 25, 2021
17 °C
ಕೆಎಎಸ್‌ ಅಧಿಕಾರಿ ಸುಧಾ ನಿಕಟವರ್ತಿಗಳ ಮನೆಗಳಲ್ಲಿ ದಾಖಲೆಗಳ ವಶ

ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಲೂಟಿ

ವಿ.ಎಸ್‌. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ವಿವಿಧ ಬಡಾವಣೆಗಳ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡಿರುವ ಸರ್ಕಾರಿ ಜಮೀನುಗಳಿಗೂ ನಕಲಿ ದಾಖಲೆ ಸೃಷ್ಟಿಸಿ ನೂರಾರು ಕೋಟಿ ರೂಪಾಯಿ ಪರಿಹಾರ ಲೂಟಿ ಮಾಡಿರುವುದು ಕೆಎಎಸ್‌ ಅಧಿಕಾರಿ ಬಿ. ಸುಧಾ ವಿರುದ್ಧದ ತನಿಖೆ ವೇಳೆ ಪತ್ತೆಯಾಗಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಸುಧಾ ವಿರುದ್ಧ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಸಲ್ಲಿಸಿರುವ ಖಾಸಗಿ ದೂರು ಆಧರಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ನಡೆಸುತ್ತಿದೆ. ಆರೋಪಿತ ಅಧಿಕಾರಿಣಿಯ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳ ಆರು ಮನೆಗಳ ಮೇಲೆ ಮಂಗಳವಾರ ಎಸಿಬಿ ದಾಳಿ ನಡೆಸಿತ್ತು. ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆದಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ದೊಡ್ಡ ಆಲದಮರ ನಿವಾಸಿ ಮಹೇಶ್‌ ಮತ್ತು ಭೀಮನಕುಪ್ಪೆಯ ನರಹರಿ ಎಂಬುವವರ ಮನೆಗಳಲ್ಲಿ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

‘ಸುಧಾ ಕೆಂಪೇಗೌಡ ಬಡಾವಣೆ ವ್ಯಾಪ್ತಿಯ ಹೆಚ್ಚಿನ ಗ್ರಾಮಗಳ ಭೂಸ್ವಾಧೀನಾಧಿಕಾರಿಯಾಗಿದ್ದರು. ವಿಶ್ವೇಶ್ವರಯ್ಯ ಬಡಾವಣೆ ಸೇರಿದಂತೆ ಹಳೆಯ ಬಡಾವಣೆಗಳ ಬಾಕಿ ಪ್ರಕರಣಗಳ ನಿರ್ವಹಣೆಯನ್ನೂ ಮಾಡಿದ್ದರು. ಆ ಅವಧಿಯಲ್ಲಿ ಅವರ ಮಧ್ಯವರ್ತಿಗಳಂತೆ ಕೆಲಸ ಮಾಡಿದ್ದ ವ್ಯಕ್ತಿಗಳ ಆರು ಮನೆಗಳ ಮೇಲೆ ದಾಳಿಮಾಡಿ ಶೋಧ ನಡೆಸಲಾಗಿದೆ. ಸುಮಾರು 40 ಎಕರೆಯಷ್ಟು ಸರ್ಕಾರಿ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆದಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಇಬ್ಬರು ವ್ಯಕ್ತಿಗಳ ಮನೆಗಳಲ್ಲಿ ಪತ್ತೆಯಾಗಿವೆ’ ಎಂಬ ಮಾಹಿತಿ ಲಭ್ಯವಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸ್ವಾಧೀನಪಡಿಸಿಕೊಂಡ ಜಮೀನುಗಳ ಮಾಲೀಕರಿಗೆ ಹಣದ ಜತೆಗೆ ಅಭಿವೃದ್ಧಿಪಡಿಸಿದ ನಿವೇಶನಗಳಲ್ಲೂ ಪಾಲು ನೀಡಲಾಗಿದೆ. ಎಲ್ಲವೂ ಸೇರಿದರೆ ಪ್ರತಿ ಎಕರೆಗೆ ₹ 5 ಕೋಟಿಯಿಂದ ₹ 8 ಕೋಟಿ ಮೌಲ್ಯದ ಪರಿಹಾರ ನೀಡಲಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರಾರು ಕೋಟಿ ರೂಪಾಯಿ ಪರಿಹಾರ ಪಡೆದಿರುವ ಶಂಕೆ ಇದೆ. ವಿಶ್ವೇಶ್ವರಯ್ಯ ಬಡಾವಣೆಯಲ್ಲೂ ಇಂತಹ ಅಕ್ರಮ ನಡೆಸಿರುವುದು ಪತ್ತೆಯಾಗಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ಹೇಳಿವೆ.

ಭೂಸ್ವಾಧೀನಗೊಂಡ ಸರ್ಕಾರಿ ಜಮೀನುಗಳನ್ನು ಪತ್ತೆಮಾಡಿ ಅವುಗಳಿಗೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಬಳಿಕ ನಕಲಿ ದಾಖಲೆಗಳ ಆಧಾರದಲ್ಲಿ ಪಹಣಿ ಸೃಜಿಸಲಾಗಿದೆ. ಅದನ್ನು ಬಳಸಿಕೊಂಡು ‘ಮಾಲೀಕರು’ ಎಂದು ಗುರುತಿಸಲಾದ ವ್ಯಕ್ತಿಗಳ ಖಾತೆಗಳಿಗೆ ಪರಿಹಾರ ಪಾವತಿಸಲಾಗಿದೆ. ನಂತರ ಬೃಹತ್‌ ಮೊತ್ತದ ಹಣವನ್ನು ಮಧ್ಯವರ್ತಿಗಳ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ತನಿಖಾ ತಂಡಕ್ಕೆ ಲಭಿಸಿವೆ.

ಪ್ರತ್ಯೇಕ ಪ್ರಕರಣಕ್ಕೆ ಚಿಂತನೆ: ಮಂಗಳವಾರದ ದಾಳಿ ವೇಳೆ ಪತ್ತೆಯಾಗಿರುವ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಸಿಬಿ ಐಜಿಪಿ ಎಂ. ಚಂದ್ರಶೇಖರ್‌ ಮತ್ತು ತನಿಖೆಯ ನೇತೃತ್ವ ವಹಿಸಿರುವ ಬೆಂಗಳೂರು ನಗರ ಘಟಕದ ಎಸ್‌ಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ನೇತೃತ್ವದಲ್ಲಿ ಬುಧವಾರ ಸಭೆ ನಡೆಸಿ ಚರ್ಚಿಸಲಾಗಿದೆ. ಬಿಡಿಎ ಪರಿಹಾರ ಪಾವತಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣ ದಾಖಲಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

150 ಎಕರೆ ಜಮೀನಿಗೆ ನಕಲಿ ದಾಖಲೆ?
‘ಕೆಂಪೇಗೌಡ ಮತ್ತು ವಿಶ್ವೇಶ್ವರಯ್ಯ ಬಡಾವಣೆ ಜತೆಗೆ ಎಚ್‌ಆರ್‌ಬಿಆರ್‌ ಬಡಾವಣೆ ಮತ್ತು ಜ್ಞಾನಭಾರತಿ ಬಡಾವಣೆಗಳ ಭೂಸ್ವಾಧೀನಾಧಿಕಾರಿಯಾಗಿಯೂ ಸುಧಾ ಕೆಲಸ ಮಾಡಿದ್ದಾರೆ.

ಸುಮಾರು 150 ಎಕರೆಗಳಷ್ಟು ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಲೂಟಿ ಮಾಡಲಾಗಿದೆ ಎಂದು ಆಕೆಯ ಏಜೆಂಟರಾಗಿದ್ದ ಪ್ರವೀಣ್‌ ಗಡಿಯಾರ್‌ ಮತ್ತು ಮಲ್ಲಿಕ್‌ ಮಂದೇಶ್‌ ಅಲಿಯಾಸ್‌ ಮಣಿ ಮಾಹಿತಿ ನೀಡಿದ್ದಾರೆ. ಎಸಿಬಿ ದಾಳಿ ವೇಳೆ ಪೂರಕ ದಾಖಲೆಗಳು ಪತ್ತೆಯಾಗಿವೆ. ಈ ಕುರಿತು ಪ್ರತ್ಯೇಕವಾದ ತನಿಖೆ ನಡೆದರೆ ಹಗರಣದ ಸಂಪೂರ್ಣ ಮಾಹಿತಿ ಹೊರಬರಲಿದೆ’ ಎಂದು ದೂರುದಾರ ಟಿ.ಜೆ. ಅಬ್ರಹಾಂ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು