ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಮ್ಮಘಟ್ಟ ವಸತಿ ಸಮುಚ್ಚಯ: ಹಂಚಿಕೆ ಶೀಘ್ರ

ಬಿಡಿಎ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌
Published 2 ಜುಲೈ 2024, 19:54 IST
Last Updated 2 ಜುಲೈ 2024, 19:54 IST
ಅಕ್ಷರ ಗಾತ್ರ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿರ್ಮಿಸಲಾಗುತ್ತಿರುವ ಕೊಮ್ಮಘಟ್ಟ ವಸತಿ ಸಮುಚ್ಚಯದ ಫ್ಲ್ಯಾಟ್‌ಗಳನ್ನು ಶೀಘ್ರವೇ ಹಂಚಿಕೆ ಮಾಡಲಾಗುವುದು ಎಂದು ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌ ತಿಳಿಸಿದರು.

ಬಿಡಿಎ ಅಭಿವೃದ್ಧಿ ಕಾಮಗಾರಿಗಳನ್ನು ಮಂಗಳವಾರ ಪರಿಶೀಲಿಸಿದ ಅವರು, ಕೊಮ್ಮಘಟ್ಟ ವಸತಿ ಸಮುಚ್ಚಯಕ್ಕೆ ನಾನಾ ಸಂಸ್ಥೆಗಳಿಂದ ನಿರಾಕ್ಷೇಪಣಾ ಪತ್ರಗಳು ಸದ್ಯವೇ ಲಭ್ಯವಾಗಲಿವೆ. ಮೂರು ಬ್ಲಾಕ್‌ಗಳಲ್ಲಿ 1,176 ಫ್ಲ್ಯಾಟ್‌ಗಳು ಲಭ್ಯವಿವೆ. ಒಂದು ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣೆ ಘಟಕ, ಮಳೆ ನೀರು ಸಂಗ್ರಹ, 924 ಕಾರುಗಳ ನಿಲುಗಡೆ ವ್ಯವಸ್ಥೆ ಹೊಂದಿದೆ ಎಂದರು.

ಕೊಮ್ಮಘಟ್ಟ ವಸತಿ ಸಮುಚ್ಚಯದಲ್ಲಿ 3 ಬಿಎಚ್‌ಕೆ ಫ್ಲ್ಯಾಟ್‌ಗೆ (1,314 ಚದರಡಿ) ₹65.70 ಲಕ್ಷ, 2 ಬಿಎಚ್‌ಕೆಗೆ (978 ಚದರಡಿ) ₹54.3 ಲಕ್ಷ, 2 ಬಿಎಚ್‌ಕೆಗೆ (904 ಚದರಡಿ) ₹49.15 ಲಕ್ಷ ದರ ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಇದಲ್ಲದೆ, ಬಿಡಿಎಯ ಹಲವು ವಸತಿ ಸಮುಚ್ಚಯಗಳಲ್ಲಿ 1,170 ಫ್ಲ್ಯಾಟ್‌ಗಳು ಮಾರಾಟಕ್ಕೆ ಲಭ್ಯವಿವೆ ಎಂದರು.

ಕೆಂಪೇಗೌಡ ಬಡಾವಣೆಯ ವೀಕ್ಷಣೆ ಸಂದರ್ಭದಲ್ಲಿ ಮನೆಗಳು ನಿರ್ಮಾಣವಾಗದ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು,  ‘ಮೂಲಸೌಕರ್ಯಗಳನ್ನು ಒದಗಿಸಿ ನಿವೇಶನ ಹಂಚಲಾಗಿದೆ. ಮನೆಗಳನ್ನೇ ಕಟ್ಟಿಲ್ಲ. 25 ಲಕ್ಷ ಲೀಟರ್‌ ನೀರಿನ ಎಸ್‌ಟಿಪಿಗಳು ಸಿದ್ಧವಾಗಿವೆ. ವಿದ್ಯುತ್‌ ಉಪಕೇಂದ್ರ ಸಿದ್ಧವಾಗಿವೆ. ಮಾಗಡಿ ರಸ್ತೆ– ಮೈಸೂರು ರಸ್ತೆ ಸಂಪರ್ಕವಿದೆ. ಮನೆಗಳನ್ನು ಕಟ್ಟಿಕೊಳ್ಳಿ, ಬಾಕಿ ಸೌಲಭ್ಯ ಕಲ್ಪಿಸುತ್ತೇವೆ’ ಎಂದು ಸ್ಥಳೀಯರಿಗೆ ಹೇಳಿದರು.

‘ಕೆಂಪೇಗೌಡ ಬಡಾವಣೆಯಲ್ಲಿ 70ಕ್ಕೂ ಹೆಚ್ಚು ನಿವೇಶನದಾರರು ಕಟ್ಟಡ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. 25 ಮಂದಿ ನಕ್ಷೆ ಪಡೆದು ಮನೆ ಕಟ್ಟಿದ್ದಾರೆ’ ಎಂದರು.

ಕೆಂಪೇಗೌಡ ಬಡಾವಣೆ ಮತ್ತು ಕೊಮ್ಮಘಟ್ಟ ವಸತಿ ಸಮುಚ್ಚಯದ ನಿವಾಸಿಗಳಿಗೆ ನಾಗರಿಕ ಸೌಲಭ್ಯ ನಿವೇಶನದಲ್ಲಿ ಬಹೂಪಯೋಗಿ ವಾಣಿಜ್ಯ ಸಂಕೀರ್ಣ ಒಳಗೊಂಡಂತೆ ಕ್ಲಬ್ ಹೌಸ್, ಈಜುಕೊಳ, ಶಾಪಿಂಗ್ ಮಳಿಗೆಗಳು, ವ್ಯಾಯಾಮ ಶಾಲೆ, ಮಿನಿ ಥಿಯೇಟರ್, ಒಳ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

‘ಕೆಂಪೇಗೌಡ ಬಡಾವಣೆಯಲ್ಲಿ 26 ಸಾವಿರ ನಿವೇಶನ ಹಂಚಿಕೆಯಾಗಿದ್ದರೂ, 26 ಮನೆಗಳನ್ನು ಮಾತ್ರ ನಿರ್ಮಿಸಲಾಗಿದೆ.  ಮನೆ ಏಕೆ ಕಟ್ಟುತ್ತಿಲ್ಲ ಎಂಬುದಕ್ಕೆ ಅಧ್ಯಕ್ಷರು ನಿವೇಶನದಾರರೊಂದಿಗೆ ಬಡಾವಣೆಯ ಪ್ರವಾಸ ಮಾಡಬೇಕು’ ಎಂದು ನಾಡಪ್ರಭು ಕೆಂಪೇಗೌಡ ಮುಕ್ತ ವೇದಿಕೆ ಅಧ್ಯಕ್ಷ ಚನ್ನಬಸವರಾಜು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT