ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: ಜಾಗ ಒತ್ತುವರಿ ಆ. 5 ರ ನಂತರ ತೆರವು

Last Updated 17 ಜುಲೈ 2021, 20:58 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಾಗಗಳ ಒತ್ತುವರಿಯನ್ನು ಆ.5ರ ನಂತರ ತೆರವುಗೊಳಿಸಲಾಗುವುದು’ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದರು.

‘ಬಿಡಿಎ ಎಲ್ಲೆಲ್ಲಿ ಜಾಗಗಳನ್ನು ಹೊಂದಿದೆ ಎಂಬುದನ್ನು ಪರಿಶೀಲಿಸಲು ಕೈಗೆತ್ತಿಕೊಂಡಿರುವ ಲ್ಯಾಂಡ್‌ ಆಡಿಟ್‌ ಕಾರ್ಯ ಪ್ರಗತಿಯಲ್ಲಿದೆ. ಪ್ರಾಧಿಕಾರಕ್ಕೆ ಸೇರಿದ ಆಸ್ತಿಯನ್ನು ಗುರುತಿಸಲಾಗುತ್ತಿದೆ. ಇದುವರೆಗೆ 11 ಸಾವಿರ ಎಕರೆಯಷ್ಟು ಪ್ರದೇಶ ಬಿಡಿಎಗೆ ಸೇರಿದೆ ಎಂದು ಇರುವರೆಗಿನ ವರದಿಯಲ್ಲಿ ತಿಳಿಸಲಾಗಿದೆ. ಈ ಪೈಕಿ ಹಲವಾರು ಪ್ರಕರಣಗಳು ಭೂಸ್ವಾಧೀನ ಪ್ರಕ್ರಿಯೆಯ ವಿವಿಧ ಹಂತದಲ್ಲಿದ್ದರೆ, ಇನ್ನೂ ಕೆಲವು ಪ್ರಕರಣಗಳ ವ್ಯಾಜ್ಯವು ವಿವಿಧ ನ್ಯಾಯಾಲಯಗಳಲ್ಲಿದೆ’ ಎಂದು ಅವರು ವಿವರಿಸಿದರು.

‘ಪ್ರಾಧಿಕಾರಕ್ಕೆ ಸೇರಿದ ಆಸ್ತಿಯ ಪೈಕಿ 500 ಎಕರೆಯಷ್ಟು ಪ್ರದೇಶಗಳನ್ನು ವಿವಿಧ ಬಡಾವಣೆಗಳಲ್ಲಿ ಗುರುತಿಸಿದ್ದೇವೆ. ಈ ಭೂಮಿಯ ಬಗ್ಗೆ ನ್ಯಾಯಾಲಯಗಳು ಬಿಡಿಎ ಪರ ತೀರ್ಪು ನೀಡಿದ್ದು, ತೆರವುಗೊಳಿಸಲು ಹಸಿರು ನಿಶಾನೆ ನೀಡಿವೆ. ಆದರೆ, ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನು ಜುಲೈ 5 ರವರೆಗೆ ನೆಲಸಮ ಮಾಡಬಾರದು ಎಂದು ನ್ಯಾಯಾಲಯವು ಆದೇಶ ನೀಡಿತ್ತು. ಈ ಗಡುವನ್ನು ಆ. 5 ರವರೆಗೆ ಮತ್ತೆ ವಿಸ್ತರಣೆ ಮಾಡಿದೆ. ಈ ಗಡುವಿನ ಬಗ್ಗೆ ನ್ಯಾಯಾಲಯ ಮುಂದಿನ ಆದೇಶ ನೀಡಿದ ನಂತರ ನೆಲಸಮ ಪ್ರಕ್ರಿಯೆಯನ್ನು ಆರಂಭ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಬಿಡಿಎ ಭೂಸ್ವಾಧೀನ ಮಾಡಿಕೊಂಡಿರುವ ಜಾಗದಲ್ಲಿ ಸುಮಾರು 75 ಸಾವಿರಕ್ಕೂ ಅಧಿಕ ಮನೆಗಳನ್ನು ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದೆ. ಆದರೆ, ಈ ಮನೆಗಳನ್ನು ನೆಲಸಮ ಮಾಡುವುದು ಕಷ್ಟಸಾಧ್ಯ. ಹಾಗಾಗಿಆ ಪ್ರದೇಶದ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ದಂಡನಾ ಶುಲ್ಕ ಪಾವತಿಸಿಕೊಂಡು ಈ ಜಾಗಗಳನ್ನು ಅಲ್ಲಿ ನೆಲೆಸಿರುವವರಿಗೆ ಬಿಡಿಎ ಕಾಯ್ದೆಯ ಸೆಕ್ಷನ್‌ 38ಡಿ ಅಡಿಯಲ್ಲಿ ನೋಂದಣಿ ಮಾಡಿಕೊಡಲಾಗುತ್ತದೆ’ ಎಂದರು.

‘ಸಾರ್ವಜನಿಕರಿಗೆ ಹೊರೆ ಆಗುತ್ತದೆ ಎಂಬ ಉದ್ದೇಶದಿಂದ ದಂಡನಾ ಶುಲ್ಕವನ್ನು ಕಡಿಮೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಅಲ್ಲಿಂದ ಪ್ರತಿಕ್ರಿಯೆ ಬಂದ ನಂತರ ಸಕ್ರಮ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ’ ಎಂದು ಬಿಡಿಎ ಅಧ್ಯಕ್ಷರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT