ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲಿ ರೇವ್ ಪಾರ್ಟಿ: ಸಿಸಿಬಿಯಿಂದ ತೆಲುಗು ನಟಿ ಹೇಮಾ ಬಂಧನ

ಹೆಬ್ಬಗೋಡಿ ಬಳಿಯ ಹುಸ್ಕೂರು ಸಮೀಪದಲ್ಲಿರುವ ಜಿ.ಆರ್. ಫಾರ್ಮ್‌ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿ
Published 3 ಜೂನ್ 2024, 16:00 IST
Last Updated 3 ಜೂನ್ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಗೋಡಿ ಬಳಿಯ ಹುಸ್ಕೂರು ಸಮೀಪದಲ್ಲಿರುವ ಜಿ.ಆರ್. ಫಾರ್ಮ್‌ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡು ಡ್ರಗ್ಸ್ ತೆಗೆದುಕೊಂಡಿದ್ದ ಆರೋಪದಡಿ ತೆಲುಗು ನಟಿ ಹೇಮಾ ಅಲಿಯಾಸ್ ಕೃಷ್ಣವೇಣಿ (57) ಅವರನ್ನು ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.‌

‘ಸನ್‌ಸೆಟ್‌ ಟು ಸನ್‌ರೈಸ್ ವಿಕ್ಟರಿ’ ಹೆಸರಿನಲ್ಲಿ ಮೇ 19ರಂದು ಆಯೋಜಿಸಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ, ಸಂಘಟಕರು ಸೇರಿದಂತೆ ಐವರನ್ನು ಬಂಧಿಸಿದ್ದರು. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಹೇಮಾ ಹಾಗೂ ಇತರರಿಗೆ ವಿಚಾರಣೆಗೆ ಬರುವಂತೆ ಇತ್ತೀಚೆಗೆ ನೋಟಿಸ್ ಸಹ ನೀಡಿದ್ದರು.

ಮೊದಲ ಹಾಗೂ ಎರಡನೇ ನೋಟಿಸ್ ಪಡೆದಿದ್ದ ಹೇಮಾ, ವಿಚಾರಣೆಗೆ ಕಾಲಾವಕಾಶ ಕೋರಿದ್ದರು. ಮೂರನೇ ನೋಟಿಸ್ ನೀಡಿದ್ದರಿಂದ, ವಿಚಾರಣೆಗೆಂದು ಸಿಸಿಬಿ ಕಚೇರಿಗೆ ಸೋಮವಾರ ಹಾಜರಾದರು. ವಿಚಾರಣೆಗೆ ಒಳಪಡಿಸಿದ ತನಿಖಾಧಿಕಾರಿ, ‘ನಮ್ಮ ಬಳಿ ಪುರಾವೆಗಳು ಇವೆ’ ಎಂಬುದಾಗಿ ಮಾಹಿತಿ ನೀಡಿ ಅವರನ್ನು ಬಂಧಿಸಿದ್ದಾರೆ.

ದಿಕ್ಕು ತಪ್ಪಿಸಿದ್ದ ನಟಿ

‘ರೇವ್ ಪಾರ್ಟಿಯಲ್ಲಿ ಪಾಲ್ಗೊಳ್ಳುವುದಕ್ಕಾಗಿಯೇ ನಟಿ ಹೇಮಾ ಬೆಂಗಳೂರಿಗೆ ಬಂದಿದ್ದರು. ಇವರ ಜೊತೆ 100ಕ್ಕೂ ಹೆಚ್ಚು ಮಂದಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಸಿಸಿಬಿ ದಾಳಿ ಸಂದರ್ಭದಲ್ಲೂ ನಟಿ ಹೇಮಾ ಸ್ಥಳದಲ್ಲಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ದಾಳಿಯ ಮರುದಿನ ವಿಡಿಯೊ ಹರಿಬಿಟ್ಟಿದ್ದ ಹೇಮಾ, ‘ನಾನು ಹೈದರಾಬಾದ್‌ನಲ್ಲಿದ್ದೇನೆ. ಪಾರ್ಟಿಯಲ್ಲಿ ಪಾಲ್ಗೊಂಡಿರುವುದಾಗಿ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದನ್ನು ಅಭಿಮಾನಿಗಳು ನಂಬಬಾರದು’ ಎಂದಿದ್ದರು. ವಿಡಿಯೊ ಪರಿಶೀಲನೆ ನಡೆಸಿದಾಗ, ಜಿ.ಆರ್. ಫಾರ್ಮ್‌ ಹೌಸ್‌ ಆವರಣದಲ್ಲಿಯೇ ವಿಡಿಯೊ ಚಿತ್ರೀಕರಿಸಿದ್ದರೆಂಬ ಮಾಹಿತಿ ಲಭ್ಯವಾಗಿತ್ತು’ ಎಂದು ತಿಳಿಸಿದರು.

‘ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಹೇಮಾ ಸೇರಿ ಹಲವರು, ಡ್ರಗ್ಸ್ ತೆಗೆದುಕೊಂಡಿದ್ದರು. ಎಲ್ಲರನ್ನೂ ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಹೇಮಾ ಅವರು ಡ್ರಗ್ಸ್ ತೆಗೆದುಕೊಂಡಿದ್ದು ದೃಢಪಟ್ಟಿತ್ತು. ಹೀಗಾಗಿ, ಹೇಮಾ ಅವರನ್ನೂ ಪ್ರಕರಣದಲ್ಲಿ ಆರೋಪಿ ಎಂದು ಪರಿಗಣಿಸಿ ಬಂಧಿಸಲಾಗಿದೆ’ ಎಂದು ಹೇಳಿದರು.

‘ಡ್ರಗ್ಸ್ ತೆಗೆದುಕೊಂಡಿದ್ದಷ್ಟೇ ಅಲ್ಲದೇ ತಪ್ಪು ಮಾಹಿತಿ ನೀಡಿ ಪೊಲೀಸರ ದಿಕ್ಕು ತಪ್ಪಿಸಿದ್ದಾರೆ. ಜೊತೆಗೆ ತನಿಖೆಗೆ ಅಸಹಕಾರ ತೋರಿದ್ದಾರೆ. ಅಲ್ಲದೆ, ತಪ್ಪಾದ ಹೆಸರು ಹಾಗೂ ಮೊಬೈಲ್ ನಂಬರ್ ಕೊಟ್ಟಿದ್ದರು. ಈ ಎಲ್ಲ ಆರೋಪಗಳು ಹೇಮಾ ಮೇಲಿವೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದು ತಿಳಿಸಿದರು.

‘ಡ್ರಗ್ಸ್ ಪೂರೈಸಿದ್ದ ಪೆಡ್ಲರ್ ಸೆರೆ’

‘ರೇವ್ ಪಾರ್ಟಿಗೆ ಡ್ರಗ್ಸ್ ಪೂರೈಕೆ ಮಾಡಿದ್ದ ಆರೋಪಿ ಶರೀಫ್ ಎಂಬಾತನನ್ನು ಬಂಧಿಸಲಾಗಿದೆ. ಈತನಿಂದ 40 ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ. ‘ದೇವರಜೀವನಹಳ್ಳಿಯ (ಡಿ.ಜೆ.ಹಳ್ಳಿ) ಶರೀಫ್ ವಿದೇಶಿ ಪ್ರಜೆಗಳು ಹಾಗೂ ಇತರರಿಂದ ಡ್ರಗ್ಸ್ ಖರೀದಿಸಿ ತಂದು ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದ. ಹೆಬ್ಬಗೋಡಿ ಬಳಿಯ ಹುಸ್ಕೂರು ಸಮೀಪದಲ್ಲಿರುವ ಜಿ.ಆರ್. ಫಾರ್ಮ್‌ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿಗೂ ಈತನೇ ಡ್ರಗ್ಸ್ ಕೊಟ್ಟಿದ್ದನೆಂಬ ಮಾಹಿತಿ ಇದ್ದು ಪರಿಶೀಲಿಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT