ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ, ಸಂಸ್ಕೃತಿಗೆ ಜೀವಂತಿಕೆ ನೀಡಿದ ಬೇಂದ್ರೆ: ಬಸವರಾಜ ಕಲ್ಗುಡಿ

Published 22 ಆಗಸ್ಟ್ 2023, 16:29 IST
Last Updated 22 ಆಗಸ್ಟ್ 2023, 16:29 IST
ಅಕ್ಷರ ಗಾತ್ರ

ಬೆಂಗಳೂರು: ಕವಿ ದ.ರಾ. ಬೇಂದ್ರೆ ಅವರ ಬದುಕು–ಬರಹವನ್ನು ಎಳೆಎಳೆಯಾಗಿ ವಿಮರ್ಶಕ ಬಸವರಾಜ ಕಲ್ಗುಡಿ ಅವರು ತೆರೆದಿಟ್ಟರೆ, ಅವರ ಕವನಗಳಿಗೆ ಧ್ವನಿಯಾಗುವ ಮೂಲಕ ರಾಮಚಂದ್ರ ಹಡಪದ ಹಾಗೂ ಸ್ಪರ್ಶಾ ಆರ್.ಕೆ. ರಂಜಿಸಿದರು. 

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ‘ಬೇಂದ್ರೆ ಬೆರಗಿನ ಸಂಜೆ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕಲ್ಗುಡಿ, ‘20ನೇ ಶತಮಾನದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಕಡೆ ಮರಾಠಿ, ಇನ್ನೊಂದು ಕಡೆ ಉರ್ದು ಭಾಷೆಯ ಪ್ರಾಬಲ್ಯವಿತ್ತು. ಕನ್ನಡ ಭಾಷೆಗೆ ಸಾಮಾಜಿಕ ಚಹರೆ ಇರಲಿಲ್ಲ. ಆ ಸಂದರ್ಭದಲ್ಲಿ ಬೇಂದ್ರೆಯಂತಹವರು ನಮ್ಮ ಭಾಷೆಗೆ ದೊಡ್ಡ ಸತ್ವ ನೀಡಿದರು. ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಜೀವಂತಿಕೆ ನೀಡಿದ ಅಪರೂಪದ ಕವಿ ಬೇಂದ್ರೆ. ಅವರು ಹೊಸ ರೀತಿಯ ಪ್ರಜ್ಞೆಯನ್ನು ನಮ್ಮ ನಡುವೆ ಇಡಲು ಪ್ರಯತ್ನ ಮಾಡಿದರು. ಬೇಂದ್ರೆ ಅವರ ಸೃಜನಶೀಲತೆಯು ವರ್ತಮಾನಕ್ಕೆ ಅನುಗುಣವಾದ ಭಾಷೆ ಮತ್ತು ಶೈಲಿಯನ್ನು ಸೃಷ್ಟಿಸಿತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

‘ಹೊಸ ಕಾಲ ತನಗಾಗಿ ಮಾತ್ರವಲ್ಲದೆ ಸುತ್ತಲಿನ ಬದುಕಿಗೂ ಅಗತ್ಯವೆಂದು ತೀವ್ರವಾಗಿ ನಂಬಿದ್ದರಿಂದ ಹೊಸ ಕಾವ್ಯ ಬೇಂದ್ರೆ ಅವರಿಂದ ಸೃಷ್ಟಿಯಾಯಿತು. ಆದರೆ, ಈ ಹೊಸ ಲಯವು ಅವರಿಗೆ ಸಾಧ್ಯವಾಗಿದ್ದು ಪರಂಪರೆಯ ಜೊತೆಗಿನ ಸಾತತ್ಯದಿಂದ. ಅವರಿಗೆ ಗಂಡು–ಹೆಣ್ಣು, ಪ್ರಕೃತಿ–ಪುರುಷ ಎರಡೂ ಬಹುಮುಖ್ಯ ದ್ರವ್ಯಗಳಾಗಿವೆ. ಮಣ್ಣಿನ ಗುಣದ ಶಬ್ದಗಳಿಗೆ ಅಮರ್ತ್ಯದ ಗುಣ ನೀಡುವ ಶಕ್ತಿ ಅವರಿಗಿತ್ತು. ಶ್ರಾವಣಮಾಸ ಬಂದರೆ ಧಾರವಾಡದಲ್ಲಿ ಬೇಂದ್ರೆ ಅವರನ್ನು ನೆನಪಿಸಿಕೊಳ್ಳದವರಿಲ್ಲ. ಯುಗಾದಿ ಬಂದರೆ ಅವರ ‘ಯುಗ ಯುಗಾದಿ ಕಳೆದರೂ...’ ಗೀತೆಯನ್ನು ಗುನುಗುತ್ತೇವೆ’ ಎಂದರು.

ಪ್ರೇಕ್ಷಕರೊಬ್ಬರು, ‘ಬೇಂದ್ರೆ ಆಸ್ತಿಕರೆ, ನಾಸ್ತಿಕರೆ’ ಎಂದು ಕೇಳಿದ ಪ್ರಶ್ನೆಗೆ,  ‘ಬೇಂದ್ರೆ ಅವರಿಗೆ ಪರಮಾತ್ಮನ ಮೇಲೆ ದೊಡ್ಡ ನಂಬಿಕೆಯಿತ್ತು. ಆದರೆ, ಕುರುಡು ನಂಬಿಕೆ ಇರಲಿಲ್ಲ’ ಎಂದು ಉತ್ತರಿಸಿದರು. ತಮ್ಮ ಉಪನ್ಯಾಸದ ನಡುವೆ ಬೇಂದ್ರೆ ಅವರ ಕವನಗಳನ್ನು ಓದಿ, ವಿವರಿಸಿದರು. 

ಗಾಯಕರಾದ ರಾಮಚಂದ್ರ ಹಡಪದ ಹಾಗೂ ಸ್ಪರ್ಶಾ ಆರ್.ಕೆ. ಅವರು ‘ಇಳಿದು ಬಾ ತಾಯೆ ಇಳಿದು ಬಾ’ ಸೇರಿದಂತೆ ವಿವಿಧ ಕವಿತೆಗಳನ್ನು ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. 

ಕಾರ್ಯಕ್ರಮದಲ್ಲಿ ರಾಮಚಂದ್ರ ಹಡಪದ ಸ್ಪರ್ಶಾ ಆರ್.ಕೆ. ಗಾಯನ ಪ್ರಸ್ತುತ ಪಡಿಸಿದರು 
ಕಾರ್ಯಕ್ರಮದಲ್ಲಿ ರಾಮಚಂದ್ರ ಹಡಪದ ಸ್ಪರ್ಶಾ ಆರ್.ಕೆ. ಗಾಯನ ಪ್ರಸ್ತುತ ಪಡಿಸಿದರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT