ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕಪ್ಪು ಶಿಲೀಂಧ್ರ; ಮೃತರ ಸಂಖ್ಯೆ 80ಕ್ಕೆ ಏರಿಕೆ

ನಗರದಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ದೃಢ
Last Updated 25 ಜೂನ್ 2021, 20:32 IST
ಅಕ್ಷರ ಗಾತ್ರ

ಬೆಂಗಳೂರು: ಕಪ್ಪು ಶಿಲೀಂಧ್ರ ಸೋಂಕಿನ ತೀವ್ರತೆಗೆ ನಗರದಲ್ಲಿ ಮೃತಪಟ್ಟವರ ಸಂಖ್ಯೆ 80ಕ್ಕೆ ಏರಿಕೆಕಂಡಿದ್ದು, 36 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ.

ಕೋವಿಡ್‌ ಎರಡನೇ ಅಲೆಯ ಬಳಿಕ ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾಗುವರ ಸಂಖ್ಯೆ ಹೆಚ್ಚಳವಾಗಿ, ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಎದುರಾಗಿತ್ತು. ಕೆಲ ದಿನಗಳಿಂದ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವುದರಿಂದ ಕೊರೊನಾ ಸೋಂಕಿತರಿಗೆ ಮೀಸಲಿಟ್ಟ ಹಾಸಿಗೆಗಳನ್ನು ಈಗ ಕಪ್ಪು ಶಿಲೀಂಧ್ರ ಸೋಂಕು ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ.

ನಗರದಲ್ಲಿ ಈವರೆಗೆ 1,026 ಶಿಲೀಂಧ್ರ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 200 ಪ್ರಕರಣಗಳು, ಬೌರಿಂಗ್ ಆಸ್ಪತ್ರೆಯಲ್ಲಿ 270 ಪ್ರಕರಣಗಳು ಹಾಗೂ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ. ಇನ್ನುಳಿದ ಪ್ರಕರಣಗಳು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ದೃಢಪಟ್ಟಿವೆ. ಸದ್ಯ ವಿಕ್ಟೋರಿಯಾದಲ್ಲಿ 65 ಮಂದಿ ಹಾಗೂ ಬೌರಿಂಗ್ ಆಸ್ಪತ್ರೆಯಲ್ಲಿ 160 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದವರಲ್ಲಿ ಈವರೆಗೆ ಇಬ್ಬರು ಮೃತಪಟ್ಟಿದ್ದು, 19 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ. ಬೌರಿಂಗ್ ಆಸ್ಪತ್ರೆಗೆ ದಾಖಲಾದವರಲ್ಲಿ 32 ಮಂದಿ ಸಾವಿಗೀಡಾಗಿದ್ದು, 17 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ. ಈ ಆಸ್ಪತ್ರೆಗಳಲ್ಲಿ ಕ್ರಮವಾಗಿ 90 ಹಾಗೂ 126 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಪ್ರಕರಣಗಳ ಸಂಖ್ಯೆ ಇಳಿಕೆ: ನಗರದಲ್ಲಿ ಕೋವಿಡ್ ಹೊಸ ಪ್ರಕರಣ ಸಂಖ್ಯೆ ಇಳಿಕೆ ಹಾಗೂ ಅನಿಯಂತ್ರಿತ ಸ್ಟೆರಾಯ್ಡ್ ಬಳಕೆಗೆ ಕಡಿವಾಣ ಹಾಕಿದ ಪರಿಣಾಮ ಶಿಲೀಂಧ್ರ ಸೊಂಕು ಪ್ರಕರಣಗಳು ಕೂಡ ಇಳಿಕೆಯಾಗಿವೆ. ಕಳೆದ 10 ದಿನಗಳಲ್ಲಿ 79 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಅವಧಿಯಲ್ಲಿ 8 ಮಂದಿ ಚಿಕಿತ್ಸೆಗೆ ಸ್ಪಂದಿಸದೆಯೇ ಮೃತಪಟ್ಟಿದ್ದಾರೆ.

‘ಕಳೆದ 10 ದಿನಗಳಿಂದ ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳು ಇಳಿಕೆ ಕಂಡಿವೆ. ಪ್ರತಿನಿತ್ಯ ಒಂದಿಬ್ಬರನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಮಾಡಿ, ಚಿಕಿತ್ಸೆ ಒದಗಿಸದಲ್ಲಿ ವ್ಯಕ್ತಿ ಬೇಗ ಚೇತರಿಸಿಕೊಳ್ಳುತ್ತಾನೆ. ಇಲ್ಲವಾದಲ್ಲಿ ವೈರಾಣು ಕಣ್ಣಿಗೆ ಹರಡಿ, ಮಿದುಳಿಗೆ ವ್ಯಾಪಿಸಿಕೊಳ್ಳುತ್ತದೆ. ಆಗ ಜೀವ ಉಳಿಸಲು ಕಣ್ಣನ್ನು ತೆಗೆಯಬೇಕಾಗುತ್ತದೆ’ ಎಂದು ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದರು.

‘ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವ ಕಾರಣ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಖಾಲಿಯಿವೆ. ಹೀಗಾಗಿ, ಕಪ್ಪು ಶಿಲೀಂಧ್ರ ಸೋಂಕಿತರಿಗೆ ಈಗ ಹಾಸಿಗೆ ಸಮಸ್ಯೆಯಾಗುತ್ತಿಲ್ಲ. ಸ್ಟೆರಾಯ್ಡ್ ಬಳಕೆ ನಿಯಂತ್ರಣ ಹಾಗೂ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವ ಕಾರಣ ಶಿಲೀಂಧ್ರ ಸೋಂಕು ಪ್ರಕರಣ ಕೂಡ ಇಳಿಮುಖ ಮಾಡಿದೆ. ಸೋಂಕಿತರಲ್ಲಿ ಶೇ 10ರಷ್ಟು ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ’ ಎಂದು ಬೆಂಗಳೂರು ನಗರ ಜಿಲ್ಲಾ ಶಸ್ತ್ರಚಿಕಿತ್ಸಕ ಅನ್ಸರ್ ಅಹಮದ್ ಹೇಳಿದರು.

ವೈದ್ಯರೊಬ್ಬರಲ್ಲಿ 2 ವಿಧದ ಶಿಲೀಂಧ್ರ ಪತ್ತೆ

ಕೋವಿಡ್‌ನಿಂದ ಚೇತರಿಸಿಕೊಂಡಿದ್ದ ನಗರದ ವೈದ್ಯರೊಬ್ಬರಿಗೆ ಕಪ್ಪು ಹಾಗೂ ಹಸಿರು ಶಿಲೀಂಧ್ರ ಸೋಂಕು ಕಾಣಿಸಿಕೊಂಡಿದೆ.

ಈ ಎರಡು ವಿಧದ ಶಿಲೀಂಧ್ರ ಸೋಂಕು ವ್ಯಕ್ತಿಯೊಬ್ಬರಲ್ಲಿ ಕಾಣಿಸಿಕೊಂಡ ದೇಶದ ಮೊದಲ ಪ್ರಕರಣ ಇದು ಎಂದು ಹೇಳಲಾಗಿದೆ. ಡಾ. ಕಾರ್ತಿಕೇಯನ್ ಆರ್‌. ಎಂಬುವವರು ಕಪ್ಪು ಮತ್ತು ಹಸಿರು ಶಿಲೀಂಧ್ರ ಸೋಂಕಿಗೆ ಒಳಗಾದವರಾಗಿದ್ದಾರೆ. ‌ಅವರಿಗೆಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಕಳೆದ ಎಪ್ರಿಲ್‌ನಲ್ಲಿ ಕೋವಿಡ್‌ ಪೀಡಿತರಾಗಿದ್ದ ಅವರು, ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಂಡಿದ್ದರು. ಕೆಲ ದಿನಗಳ ಹಿಂದೆ ಮುಖದ ಭಾಗದಲ್ಲಿ ಮರಗಟ್ಟುವಿಕೆ, ನೋವು, ಮೂಗು ಸೋರುವಿಕೆ ಸೇರಿದಂತೆ ವಿವಿಧ ಸಮಸ್ಯೆಗಳು ಅವರಿಗೆ ಕಾಣಿಸಿಕೊಂಡಿದ್ದವು. ತಪಾಸಣೆ ನಡೆಸಿದ ವೈದ್ಯರು, ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್ ಮೂಲಕ ಸೋಂಕನ್ನು ಪತ್ತೆ ಮಾಡಿದ್ದಾರೆ.

‘ಅವರ ಮೂಗಿನಲ್ಲಿ ಹಸಿರು ಮಿಶ್ರಿತ ಕಂದು ಬಣ್ಣದ ಉಪ್ಪಿನ ಹರಳು ಮಾದರಿಯ ವಸ್ತುಗಳು ಗೋಚರಿಸಿದವು. ಇದು ಸಾಮಾನ್ಯ ಕಪ್ಪು ಶಿಲೀಂಧ್ರ ಪ್ರಕರಣದಂತೆ ಕಾಣಲಿಲ್ಲ. ಹೆಚ್ಚಿನ ವಿಶ್ಲೇಷಣೆ ನಡೆಸಿದಾಗ ಎರಡು ಮಾದರಿಯ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿತು. ಹೀಗಾಗಿ, ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆ ನಡೆಸಿ, ಸೋಂಕು ನಿವಾರಕ ಔಷಧವನ್ನು ನೀಡಲಾಗಿದೆ’ ಎಂದು ಆಸ್ಪತ್ರೆಯ ಇಎನ್‌ಟಿ ಶಸ್ತ್ರಚಿಕಿತ್ಸಕ ಡಾ. ಪ್ರಶಾಂತ್ ಆರ್‌. ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT