ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಬೀಗ ಒಡೆದು ಚರ್ಚ್‌ನಲ್ಲಿ ದಾಂದಲೆ

Published 22 ಜೂನ್ 2023, 3:04 IST
Last Updated 22 ಜೂನ್ 2023, 3:04 IST
ಅಕ್ಷರ ಗಾತ್ರ

ಬೆಂಗಳೂರು: ಬಾಣಸವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿ ಸಂತ ಹತ್ತನೇ ಭಕ್ತಿನಾಥ ಚರ್ಚ್‌ನ ಮುಖ್ಯದ್ವಾರದ ಬಾಗಿಲಿಗೆ ಹಾಕಿದ್ದ ಬೀಗವನ್ನು ಸುತ್ತಿಗೆಯಿಂದ ಒಡೆದು ಒಳನುಗ್ಗಿದ ಆರೋಪಿಯೊಬ್ಬ ಬಲಿಪೀಠ (ಗರ್ಭಗುಡಿ), ವಚನಾಸ್ತಂಭ, ಮೇಣದ ಬತ್ತಿ ಹಾಗೂ ಹೂವಿನ ಕುಂಡಗಳನ್ನು ಧ್ವಂಸಗೊಳಿಸಿದ್ದಾನೆ.

ಬುಧವಾರ ಬೆಳಿಗ್ಗೆ 4ರ ಸುಮಾರಿಗೆ ಈ ಘಟನೆ ನಡೆದಿದ್ದು ಕೆಲವೇ ಗಂಟೆಗಳಲ್ಲಿ ಕಮ್ಮನಹಳ್ಳಿಯ ಟಾಮ್‌ ಮ್ಯಾಥ್ಯು (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಇದೊಂದು ಸೂಕ್ಷ್ಮ ವಿಷಯವಾಗಿದ್ದು ಮಾಹಿತಿ ತಿಳಿದ ಕೆಲವೇ ಕ್ಷಣಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು.


ಈತ ಕಳೆದ 20 ವರ್ಷದಿಂದ ಕಮ್ಮನಹಳ್ಳಿ ಭಾಗದಲ್ಲಿ ನೆಲೆಸಿದ್ದ. ನಾಲ್ಕು ವರ್ಷದಿಂದ ಹಿಂದೆ ಈತನ ತಂದೆ ಮನೆ ಬಿಟ್ಟು ಹೋಗಿದ್ದರು. ಆ ವಿಷಯವನ್ನು ಆರೋಪಿ ಭಾವನಾತ್ಮಕವಾಗಿ ಹಂಚಿಕೊಂಡು ದುಃಖಿತನಾಗಿದ್ದ. ಅದೇ ಕೊರಗಿನಲ್ಲಿದ್ದ. ಆತನ ತಾಯಿ ಇದೇ ಚರ್ಚ್‌ಗೆ ಬಂದು ನಿತ್ಯ ಪ್ರಾರ್ಥನೆ ಸಲ್ಲಿಸುತ್ತಿದ್ದರು. ತಾಯಿ ಎದುರು ‘ನಾನೇ ದೇವರು..’ ಎಂದು ಹೇಳಿಕೊಳ್ಳುತ್ತಿದ್ದ. ವಾಸ ಮಾಡುತ್ತಿದ್ದ ಕೊಠಡಿಯಲ್ಲೂ ಮದ್ಯದ ಬಾಟಲಿಗಳು ದೊರೆತಿವೆ. ಆರೋಪಿಯನ್ನು ವಶಕ್ಕೆ ಪಡೆದು ಎಸಿಪಿ ನೇತೃತ್ವದ ತಂಡವು ವಿಚಾರಣೆ ನಡೆಸುತ್ತಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾ ಶಂಕರ್ ಗುಳೇದ ತಿಳಿಸಿದ್ದಾರೆ.

‘ಮೇಲ್ನೋಟಕ್ಕೆ ಈತ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಈತನನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಪ್ರೇಮ ವೈಫಲ್ಯ ಕಾರಣವೇ?: ‘ಪೊಲೀಸರು ವಿಚಾರಣೆ ವೇಳೆಯೂ ನಾನೇ ದೇವರು ಎಂದು ಹೇಳಿಕೊಂಡು ವಿಚಿತ್ರವಾಗಿ ವರ್ತಿಸಿದ್ದಾನೆ. ಕೆಲವು ವರ್ಷಗಳ ಹಿಂದೆ ಈತ ವಿದೇಶದಲ್ಲೂ ನೆಲೆಸಿದ್ದ. ಅಲ್ಲಿಂದ ವಾಪಸ್ಸಾದ ಮೇಲೆ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆ ದೂರವಾದ ಮೇಲೆ ಪ್ರೇಮ ವೈಫಲ್ಯದಿಂದಲೂ ಮಾನಸಿಕವಾಗಿ ಕುಗ್ಗಿದ್ದ’ ಎಂದು ಮೂಲಗಳು ಹೇಳಿವೆ.

‘ಪವಿತ್ರ ಸ್ಥಳವಾದ ಚರ್ಚ್‌ನಲ್ಲಿ ನಡೆದ ಕೃತ್ಯದಿಂದ ಭಕ್ತರು ನೊಂದಿದ್ದಾರೆ. ಇಂತಹ ಸವಾಲಿನ ಸಮಯದಲ್ಲಿ ಸಮುದಾಯವು ಚರ್ಚ್‌ನೊಂದಿಗೆ ನಿಲ್ಲಬೇಕು. ಹಿಂದಿನ ಸ್ಥಿತಿಗೆ ತರಲು ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕು’ ಎಂದು ಧರ್ಮಗುರು ರೆವರೆಂಡ್‌ ಎಲ್‌. ಜಯಕರನ್‌ ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT