ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 5.20 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ದಕ್ಷಿಣ ವಿಭಾಗ ಪೊಲೀಸರ ಕಾರ್ಯಾಚರಣೆ
Last Updated 13 ಸೆಪ್ಟೆಂಬರ್ 2022, 19:55 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ದಕ್ಷಿಣ ವಿಭಾಗದ ಪೊಲೀಸರು, ಒಡಿಶಾ ಹಾಗೂ ಆಂಧ್ರಪ್ರದೇಶದಿಂದ ಡ್ರಗ್ಸ್ ತಂದು ನಗರದಲ್ಲಿ ಮಾರುತ್ತಿದ್ದ ಪ್ರತ್ಯೇಕ ಜಾಲಗಳನ್ನು ಭೇದಿಸಿದ್ದಾರೆ.

‘ಕೆಂಪೇಗೌಡನಗರ ಹಾಗೂ ಜಯನಗರ ಠಾಣೆ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಮಹಿಳೆ ಸೇರಿ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ₹ 5 ಕೋಟಿ ಮೌಲ್ಯದ 556 ಕೆ.ಜಿ. ಗಾಂಜಾ ಹಾಗೂ 6 ಕೆ.ಜಿ. ಹಶೀಷ್ ಜಪ್ತಿ ಮಾಡಿದ್ದಾರೆ’ ಎಂದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಒಡಿಶಾದ ನವಾಜ್ ಪಾಷಾ, ನೂರ್ ಅಹಮ್ಮದ್, ಇಮ್ರಾನ್ ಪಾಷಾ, ಕಿರಣ್, ಆಂಧ್ರ‍ಪ್ರದೇಶದ ಸಾಗರ್ ಸಾಹೋ, ಶೇಷಗಿರಿ ಹಾಗೂ ಬೆಂಗಳೂರು ಜಯನಗರದ ನವಾಬ್ ಬಂಧಿತರು. ಇವರೆಲ್ಲರೂ ಪ್ರತ್ಯೇಕ ತಂಡಗಳನ್ನು ಕಟ್ಟಿಕೊಂಡು ನಗರದಲ್ಲಿ ಡ್ರಗ್ಸ್ ಮಾರುತ್ತಿದ್ದರು’ ಎಂದು ಹೇಳಿದರು.

ರೈಲಿನಲ್ಲಿ ಗಾಂಜಾ ಸಾಗಣೆ: ‘ನವಾಜ್‌ ಪಾಷಾ ಹಾಗೂ ಇತರರು, ಒಡಿಶಾದಿಂದ ರೈಲಿನಲ್ಲಿ ನಗರಕ್ಕೆ ಗಾಂಜಾ ತರುತ್ತಿದ್ದರು. ಪೊಟ್ಟಣಗಳಲ್ಲಿ ಗಾಂಜಾ ತುಂಬಿ, ಮಧ್ಯವರ್ತಿಗಳ ಮೂಲಕ ಗ್ರಾಹಕರಿಗೆ ಮಾರುತ್ತಿದ್ದರು’ ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.

‘ಗಾಂಜಾವನ್ನು ಬ್ಯಾಗ್‌ಗಳಲ್ಲಿ ಮುಚ್ಚಿಟ್ಟು, ರೈಲಿನ ಸೀಟುಗಳ ಕೆಳಗೆ ಬಚ್ಚಿಡುತ್ತಿದ್ದರು. ಬೆಂಗಳೂರಿನ ಕೆ.ಆರ್.ಪುರ ನಿಲ್ದಾಣಕ್ಕೆ ಬರುತ್ತಿದ್ದಂತೆ ಕೆಲವರ ಸಹಾಯದಿಂದ ಬ್ಯಾಗ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

‘ಸೆ. 12ರಂದು ಮಹಿಳೆ ಸಮೇತ ಮೂವರು ಆರೋಪಿಗಳು ದ್ವಿಚಕ್ರ ವಾಹನ ಹಾಗೂ ಆಟೊದಲ್ಲಿ ಹೊರಟಿದ್ದರು. ಅವರ ಬಳಿ ಗಾಂಜಾ ಇರುವ ಮಾಹಿತಿ ಕೆಂಪೇಗೌಡನಗರ ಠಾಣೆ ಪೊಲೀಸರಿಗೆ ಲಭ್ಯವಾಗಿತ್ತು. ದಾಳಿ ನಡೆಸಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಜಾಲ ಪತ್ತೆಯಾಯಿತು’ ಎಂದು ತಿಳಿಸಿದರು.

‘ಬಂಧಿತ ಆರೋಪಿಗಳ ವಿಚಾರಣೆಯಿಂದ ಮತ್ತಷ್ಟು ಆರೋಪಿಗಳನ್ನು ಸೆರೆ ಹಿಡಿಯಲಾಯಿತು. ಇವರಿಂದ ₹ 2 ಕೋಟಿ ಡ್ರಗ್ಸ್ ಜಪ್ತಿ ಮಾಡಲಾಯಿತು’ ಎಂದು ಹೇಳಿದರು.

ಆಂಧ್ರಪ್ರದೇಶದಲ್ಲಿ ಡ್ರಗ್ಸ್ ಜಪ್ತಿ: ‘ಆರೋಪಿಗಳಾದ ಸಾಗರ್ ಸಾಹೊ ಹಾಗೂ ಶೇಷಗಿರಿ, ಆಂಧ್ರಪ್ರದೇಶದಿಂದ ನಗರಕ್ಕೆ ಡ್ರಗ್ಸ್ ತರುತ್ತಿದ್ದರು. ಅದನ್ನು ಆರೋಪಿ ನವಾಬ್ ಮಾರಾಟ ಮಾಡುತ್ತಿದ್ದ. ಆರೋಪಿಗಳನ್ನು ಬಂಧಿಸಿದ್ದ ಜಯನಗರ ಪೊಲೀಸರು, ಆಂಧ್ರಪ್ರದೇಶಕ್ಕೆ ಹೋಗಿ ಡ್ರಗ್ಸ್ ಜಪ್ತಿ ಮಾಡಿಕೊಂಡು ಬಂದಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ₹ 3.20 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ’ ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT