ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರಕ್ಕೆ ವಿಶೇಷ ಮೂಲಸೌಕರ್ಯ: ಇನ್ನೂ ಬಿಡುಗಡೆಯಾಗಿಲ್ಲ ₹10,500 ಕೋಟಿ

ಭರಪೂರ ಅನುದಾನ ಘೋಷಣೆ
Last Updated 6 ಜನವರಿ 2021, 20:12 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನ ಅಭಿವೃದ್ಧಿ ಸಲುವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಶೇಷ ಮೂಲಸೌಕರ್ಯ ಯೋಜನೆಗಳಿಗಾಗಿ ಇತ್ತೀಚಿನ ಸರ್ಕಾರಗಳು ಪ್ರತಿವರ್ಷವೂ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಘೋಷಿಸುತ್ತಲೇ ಬಂದಿವೆ. ಘೋಷಿಸಿದ ಅನುದಾನದಲ್ಲಿ ಅರ್ಧದಷ್ಟು ಮೊತ್ತವೂ ಬಿಡುಗಡೆಯಾಗಿಲ್ಲ. ಈ ಮಧ್ಯೆ ಸರ್ಕಾರ ‘ಬೆಂಗಳೂರು ಮಿಷನ್‌ 2022’ ಯೋಜನೆ ಅನುಷ್ಠಾನಗೊಳಿಸುವುದಾಗಿ ಪ್ರಕಟಿಸಿದೆ.

2016ರಿಂದ ಈಚೆಗೆ ಹಣಕಾಸು ಇಲಾಖೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಶೇಷ ಮೂಲಸೌಕರ್ಯ ಯೋಜನೆಗಳ ಒಟ್ಟು ₹19,900 ಕೋಟಿ ಮೊತ್ತದ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದೆ. ಆದರೆ, ಸರ್ಕಾರದ ಬೊಕ್ಕಸದಿಂದ ಈ ಉದ್ದೇಶಗಳಿಗೆ ಈ ನಾಲ್ಕು ವರ್ಷಗಳಲ್ಲಿ ಬಿಡುಗಡೆಯಾಗಿರುವುದು ₹ 9,400 ಕೋಟಿ ಮಾತ್ರ. 2016 ಹಾಗೂ ಆ ಬಳಿಕ ಘೋಷಣೆಯಾದ ನಗರೋತ್ಥಾನ ಕಾರ್ಯಕ್ರಮಗಳೇ ಇನ್ನೂ ಪೂರ್ಣಗೊಂಡಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇತ್ತೀಚೆಗೆ ಪ್ರಕಟಿಸಿದ ‘ಬೆಂಗಳೂರು ಮಿಷನ್‌ 2022’ ಯೋಜನೆಯ ಕಾರ್ಯಕ್ರಮಗಳನ್ನು ಇನ್ನೆರಡು ವರ್ಷಗಳಲ್ಲೇ ಪೂರ್ಣಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.

‘ಬೆಂಗಳೂರು ಮಿಷನ್‌ 2022’ ಯೋಜನೆಯ ‘ಸುಗಮ ಸಂಚಾರ’ ಕಾರ್ಯಕ್ರಮದಡಿ ‘ನಮ್ಮ ಮೆಟ್ರೊ’, ಉಪನಗರ ರೈಲು ಯೋಜನೆ ಅನುಷ್ಠಾನದ ಜೊತೆಗೆ ರಸ್ತೆಗಳ ಅಭಿವೃದ್ಧಿ, ಸಂಚಾರ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಬಳಕೆ ಉತ್ತೇಜನ ನೀಡುವುದಾಗಿ ಸರ್ಕಾರ ಪ್ರಕಟಿಸಿದೆ. 12 ಹೈ–ಡೆನ್ಸಿಟಿ ಕಾರಿಡಾರ್‌ಗಳ ಅಭಿವೃದ್ಧಿಗೆ ₹ 400 ಕೋಟಿ ಅನುದಾನಕ್ಕೆ ಹಣಕಾಸು ಇಲಾಖೆ ಇತ್ತೀಚೆಗಷ್ಟೇ ಅನುಮೋದನೆ ನೀಡಿದೆ. 400 ಎಕರೆ ಪ್ರದೇಶದಲ್ಲಿ ವೃಕ್ಷೋದ್ಯಾನ ಅಭಿವೃದ್ಧಿ, ವಾಯು ಗುಣಮಟ್ಟ ರಕ್ಷಣೆ, ಜಲ ಸಂಪನ್ಮೂಲ ರಕ್ಷಣೆ, ಕೆರೆಗಳ ಸಮೀಪ ಜೀವವೈವಿಧ್ಯ ತಾಣಗಳ ರಕ್ಷಣೆಗಳಂತಹ ಕಾರ್ಯಕ್ರಮಗಳನ್ನು ಈ ಯೋಜನೆಯಡಿ ಅನುಷ್ಠಾನಗೊಳಿಸುವುದಾಗಿ ಸರ್ಕಾರ ಹೇಳಿದೆ.

’ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯ ಮೊತ್ತ ₹8,343.87 ಕೋಟಿ. ಬಹುತೇಕ ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾ
ಗಿದೆ. ಆದರೆ, ಕಳೆದ ಒಂದು ವರ್ಷದಲ್ಲಿ ಪಾಲಿಕೆಗೆ ಬಿಡುಗಡೆಯಾಗಿರುವುದು ₹1 ಸಾವಿರ ಕೋಟಿ ಮಾತ್ರ. ಗುತ್ತಿಗೆದಾರರ ಬಾಕಿಯೇ ₹2000 ಕೋಟಿ ಇದೆ‘ ಎಂದು ಬಿಬಿಎಂಪಿಯ ಅಧಿಕಾರಿ ಯೊಬ್ಬರು ಹೇಳಿದರು.

ವಿಶೇಷ ಮೂಲಸೌಕರ್ಯ ಯೋಜನೆಗಳಿಗೆ ಮಂಜೂರಾಗಿರುವ ಅನುದಾನದಲ್ಲಿ ₹10,500 ಕೋಟಿಗೂ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ ಇರುವ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಸರ್ಕಾರ ವಿಶೇಷ ಮೂಲ
ಸೌಕರ್ಯ ಯೋಜನೆಗಳಿಗಾಗಿ ಪ್ರತಿವರ್ಷ ಹೆಚ್ಚೂ ಕಡಿಮೆ ₹ 2000 ಕೋಟಿಗಳಷ್ಟು ಅನುದಾನವನ್ನು ಬಿಡುಗಡೆ ಮಾಡುತ್ತಾ
ಬಂದಿದೆ. ಕೆಲವೊಂದು ಕಾಮಗಾರಿಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಅಗತ್ಯ ಇರುತ್ತದೆ. ಮೇಲ್ಸೇತುವೆ ನಿರ್ಮಾಣ, ರಸ್ತೆ ವಿಸ್ತರಣೆಯಂತಹ ದೊಡ್ಡ ಮಟ್ಟದ ಕಾಮಗಾರಿಗಳಿಗೆ ಸಹಜವಾಗಿಯೇ ಎರಡು–ಮೂರು ವರ್ಷಗಳು ತಗಲುತ್ತದೆ. ಕಾಮಗಾರಿಗಳ ಪ್ರಗತಿಗೆ ಅನುಗುಣವಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ’ ಎಂದರು.

‘ಮುಖ್ಯಮಂತ್ರಿಯವರ ನವ ನಗರೋತ್ಥಾನ ಯೋಜನೆಯಡಿ 2019ರಲ್ಲಿ ಪ್ರಕಟಿಸಿರುವ ₹ 8,343.87 ಕೋಟಿ ಒಂದು ವರ್ಷದ ಅನುದಾನವಲ್ಲ. ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಬಿಡುಗಡೆಯಾಗುವ ಅನುದಾನ ಇದಾಗಿದ್ದು, ಇದರ ಬಿಡುಗಡೆಗೆ ಇನ್ನೂ ಕಾಲಾವಕಾಶ ಇದೆ. ಅನುದಾನದ ಕೊರತೆಯ ಕಾರಣಕ್ಕಾಗಿ ಯಾವುದೇ ಕಾಮಗಾರಿ ಅನುಷ್ಠಾನ ವಿಳಂಬವಾಗಿಲ್ಲ. ಕೋವಿಡ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಜಾರಿಯಲ್ಲಿದ್ದಾಗಲೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಧಕ್ಕೆ ಉಂಟಾಗಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘₹ 5ಸಾವಿರ ಕೋಟಿ ಬಿಡುಗಡೆಗೆ ಕೋರುತ್ತೇವೆ’

‘ಬೆಂಗಳೂರು ಮಿಷನ್‌ 2020 ಯೋಜನೆಯ ಕಾಮಗಾರಿಗಳನ್ನು ನಾವು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾಗಿದೆ. ಈ ಸಲುವಾಗಿ ಈಗಾಗಲೇ ಮಂಜೂರಾಗಿ, ಬಿಡುಗಡೆಗೆ ಬಾಕಿ ಇರುವ ಅನುದಾನವನ್ನು ಆದಷ್ಟು ಬೇಗ ಬಿಡುಗಡೆ ಮಾಡಿದರೆ ಕಾಮಗಾರಿಗಳನ್ನು ಚುರುಕುಗೊಳಿಸಲು ಸಾಧ್ಯ. ಹಾಗಾಗಿ 2021–22ನೇ ಸಾಲಿನಲ್ಲಿ ಕನಿಷ್ಠ ಪಕ್ಷ ₹ 5ಸಾವಿರ ಕೋಟಿಯನ್ನಾದರೂ ಬಿಡುಗಡೆ ಮಾಡುವಂತೆ ಸರ್ಕಾರವನ್ನು ವಿನಂತಿಸುತ್ತೇವೆ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ಆರ್ಥಿಕ ಇಲಾಖೆ ಅನುಮೋದಿಸಿರುವ ಕ್ರಿಯಾಯೋಜನೆಗಳು

ಮೂಲಸೌಕರ್ಯಗಳಿಗೆ ಅನುದಾನ ಬಿಡುಗಡೆ

ವರ್ಷ; ಮೊತ್ತ (₹ಕೋಟಿಗಳಲ್ಲಿ)

2016–17; 2,120

2017–18; 2,940

2018–19; 1,851

2019–20; 1,440

2020–21; 1000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT