ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ–ಮಗು ಸಾವಿನ ಪ್ರಕರಣ; ಸ್ವತಂತ್ರ ಸಮಿತಿಯಿಂದ ತನಿಖೆ-ಸಚಿವ ಕೆ.ಜೆ. ಜಾರ್ಜ್‌

Published 21 ನವೆಂಬರ್ 2023, 16:16 IST
Last Updated 21 ನವೆಂಬರ್ 2023, 16:16 IST
ಅಕ್ಷರ ಗಾತ್ರ

ಬೆಂಗಳೂರು: ಕಾಡುಗೋಡಿಯಲ್ಲಿ ವಿದ್ಯುತ್ ಅವಘಡದಿಂದ ತಾಯಿ- ಮಗು ಸಾವು ಕಂಡ ಪ್ರಕರಣದ ತನಿಖೆಯನ್ನು ನಾಲ್ಕು ವಿಧಾನಗಳಲ್ಲಿ ನಡೆಸಲು ಆದೇಶಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಸ್ಕಾಂ, ಪೊಲೀಸ್ ಇಲಾಖೆ ಹಾಗೂ ಎಲೆಕ್ಟ್ರಿಕ್‌ ಇನ್‌ಸ್ಪೆಕ್ಟೊರೇಟ್‌ನಿಂದ ತನಿಖೆ‌ ನಡೆಸಲಾಗುತ್ತಿದೆ. ಅಲ್ಲದೆ, ಕೆಪಿಟಿಸಿಎಲ್‌ನ ನಿವೃತ್ತ ಮುಖ್ಯ ಎಂಜಿನಿಯರ್, ಸಿಪಿಆರ್‌ಐ ಹೆಚ್ಚುವರಿ ನಿರ್ದೇಶಕರು ಸೇರಿದಂತೆ ನಾಲ್ಕು ಜನರನ್ನೊಳಗೊಂಡ ಸ್ವತಂತ್ರ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯ ಮೂಲಕವೂ ತನಿಖೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ತನಿಖಾ ಸಮಿತಿಗಳಿಗೆ ವರದಿ ನೀಡಲು ಕಾಲಮಿತಿ ನಿಗದಿಪಡಿಸಲಾಗಿದೆ. ವರದಿಗಳ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ವಿವರಿಸಿದರು.‌

‘ಘಟನೆ ಕುರಿತು ಚೀಫ್‌ ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟೊರೇಟ್‌ ನೀಡಿರುವ ಪ್ರಾಥಮಿಕ ತನಿಖಾ ವರದಿ ಪ್ರಕಾರ, ಇದು ತಾಂತ್ರಿಕ ಸಮಸ್ಯೆಯಿಂದ ನಡೆದಿರುವಂಥ ಘಟನೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಲು ನಾವು ಅಡ್ಡಿಪಡಿಸಿಲ್ಲ’ ಎಂದು ತಿಳಿಸಿದರು.

‘ನಗರದಲ್ಲಿ ವಿದ್ಯುತ್‌ ತಂತಿಗಳ ಮೇಲೆ ಆಪ್ಟಿಕಲ್‌ ಫೈಬರ್‌ ಕೇಬಲ್‌ಗಳನ್ನು ಎಳೆಯಲಾಗಿದೆ. ಇದು ಮತ್ತೊಂದು ರೀತಿಯ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಕೇಬಲ್‌ಗಳನ್ನು ಒಮ್ಮೆಲೆ ತೆಗೆದು ಹಾಕುವಂತೆ ಆದೇಶಿಸಲು ಆಗುವುದಿಲ್ಲ. ಹಾಗಾಗಿ, 15 ದಿನಗಳಲ್ಲಿ ಕೇಬಲ್‍ಗಳನ್ನು ಭೂಗತ ಮಾರ್ಗಗಳಲ್ಲಿ ಅಳವಡಿಸಲು ಅವಕಾಶ ನೀಡಲಾಗುತ್ತಿದೆ. ಕಾಲಮಿತಿಯಲ್ಲಿ ತೆರವುಗೊಳಿಸದಿದ್ದರೆ ಕ್ರಮ ಕೈಗೊಳ್ಳುತ್ತೇವೆ. ವಿದ್ಯುತ್ ತಂತಿ ಮೇಲಿರುವ ಎಲ್ಲಾ ಆಪ್ಟಿಕಲ್‌ ಕೇಬಲ್‍ಗಳ ಸಂಪರ್ಕ ಕಡಿತ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT