ಸೋಮವಾರ, ಜೂನ್ 1, 2020
27 °C

ಹೋಟೆಲ್‌ಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಲು ನಿರಾಕರಿಸಿದ ಮಾಲೀಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

quarantine ward

ಬೆಂಗಳೂರು:  ಕೊರೊನಾ ಸೋಂಕು ಶಂಕಿತರನ್ನು ಇತರರಿಂದ ದೂರವಿರಿಸಿ ಕ್ವಾರಂಟೈನ್ ಮಾಡಲಾಗುತ್ತದೆ. ಈ ರೀತಿ ಜನರನ್ನು ಕ್ವಾರಂಟೈನ್‌ನಲ್ಲಿರಿಸುವುದಕ್ಕಾಗಿ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಬೆಂಗಳೂರು ನಗರದಲ್ಲಿರುವ 17 ಹೋಟೆಲ್‌ಗಳಿಗೆ ಸೂಚನೆ ನೀಡಿತ್ತು. ಆದರೆ ಹೋಟೆಲ್‌ನವರು ಇದಕ್ಕೆ ನಿರಾಕರಿಸಿದ್ದಾರೆ. 

ಮೊದಲು  ರವಿಶಂಕರ್ ಗುರೂಜಿ ಆಶ್ರಮ, ಕಾವೇರಿ ಗೆಸ್ಟ್ ಹೌಸ್, ಕುಮಾರ ಕೃಪಾ ಗೆಸ್ಟ್ ಹೌಸ್, ಆಫೀಸರ್ಸ್ ಕ್ಲಬ್, ಜಂಗಲ್  ಲಾಡ್ಜ್ ಮೊದಲಾದವುಗಳನ್ನು ಕ್ವಾರಂಟೈನ್‌ ಕೇಂದ್ರವಾಗಿ ಮಾಡಿ. ಆಮೇಲೆ ಹೋಟೆಲ್‌ನವರು ತಮ್ಮ ನಿಲುವು ವ್ಯಕ್ತಪಡಿಸುತ್ತಾರೆ ಎಂದು ಪ್ರಜಾವಾಣಿ ಜತೆ ಮಾತನಾಡಿದ  ಬೃಹತ್ ಬೆಂಗಳೂರು ಹೋಟೆಲ್ ಸಂಘಟನೆಯ ಅಧ್ಯಕ್ಷ  ಪಿ.ಸಿ.ರಾವ್ ಹೇಳಿದ್ದಾರೆ.

ನಗರದಲ್ಲಿ ಸುಮಾರು 3,500 ಹೋಟೆಲ್‌ಗಳಿವೆ. ಅದರಲ್ಲಿ ಕ್ವಾರಂಟೈನ್ ಕೇಂದ್ರ ಮಾಡಬಹುದಾದ ಸೌಲಭ್ಯ ಹೊಂದಿರುವ 580 ಹೋಟೆಲ್‌ಗಳಿವೆ ಎಂದು ಬಿಬಿಎಂಸಿ  ಹೇಳಿದೆ.

 ಈ ವಿಚಾರದ ಬಗ್ಗೆ ಸರ್ಕಾರ ಹೋಟೆಲ್ ಮಾಲೀಕರನ್ನು ಭೇಟಿಯಾಗಬೇಕು. ಕ್ವಾರಂಟೈನ್ ಕೇಂದ್ರ ಮಾಡಲು ಸಾಧ್ಯ ಎಂದೆನಿಸುವ ಹೋಟೆಲ್‌ಗಳ ಮಾಲೀಕರನ್ನು ಭೇಟಿ ಮಾಡಿ, ಅವರು ಒಪ್ಪಿದರೆ ಮಾತ್ರ ಮುಂದಿನ ತೀರ್ಮಾನ ಕೈಗೊಳ್ಳಬಹುದು. ಹಲವಾರು ಹೋಟೆಲ್‌ಗಳಲ್ಲಿ ಈಗ ಸಿಬ್ಬಂದಿ ಇಲ್ಲ, ಎಸಿ ಸಮಸ್ಯೆ  ಸೇರಿದಂತೆ ಹಲವಾರು ಸಮಸ್ಯೆ ಇದೆ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ರಾಜ್ಯದಲ್ಲಿ ಇಲ್ಲಿಯವರೆಗೆ ಎರಡೇ ಎರಡು ಹೋಟೆಲ್‌ಗಳು ಅಂದರೆ ಮೈಸೂರಿನ ವೈಸರಾಯ್ ಹೋಟೆಲ್ ಮತ್ತು ಹುಬ್ಬಳಿಯ ಮೆಟ್ರೊ ಹೋಟೆಲ್ ಮಾತ್ರ ತಾವೇ ಮುಂದೆ ಬಂದು ಹೋಟೆಲ್‌ನ್ನು ಕ್ವಾರಂಟೈನ್‌ಗಾಗಿ ಬಿಟ್ಟು ಕೊಟ್ಟಿವೆ. ಬೆಂಗಳೂರಿನಲ್ಲಿರುವ 17 ಹೋಟೆಲ್‌ಗಳಲ್ಲಿ  1,418 ರೂಂಗಳನ್ನು ಕ್ವಾರಂಟೈನ್‌ ಕೇಂದ್ರಗಳಾಗಿ ಬಳಸಬಹುದು ಎಂದು ಬಿಬಿಎಂಪಿ ಮಾರ್ಚ್ 29ರಂದು ಮಾಹಿತಿ ನೀಡಿತ್ತು. 

ಕೊರೊನಾ ಸೋಂಕು ಲಕ್ಷಣವಿರುವ ರೋಗಿಗಳನ್ನು ಕ್ವಾರಂಟೈನ್‌ನಲ್ಲಿರಿಸುವುದಕ್ಕಾಗಿ ಹೋಟೆಲ್‌ಗಳನ್ನು ಬಳಸಲು ಸರ್ಕಾರ ಚಿಂತಿಸಿತ್ತು. ರೋಗಿಗಳಿಗೆ ಚಿಕಿತ್ಸೆ ನೀಡುವ ಮುನ್ನ  ಅವರ ಗಂಟಲಿನ ದ್ರವದ ಮಾದರಿ ಸಂಗ್ರಹಿಸಿ ಅದನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿಕೊಡಲಾಗುತ್ತದೆ. ವೈದ್ಯಕೀಯ ವರದಿ ಬರುವವರಗೆ ಆ ವ್ಯಕ್ತಿಗಳು ಹೋಟೆಲ್ ಕೋಣೆಗಳಲ್ಲಿ ಇರುವಂತೆ ಹೇಳಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದರು.

ಕೊರೊನಾವೈರಸ್ ಸೋಂಕು ಪ್ರಕರಣದ ಬಗ್ಗೆ ಮತ್ತು ಅದನ್ನು ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕ್ವಾರಂಟೈನ್ ಆಗಿರುವ ವ್ಯಕ್ತಿಗೆ ಜ್ವರ, ಶೀತ ಕಾಣಿಸಿಕೊಂಡರೆ ಅವರಿಗೆ ತಕ್ಷಣವೇ ಚಿಕಿತ್ಸೆ ನೀಡಲಾಗುತ್ತದೆ. ಅವರನ್ನು ನಿಯೋಜಿತ ಹೋಟೆಲ್‌ಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗವುದು. ಕೊರೊನಾ  ಸೋಂಕು ಲಕ್ಷಣಗಳು ಇದೆ ಎಂದು ಶಂಕಿಸುವ ವ್ಯಕ್ತಿಗಳನ್ನು  ಎರಡು ದಿನಗಳ ಕಾಲ ಹೋಟೆಲ್‌ನಲ್ಲಿರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು