ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಪೂರ್ಣ ಸಂವಾದಕ್ಕೆ ರಾಜಧಾನಿ ಸಜ್ಜು

ಬೆಂಗಳೂರು ಸಾಹಿತ್ಯ ಉತ್ಸವ– 8ನೇ ಆವೃತ್ತಿ ಇಂದಿನಿಂದ
Last Updated 8 ನವೆಂಬರ್ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ರೋಗಗ್ರಸ್ತ ಅರ್ಥವ್ಯವಸ್ಥೆ, ಭಾರತೀಯ ಚುನಾವಣೆಗಳು, ಸಾವರ್ಕರ್‌ಗೆ ಭಾರತರತ್ನ ನೀಡುವ ಕುರಿತ ವಿವಾದ, ಹವಾಮಾನ ವೈಪರೀತ್ಯ ಮುಂತಾದ ಹತ್ತು ಹಲವು ಸಮಕಾಲೀನ ವಿಚಾರಗಳ ಕುರಿತ ವಿಚಾರಪೂರ್ಣ ಸಂವಾದಗಳಿಗೆ ರಾಜಧಾನಿ ಸಜ್ಜಾಗಿದೆ.

ಕುಮಾರಕೃಪಾ ರಸ್ತೆಯ ಹೋಟೆಲ್‌ ಲಲಿತ್‌ ಅಶೋಕ್‌ನಲ್ಲಿ ಇದೇ ಶನಿವಾರ (ನ.9) ಹಾಗೂ ಭಾನುವಾರ (ನ.10) ಏರ್ಪಡಿಸಿರುವ ಬೆಂಗಳೂರು ಸಾಹಿತ್ಯ ಉತ್ಸವದ 8ನೇ ಆವೃತ್ತಿ 100 ಕ್ಕೂ ಅಧಿಕ ವಿಚಾರಗಳ ಕುರಿತು ಸಂವಾದಗಳಿಗೆ ವೇದಿಕೆ ಕಲ್ಪಿಸಲಿದೆ. ಈ ಸಲುವಾಗಿಯೇ ತುಘಲಕ್‌, ಯಯಾತಿ ಹಾಗೂ ರೆಡ್‌ ಕೌಚ್‌ ವೇದಿಕೆಗಳು ಸಜ್ಜಾಗಿವೆ.

ದೇಶದ ವಿವಿಧ ಭಾಗಗಳ ವಿಚಾರವಾದಿಗಳು, ಬುದ್ಧಿಜೀವಿಗಳು, ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳ ದಿಗ್ಗಜರ ಸಮ್ಮಿಲನಕ್ಕೆ ಈ ಉತ್ಸವದ ನೆಲೆ ಕಲ್ಪಿಸಲಿದೆ. ಬೌದ್ಧಿಕ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ನೂರಾರು ಮಂದಿ ಈಗಾಗಲೇ ನಗರಕ್ಕೆ ಬಂದಿದ್ದಾರೆ.

ಮೊದಲ ದಿನ ರೋಗಗ್ರಸ್ತ ಆರ್ಥಿಕತೆ ಕುರಿತು ಇಂದಿರಾ ರಾಜಾರಾಮನ್‌, ಆರ್‌.ಜಗನ್ನಾಥನ್‌, ವಿವೇಕ್‌ ಕೌಲ್ ಹಾಗೂ ನಾರಾಯಣ ರಾಮಚಂದ್ರನ್‌ ಅವರು ವಿಚಾರ ಮಂಡಿಸಲಿದ್ದಾರೆ. ಬಹುಮತವಾದ ಮತ್ತು ಭಾರತೀಯ ಪ್ರಜಾಪ್ರಭುತ್ವ ಕುರಿತು ಮುಕುಲ್‌ ಕೇಶವನ್‌ ಮತ್ತು ಶ್ರೀನಾಥ್‌ ರಾಘವನ್‌ ಸಂವಾದ ನಡೆಸಿಕೊಡಲಿದ್ದಾರೆ. ಮೋದಿ– ಟ್ರಂಪ್‌ ಯುಗದಲ್ಲಿ ಭಾರತ ಅಮೆರಿಕ ಸಂಬಂಧ ಕುರಿತು ವರ್ಗೀಸ್‌ ಕೆ.ಜಾರ್ಜ್ ಬೆಳಕು ಚೆಲ್ಲಲಿದ್ದಾರೆ.

ಭಾನುವಾರ ನಡೆಯುವ ಸಂವಾದದಲ್ಲಿ ಹವಾಮಾನ ವೈಪರೀತ್ಯ ಕುರಿತು ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್‌, ಚಿತ್ರಾಂಗದ ಚೌಧರಿ, ನವ್ರೋಜ್‌ ದುಬಾಷ್‌, ಟಿಮ್‌ ಫ್ಲಾನರಿ ಬೆಳಕು ಚೆಲ್ಲಲಿದ್ದಾರೆ. ಕನ್ನಡ ನೆಟ್ಟಿಗರ ಅಕ್ಷರ ಲೋಕದಲ್ಲಿನ ಬೆಳವಣಿಗೆಯನ್ನು ರಾಜೇಂದ್ರ ಪ್ರಸಾದ್‌ ಹಾಗೂ ತೀನಾ ಶಶಿಕಾಂತ್‌ ‘ಎಲ್ಲಿಗೆ ಬಂತು ನೆಟ್‌ ಸಾಹಿತ್ಯ’ ಎಂಬ ವಿಚಾರದ ಚರ್ಚೆಯಲ್ಲಿ ತೆರೆದಿಡಲಿದ್ದಾರೆ. ಬ್ಯಾಂಕ್‌ ಠೇವಣಿಗಳ ಅಸುರಕ್ಷತೆ ಬಗ್ಗೆ ವಿವೇಕ್‌ ಕೌಲ್‌ ವಿಚಾರ ಹಂಚಿಕೊಳ್ಳಲಿದ್ದಾರೆ.

ಎಳೆಯರ ಸಲುವಾಗಿಯೇ ಅಬ್ರಕಡಬ್ರ, ಖುಲ್‌ ಜಾ ಸಿಮ್‌ ಸಿಮ್‌, ಶಾಜಮ್‌ ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಸಂಗೀತ ಕಛೇರಿಗಳು ಹಾಗೂ ಇತರ ಕಾರ್ಯಕ್ರಮಗಳು, ತಿನಿಸುಗಳ ಮಳಿಗೆಗಳು ಇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT