ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ | ಬೆಂಗಳೂರು ತೊರೆದ ಸಾವಿರಾರು ಮಂದಿ

Last Updated 14 ಜುಲೈ 2020, 20:55 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್ ಜಾರಿ ಮುನ್ನಾದಿನವಾದ ಮಂಗಳವಾರವೂ ಸಾವಿರಾರು ಮಂದಿ ಬೆಂಗಳೂರು ಖಾಲಿ ಮಾಡಿಕೊಂಡು ತಮ್ಮೂರಿನತ್ತ ತೆರಳಿದರು.

ಮೆಜೆಸ್ಟಿಕ್ ಬಸ್ ನಿಲ್ದಾಣ, ಸ್ಯಾಟಲೈಟ್ ನಿಲ್ದಾಣ, ಕೆಂಗೇರಿ ನಿಲ್ದಾಣ, ಪೀಣ್ಯ ನಿಲ್ದಾಣದಲ್ಲಿ ಜನರು ಕುಟುಂಬ ಸಮೇತವಾಗಿ ಬಸ್‌ ಏರಿದ್ದು ಕಂಡುಬಂತು. ಉತ್ತರ ಕರ್ನಾಟಕದಿಂದ ನಗರಕ್ಕೆ ವಲಸೆ ಬಂದಿದ್ದ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ನಗರದಲ್ಲಿರುವ ಮನೆಗಳನ್ನು ಖಾಲಿ ಮಾಡಿಕೊಂಡು ಗಂಟುಮೂಟೆ ಸಮೇತರಾಗಿ ಅವರೆಲ್ಲ ನಿಲ್ದಾಣಕ್ಕೆ ಬಂದಿದ್ದರು. ಮಕ್ಕಳು, ವೃದ್ಧರು ಇದ್ದರು. ಎಲ್ಲರ ಆರೋಗ್ಯ ಪರೀಕ್ಷೆ ನಡೆಸಿದ ಕೆಎಸ್ಆರ್‌ಟಿಸಿ ಸಿಬ್ಬಂದಿ, ಕೈಗೆ ಹೋಂ ಕ್ವಾರಂಟೈನ್ ಸೀಲ್ ಹಾಕಿದ ನಂತರವೇ ಬಸ್‌ಗೆ ಹತ್ತಿಸಿದರು.

ಬಸ್‌ಗಳಲ್ಲದೇ ಖಾಸಗಿ ವಾಹನಗಳಲ್ಲೂ ತಂಡೋಪ ತಂಡವಾಗಿ ಜನರು ತಮ್ಮೂರಿನತ್ತ ಹೊರಟಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆಯಿಂದಲೇ ವಾಹನಗಳ ದಟ್ಟಣೆ ವಿಪರೀತವಾಗಿತ್ತು. ಕಾರು, ಮ್ಯಾಕ್ಸಿಕ್ಯಾಬ್, ಟಂಟಂ, ಟ್ರಕ್, ಆಟೊ, ದ್ವಿಚಕ್ರ ವಾಹನಗಳಲ್ಲಿ ಜನರು ಸಂಚರಿಸಿದರು.

ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ತುಮಕೂರು ರಸ್ತೆಯುದ್ದಕ್ಕೂ ವಾಹನಗಳು ಸಂಚರಿಸಿದವು. ಯಶವಂತಪುರ, ಪೀಣ್ಯ, ಎಂಟನೇ ಮೈಲಿ, ಜಾಲಹಳ್ಳಿ ಹಾಗೂ ಸುತ್ತಮುತ್ತಲೂ ದಟ್ಟಣೆ ಹೆಚ್ಚಿತ್ತು.

ನವಯುಗ ಟೋಲ್‌ಗೇಟ್‌ನಲ್ಲೂ ವಾಹನಗಳ ಸಂಖ್ಯೆ ಹೆಚ್ಚಿತ್ತು. ಟೋಲ್‌ನಲ್ಲಿ ಶುಲ್ಕ ಪಾವತಿಗೆ ವಿನಾಯಿತಿ ನೀಡಲಾಗಿತ್ತು. ಹೀಗಾಗಿ, ವಾಹನಗಳು ಬೇಗನೇ ಟೋಲ್‌ಗೇಟ್ ದಾಟಿದವು.

ಪ್ರಮುಖ ರಸ್ತೆ, ಮೇಲ್ಸೇತುವೆ ಬಂದ್
ಮಂಗಳವಾರ ರಾತ್ರಿ 8 ಗಂಟೆಯಿಂದಲೇ ನಗರದ ಪ್ರಮುಖ ರಸ್ತೆ ಹಾಗೂ ಎಲ್ಲ ಮೇಲ್ಸೇತುವೆಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ.

ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಗಡಿ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ದಿನದ 24 ಗಂಟೆಯೂ ಪೊಲೀಸರು ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಆಂಬುಲೆನ್ಸ್ ಹಾಗೂ ತುರ್ತು ವಾಹನಗಳ ಹೊರತುಪಡಿಸಿ ಉಳಿದೆಲ್ಲ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ನಗರದ ಬಹುತೇಕ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಕೆಎಸ್‌ಆರ್‌ಪಿ, ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT