ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ರಾತ್ರಿ 10ರವರೆಗೂ ಮೆಟ್ರೊ ಸಂಚಾರ: 'ಪ್ರಜಾವಾಣಿ' ಅಭಿಯಾನಕ್ಕೆ ಸ್ಪಂದನೆ

Last Updated 17 ಸೆಪ್ಟೆಂಬರ್ 2021, 20:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮೆಟ್ರೊ ರೈಲು ಸಂಚಾರ ಸಮಯ ವಿಸ್ತರಿಸಬೇಕು ಎಂದು ಒತ್ತಾಯಿಸಿ‘ಪ್ರಜಾವಾಣಿ‘ನಡೆಸಿದ ಅಭಿಯಾನಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮನ್ನಣೆ ನೀಡಿದೆ.

ಶನಿವಾರದಿಂದ (ಸೆ.18) ಮೆಟ್ರೊ ರೈಲುಗಳು ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಸಂಚರಿಸಲಿವೆ.

ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣಗಳಿಂದ ರಾತ್ರಿ 9.30ಕ್ಕೆ ಕೊನೆಯ ರೈಲು ಹೊರಡಲಿದೆ.

ಈ ಮೊದಲು, ಬೆಳಿಗ್ಗೆ 7ರಿಂದ ರಾತ್ರಿ 8ರವರೆಗೆ ಮಾತ್ರ ಸೇವೆ ಲಭ್ಯವಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಮೆಟ್ರೊ ಸೇವೆಯ ಸಮಯ ಕಡಿತಗೊಳಿಸಿದ್ದರಿಂದ ಪ್ರಯಾಣಿಕರಿಗೆ ಆಗುವ ಸಮಸ್ಯೆಗಳ ಕುರಿತು ‘ಪ್ರಜಾವಾಣಿ‘ಯಲ್ಲಿ ಸೆ.12ರಿಂದ ಸತತ ಆರು ದಿನ ವರದಿಗಳನ್ನು ಪ್ರಕಟಿಸಲಾಗಿತ್ತು.

ಬಸ್‌ ಮತ್ತು ರೈಲು ಸಂಚಾರವಿದ್ದರೂ ಮೆಟ್ರೊ ರೈಲು ಸೇವೆಯ ಅವಧಿಯನ್ನು ಮಾತ್ರ ಕಡಿತಗೊಳಿಸಿದ್ದರಿಂದ ಪ್ರಯಾಣಿಕರು ತೊಂದರೆಗೀಡಾಗಿದ್ದರು. ಶಾಲಾ–ಕಾಲೇಜು, ಸರ್ಕಾರಿ–ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದರೂ ಮೆಟ್ರೊ ರೈಲು ಸಂಚಾರಕ್ಕೆ ಮಾತ್ರ ರಾತ್ರಿ ಕರ್ಫ್ಯೂ ‘ನೆಪ’ ಹೇಳಲಾಗಿತ್ತು. ಸಾರ್ವಜನಿಕ ಸಾರಿಗೆಗಳಲ್ಲಿ ಸಮನ್ವಯತೆ ಇರಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದರು.

ಸಚಿವರು, ಸಂಸದರು, ಶಾಸಕರು ಮತ್ತು ಸಾರ್ವಜನಿಕರು ಮೆಟ್ರೊ ರೈಲು ಸೇವೆ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದರು.

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್‌ ಅವರನ್ನು ಸಂಸದ ಪಿ.ಸಿ. ಮೋಹನ್ ಭೇಟಿ ಮಾಡಿ, ಮೆಟ್ರೊ ರೈಲು ಸಂಚಾರ ಸಮಯ ವಿಸ್ತರಿಸುವಂತೆ ಮನವಿ ಸಲ್ಲಿಸಿದ್ದರು. ‘ಜನರ ಬೇಡಿಕೆಗೆ ಮೆಟ್ರೊ ನಿಗಮ ಸ್ಪಂದಿಸಿದೆ. ನಿಗಮಕ್ಕೆ ಧನ್ಯವಾದಗಳು’ ಎಂದು ಮೋಹನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT