ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಕೆಎಲ್‌: ಪ್ರಮುಖ ರಸ್ತೆ ಕಾಮಗಾರಿಗೆ ವೇಗ

35 ಕಿರುಸೇತುವೆ, 3 ಅಂಡರ್‌ಪಾಸ್‌ ನಿರ್ಮಾಣ ಇನ್ನೊಂದು ವರ್ಷದಲ್ಲಿ ಪೂರ್ಣ
Published 28 ಸೆಪ್ಟೆಂಬರ್ 2023, 0:20 IST
Last Updated 28 ಸೆಪ್ಟೆಂಬರ್ 2023, 0:20 IST
ಅಕ್ಷರ ಗಾತ್ರ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಿಡಿಎ ಬಡಾವಣೆಯಲ್ಲಿ ಹಾದುಹೋಗುವ ಮೈಸೂರು ರಸ್ತೆ– ಮಾಗಡಿ ರಸ್ತೆ ಸಂಪರ್ಕಿಸುವ ಪ್ರಮುಖ ರಸ್ತೆ (ಎಂಎಆರ್‌) ಕಾಮಗಾರಿ ವೇಗ ಪಡೆದುಕೊಂಡಿದೆ.

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಯ ಹಲವು ಅನುಮತಿ ಪ್ರಕ್ರಿಯೆಗಳು, ಟೆಂಡರ್‌ ಸಮ್ಮತಿ ಕಾರ್ಯಗಳು ಕಳೆದ ಆರು ತಿಂಗಳಲ್ಲಿ ಮುಗಿದಿರುವುದರಿಂದ ಎಂಎಆರ್‌ ಕಾಮಗಾರಿಗೆ ಚುರುಕುಗೊಂಡಿದೆ. 

ನಾಡಪ್ರಭು ಕೆಂಪೇಗೌಡ ಬಿಡಿಎ ಬಡಾವಣೆಯಲ್ಲಿ ಎಂಎಆರ್‌ನಲ್ಲಿ 35 ಕಿರುಸೇತುವೆ ನಿರ್ಮಾಣವಾಗಬೇಕಿದೆ. ಅದಕ್ಕೆ ಬಿಡಿಎ ಆಯುಕ್ತ ಕುಮಾರ್‌ ನಾಯಕ್‌ ಅವರು ಮಾರ್ಚ್‌ನಲ್ಲಿ ಅನುಮತಿ ನೀಡಿದ್ದು, ಈಗಾಗಲೇ 15 ಕಿರುಸೇತುವೆಗಳ ಕಾಮಗಾರಿ ಮುಗಿದಿವೆ. 10 ಕಿರುಸೇತುವೆಗಳು ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಉಳಿದ ಇನ್ನೈದು ತಿಂಗಳಲ್ಲಿ ಪೂರ್ಣಗೊಳ್ಳಲಿವೆ. 

ಎಂಎಎಆರ್‌ನಲ್ಲಿ 2.90 ಕಿ.ಮೀ, 5.10 ಕಿ.ಮೀ ಹಾಗೂ 9.70 ಕಿ.ಮೀನಲ್ಲಿ ಅಂಡರ್‌ಪಾಸ್‌ಗಳನ್ನು ನಿರ್ಮಿಸಬೇಕಿದೆ. ಇವುಗಳು ಬಡಾವಣೆಯ ರಸ್ತೆಗಳನ್ನು ಪ್ರಮುಖ ರಸ್ತೆಗೆ ಸಂಪರ್ಕಿಸುತ್ತವೆ. ಈ ಕಾಮಗಾರಿಯ ಗುತ್ತಿಗೆಯನ್ನು ಸೆ.14ರಂದು ಕರಾರು ಪತ್ರದ ಮೂಲಕ ದೃಢೀಕರಿಸಲಾಗಿದೆ. ಅಂಡರ್‌ಪಾಸ್‌ಗಳ ನಿರ್ಮಾಣ ಕಾರ್ಯವೂ ಇದೀಗ ನಡೆಯುತ್ತಿದ್ದು, ಒಂದು ವರ್ಷದಲ್ಲಿ ಎಲ್ಲವೂ ಮುಗಿಯಲಿವೆ ಎಂದು ಬಿಡಿಎ ಎಂಜಿನಿಯರ್‌ಗಳು ತಿಳಿಸಿದರು.

ನಾಲ್ಕು ಪ್ರಕರಣ: 10.75 ಕಿ.ಮೀ ಪ್ರಮುಖ ರಸ್ತೆಯಲ್ಲಿ ಸುಮಾರು 1 ಕಿ.ಮೀ ರಸ್ತೆಯ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆ ನ್ಯಾಯಾಲಯದಲ್ಲಿದೆ. 9.75  ಕಿ.ಮೀ ರಸ್ತೆಯ ಪೈಕಿ ಸುಮಾರು 3 ಕಿ.ಮೀ ರಸ್ತೆ ಮುಗಿದಿದೆ. ಉಳಿದ ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಇನ್ನೊಂದು ವರ್ಷದಲ್ಲಿ ಸಂಪೂರ್ಣಗೊಳಿಸಲಾಗುತ್ತದೆ ಎಂದು ಬಿಡಿಎ ಎಂಜಿನಿಯರ್‌ಗಳು ಹೇಳಿದರು.

ಎಂಎಆರ್‌ ನಿರ್ಮಾಣವಾಗುವುದರಿಂದ ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಗೆ ಸಂಪರ್ಕ ಸಿಗುವ ಜತೆಗೆ, ಸೂಲಿಕೆರೆ– ರಾಮಸಂದ್ರ, ಕೆಂಚಾಪುರ, ಕನ್ನಹಳ್ಳಿ ಗ್ರಾಮಗಳಿಗೂ ಸಂಪರ್ಕ ಕಲ್ಪಿಸಲಿದೆ. ಇದಲ್ಲದೆ, ನಾಡಪ್ರಭು ಕೆಂಪೇಗೌಡ ಬಡಾವಣೆಯ 56 ರಸ್ತೆಗಳಿಗೆ ಸಂಪರ್ಕ ಒದಗಿಸಲಿದೆ.

ಎಲ್ಲೆಲ್ಲಿ ಕಿರು ಸೇತುವೆ?: ಕೊಮ್ಮಘಟ್ಟ, ಭೀಮನಕುಪ್ಪೆ, ಕನ್ನಳ್ಳಿ, ರಾಮಸಂದ್ರ, ಕೆಂಚನಪುರ, ಸೂಲಿಕೆರೆ, ಕೊಡಿಗೆಹಳ್ಳಿ, ಚಲ್ಲಘಟ್ಟ.

10.75 ಕಿ.ಮೀ ಎಂಎಆರ್‌ ಉದ್ದ ₹ 450 ಕೋಟಿ ಯೋಜನೆ ಅಂದಾಜು ವೆಚ್ಚ 100 ಮೀಟರ್‌ ಅಗಲದ ರಸ್ತೆ 9 ಬ್ಲಾಕ್‌ ಸಂಪರ್ಕಿಸುವ ಪ್ರವೇಶ ರಸ್ತೆ 35 ಸಣ್ಣ ಸೇತುವೆಗಳು ₹26.91 ಕೋಟಿ ಒಟ್ಟು ವೆಚ್ಚ 3 ಅಂಡರ್‌ಪಾಸ್‌ಗಳು ₹39.31 ಕೋಟಿ  ನಿರ್ಮಾಣ ವೆಚ್ಚ 1 ರೈಲು ಕೆಳಸೇತುವೆ ₹38.42 ಕೋಟಿ  ನಿರ್ಮಾಣ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT