‘ಮುನ್ನಿರೆಡ್ಡಿ ಲೇಔಟ್: ರಸ್ತೆ ಸರಿಪಡಿಸಿ’
ಬಿಬಿಎಂಪಿ ವ್ಯಾಪ್ತಿಯ ಗುಬ್ಬಲಾಳ ಮುಖ್ಯರಸ್ತೆಯ ಒಂದನೇ ಕ್ರಾಸ್‌ನ ವಾರ್ಡ್ ಸಂಖ್ಯೆ 184ರ ಮುನ್ನಿರೆಡ್ಡಿ ಲೇಔಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಜಲ್ಲಿಕಲ್ಲು ಹಾಕಿ ಹಾಗೆಯೇ ಬೀಡಲಾಗಿದೆ. ಒಂದು ತಿಂಗಳಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದು, ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ರಸ್ತೆಯಲ್ಲಿ ಓಡಾಡುವುದಕ್ಕೂ ಕಷ್ಟಪಡುವ ಪರಿಸ್ಥಿತಿ ಇದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪ್ರತಿನಿತ್ಯ ಪರದಾಡುತ್ತಿದ್ದಾರೆ. ಮಳೆ ಬಂದರೆ ರಸ್ತೆಯು ಕೆಸರು ಗದ್ದೆಯಂತಾಗುತ್ತದೆ. ಮಳೆಯಾಗದ ಸಂದರ್ಭದಲ್ಲಿ ದೂಳಿನ ಮಜ್ಜನವಾಗುತ್ತಿದೆ. ಇದರಿಂದ, ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ.
ರಾಮದಾಸ್ ಶಾನ್‌ಬಾಗ್, ಮುನ್ನಿರೆಡ್ಡಿ ಲೇಔಟ್
‘ಪಾದಚಾರಿ ಮಾರ್ಗದ ಅತಿಕ್ರಮಣ ತೆರವುಗೊಳಿಸಿ’
ಮೂಡಲಪಾಳ್ಯ ಟೆಂಟ್ ರಸ್ತೆಯ ವ್ಯಾಪಾರಿಗಳು ತಮ್ಮ ಅಂಗಡಿ ಎದುರಿನ ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದರಿಂದ, ಪಾದಚಾರಿಗಳ ಓಡಾಟಕ್ಕೆ ಸಮಸ್ಯೆ ಆಗಿದೆ. ಇಲ್ಲಿನ ಬಹುತೇಕ ಅಂಗಡಿಗಳ ಮಾಲೀಕರು ಅಂಗಡಿ ಮುಂಭಾಗದಲ್ಲಿನ ಜಾಗವನ್ನು ಅತಿಕ್ರಮಣ ಮಾಡಿಕೊಂಡು ವ್ಯಾಪಾರ–ವಹಿವಾಟು ಮಾಡುತ್ತಿದ್ದಾರೆ. ಪಾದಚಾರಿಗಳು ಮುಖ್ಯ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಇದರಿಂದ, ಸಂಚಾರ ದಟ್ಟಣೆ ಆಗುತ್ತಿದ್ದು, ಅಪಘಾತಗಳೂ ಸಂಭವಿಸುತ್ತಿವೆ. ಅತಿಕ್ರಮಣ ಮಾಡಿಕೊಂಡಿರುವ ಪಾದಚಾರಿ ಮಾರ್ಗವನ್ನು ಬಿಬಿಎಂಪಿ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು ತೆರವುಗೊಳಿಸಬೇಕು.
ಎಂ.ಎಂ. ಮಲ್ಲೇಶ, ಮೂಡಲಪಾಳ್ಯ
‘ಮುಖ್ಯರಸ್ತೆಯಲ್ಲಿ ಹಾಕಿರುವ ಕಸ ತೆರವುಗೊಳಿಸಿ’
ಜೆ.ಪಿ. ನಗರದ 2ನೇ ಹಂತದಲ್ಲಿರುವ 16ನೇ ಮುಖ್ಯರಸ್ತೆಯ ರಾಗಿಗುಡ್ಡದ ದೇವಸ್ಥಾನದ ಹತ್ತಿರದ ಮುಖ್ಯ ರಸ್ತೆಯಲ್ಲಿ ಕಸ ಸುರಿಯಲಾಗುತ್ತಿದೆ. ಸ್ಥಳೀಯರು ಮನೆಯಲ್ಲಿ ಉತ್ಪತ್ತಿ ಆಗುವ ಕಸವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿಕೊಂಡು ಬಂದು ಇಲ್ಲಿ ಎಸೆದು ಹೋಗುತ್ತಿದ್ದಾರೆ. ಈ ರಸ್ತೆಯಲ್ಲ ಗಬ್ಬೆದ್ದು ನಾರುತ್ತಿದ್ದು, ಸೊಳ್ಳೆಗಳ ಉಗಮ ಸ್ಥಾನವಾಗಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಬಿಬಿಎಂಪಿ ಸಿಬ್ಬಂದಿ ಕೂಡಲೇ ಇಲ್ಲಿನ ಕಸವನ್ನು ತೆರವುಗೊಳಿಸಬೇಕು.
ಎಸ್.ವಿ. ಶರತ್ ಬಾಬು, ಜೆ.ಪಿ. ನಗರ
‘ಗ್ರಂಥಾಲಯಕ್ಕೆ ಬೀಗ, ಓದುಗರಿಗೆ ತೊಂದರೆ’
ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿರುವ ವಾರ್ಡ್ ಸಂಖ್ಯೆ 139ರ ಭಕ್ಷಿ ಗಾರ್ಡನ್‌ನಲ್ಲಿರುವ ಸಾರ್ವಜನಿಕ ಗ್ರಂಥಾಲಯವನ್ನು ದುರಸ್ತಿಗೊಳಿಸುವ ನೆಪದಲ್ಲಿ ಬೀಗ ಹಾಕಲಾಗಿದೆ. ಇದರಿಂದ, ಸ್ಥಳೀಯ ಓದುಗರಿಗೆ ತೊಂದರೆ ಆಗುತ್ತಿದೆ. ಒಂದು ತಿಂಗಳ ಹಿಂದೆಯೇ ಗ್ರಂಥಾಲಯ ದುರಸ್ತಿಗೊಳಿಸುವ ಕಾರಣ ನೀಡಿ ಬೀಗ ಹಾಕಲಾಗಿದೆ. ಆದರೆ, ಇದುವರೆಗೂ ದುರಸ್ತಿ ಕಾರ್ಯ ಪ್ರಾರಂಭವಾಗಿಲ್ಲ. ಇದರಿಂದ, ಪುಸ್ತಕಪ್ರಿಯರಿಗೆ ಸಮಸ್ಯೆ ಆಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
ಎಸ್. ಪ್ರಭಾಕರ್, ಚಾಮರಾಜಪೇಟೆ
‘ರಸ್ತೆಯಲ್ಲಿರುವ ಗುಂಡಿ ಮುಚ್ಚಿ’
ಹೆಬ್ಬಾಳದ ಕೆಂಪಾಪುರ ಬಡಾವಣೆಗೆ ಹೊಂದಿಕೊಂಡಿರುವ ಸಿಂಧಿ ಕಾಲೇಜು ಮುಖ್ಯ ರಸ್ತೆಯ ತಿರುವಿನಲ್ಲಿ ಬೃಹತ್ ಗುಂಡಿ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಮುಖ್ಯ ರಸ್ತೆಯ ತಿರುವಿನಲ್ಲಿರುವ ಗುಂಡಿಯಲ್ಲಿ ಪ್ರತಿನಿತ್ಯ ದ್ವಿಚಕ್ರ ವಾಹನ ಸವಾರರು ಬಿದ್ದು, ಅಪಘಾತಗಳು ಸಂಭವಿಸುತ್ತಿವೆ. ಮಳೆಯಾದರೆ, ಈ ಗುಂಡಿಯಲ್ಲಿ ನೀರು ನಿಂತುಕೊಂಡು ರಸ್ತೆ ಯಾವುದು? ಗುಂಡಿ ಯಾವುದು? ಎಂಬುದು ಗೊತ್ತಾಗುವುದಿಲ್ಲ. ಬಿಬಿಎಂಪಿ ಕೂಡಲೇ ಇಲ್ಲಿನ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
ಶಿವಪ್ರಸಾದ್, ಹೆಬ್ಬಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.