ಮಗೆ ಕೆರೆ ಮಲಿನ: ಅಧಿಕಾರಿಗಳಿಗೆ ತರಾಟೆ

7

ಮಗೆ ಕೆರೆ ಮಲಿನ: ಅಧಿಕಾರಿಗಳಿಗೆ ತರಾಟೆ

Published:
Updated:

ಬೆಂಗಳೂರು: ‘ಏನ್ರೀ, ಇದು ಕೆರೆಯೋ ಅಥವಾ ಕೊಳಚೆ ನೀರಿನ ‌ಹೊಂಡವೋ? ಇದೇನಾ ನೀವು ಮಾಡುತ್ತಿರುವ ಅಭಿವೃದ್ಧಿ. ಈ ದುರ್ವಾಸನೆ ಸಹಿಸಿಕೊಂಡು ಸುತ್ತಮುತ್ತಲ ಜನ ಹೇಗೆ ಬದುಕಬೇಕು...?’ ಮಂಗಳವಾರ ಬೆಳಿಗ್ಗೆ ಉತ್ತರಹಳ್ಳಿಯ ಮಗೆ ಕೆರೆ ಪರಿಶೀಲನೆ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.

‘ಅಕ್ಕಪಕ್ಕದ ಬಡಾವಣೆಗಳ ಕೊಳಚೆ ನೀರು ಕೆರೆ ಸೇರುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬಿಬಿಎಂಪಿ ಒಂದೊಂದು ವಿಭಾಗಕ್ಕೂ ಒಬ್ಬ ಪ್ರಧಾನ ಎಂಜಿನಿಯರ್‌ ಅನ್ನು ನೇಮಕ ಮಾಡಿದ್ದರೂ, ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಯೋಜನೆಗಳಿಗೆ ಕೆಟ್ಟ ಹೆಸರು ಬರುತ್ತಿದೆ. ದುರ್ವಾಸನೆ ಹೆಚ್ಚಾದ ಕಾರಣಕ್ಕೆ ಕೆರೆ ಅಂಗಳದಲ್ಲಿ ವಾಯುವಿಹಾರ ಮಾಡುತ್ತಿದ್ದವರ ಸಂಖ್ಯೆಯೂ ಕಡಿಮೆ ಆಗಿದೆ. ನೀವು ಮಾಡುವ ತಪ್ಪುಗಳಿಗೆ, ಜನ ನಮ್ಮನ್ನು ಪ್ರಶ್ನೆ ಮಾಡುತ್ತಾರೆ. ಅವರಿಗೆ ಏನೆಂದು ಉತ್ತರ ಕೊಡೋಣ’ ಎಂದು ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ಅಪಾರ್ಟ್‍ಮೆಂಟ್‍ ಸಮುಚ್ಚಯ ನಿರ್ಮಿಸುವವರಿಗೆ, ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಬೇಕು ಎಂದು ನಿರ್ದೇಶಿಸುವಷ್ಟೂ ಪುರುಸೊತ್ತು ನಿಮಗಿಲ್ಲವೇ? ಇಲ್ಲವೇ ಅದಕ್ಕೆ ಬೇರೇನಾದರೂ ಕಾರಣಗಳಿದ್ದರೆ ತಕ್ಷಣ ತಿಳಿಸಿ. ನಿಮ್ಮಂಥವರಿಂದಲೇ ಕೆರೆಗಳೆಲ್ಲ ವಿನಾಶದ ಹಾದಿ ಹಿಡಿಯುತ್ತಿವೆ’ ಎಂದು ಎಂಜಿನಿಯರ್‌ಗಳ ವಿರುದ್ಧ ಗುಡುಗಿದರು.  ಬಿಬಿಎಂಪಿ ಸದಸ್ಯ ಹನುಮಂತಯ್ಯ ಇದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !