ಬೆಂಗಳೂರು ಸ್ಮಾರ್ಟ್ ಸಿಟಿ: ಅಂತಿಮ ಹಂತದಲ್ಲಿ ವೇಗ

ಬೆಂಗಳೂರು: ‘ಬೆಂಗಳೂರು ಸ್ಮಾರ್ಟ್ ಸಿಟಿ’ ಯೋಜನೆಗಳೆಲ್ಲವೂ ಏಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳುತ್ತವೆ
ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಆದರೂ ಕೇಂದ್ರದ ಗಡುವಿನವರೆಗೂ ಒಂದೆರಡು ಕಾಮಗಾರಿಗಳು ನಡೆಯಲಿವೆ. ಕಾರು ಪಾರ್ಕಿಂಗ್ ಯೋಜನೆ ಗಡುವು ಮುಗಿದರೂ ಆರಂಭವಾಗುವುದು ಅನುಮಾನ.
‘ಸ್ಮಾರ್ಟ್ ಸಿಟಿ’ ಯೋಜನೆಗಳ ಅನುಷ್ಠಾನ ಪೂರ್ಣಗೊಳಿಸಲು ಕೇಂದ್ರ ನೀಡಿರುವ ಗಡುವು ಜೂನ್ 23ಕ್ಕೆ ಕೊನೆಗೊಳ್ಳಲಿದೆ. ಒಟ್ಟಾರೆ 44 ಯೋಜನೆಗಳನ್ನು ಕೈಗೊಂಡಿರುವ ‘ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್’, ಅದರಲ್ಲಿ 30 ಕಾಮಗಾರಿಗಳನ್ನು ಈವರೆಗೆ ಪೂರ್ಣಗೊಳಿಸಿದೆ. ಉಳಿದ 14 ಯೋಜನೆಗಳಲ್ಲಿ 13 ಯೋಜನೆಗಳ ಕಾಮಗಾರಿ ಸರಾಸರಿ ಶೇ 80ರಷ್ಟು ಪೂರ್ಣಗೊಂಡಿದೆ. ಒಂದು ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ.
ಸ್ಮಾರ್ಟ್‌ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿವಾರವೂ ಕಾಮಗಾರಿಗಳ ಪರಿಶೀಲನೆ ನಡೆಯುತ್ತಿದೆ. ಕಾಮಗಾರಿಯ ವೇಗ ವೃದ್ಧಿಸಲು ಸೂಚನೆ ರವಾನೆಯಾಗುತ್ತಿದೆ. ಗುತ್ತಿಗೆದಾರರೆಲ್ಲರಿಗೂ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಮುಗಿಸಲು ಗಡುವು ನೀಡಲಾಗಿದೆ.
ಕೆ.ಆರ್. ಮಾರ್ಕೆಟ್ ವಾಣಿಜ್ಯ ಕೇಂದ್ರಕ್ಕೆ ಅಂಡರ್‌ಪಾಸ್ ಹಾಗೂ ಗಾಜು ಅಳವಡಿಸುವ ಕಾರ್ಯ ಸೇರಿದಂತೆ ಅಭಿವೃದ್ಧಿ ಕೆಲಸಗಳು ಬಹುತೇಕ ಮುಗಿದಿವೆ. ಮಾಂಸದ ಮಾರುಕಟ್ಟೆ ಪುನರ್ ನಿರ್ಮಾಣ ಯೋಜನೆಯನ್ನು ಕೈಬಿಡಲಾಗಿದೆ. ಇರುವ ಮಾರುಕಟ್ಟೆಯನ್ನೇ ಅಭಿವೃದ್ಧಿಪಡಿಸುವ ಕಾಮಗಾರಿಗೆ ಇದೀಗ ಹೆಚ್ಚಿನ ವೇಗ ನೀಡಲಾಗಿದೆ.
ಕಬ್ಬನ್ ಪಾರ್ಕ್‌ನಲ್ಲಿ ಹೊಸ ವಿನ್ಯಾಸಗಳ ಅಭಿವೃದ್ಧಿ ಕೆಲಸ ಶೇ 90ರಷ್ಟು ಮುಗಿದಿದೆ. ಆದರೆ, ಜವಾಹರಲಾಲ್ ನೆಹರೂ ತಾರಾಲಯ ದಲ್ಲಿನ ಸಭಾಂಗಣ, ಆಡಿಟೋರಿಯಂ ಕೆಲಸ ಶೇ 25ರಷ್ಟು ಬಾಕಿ ಉಳಿದಿದೆ. ಒಂದು ಬ್ಲಾಕ್ ಕಾಮಗಾರಿ ಪೂರ್ಣಗೊಂಡಿದ್ದು, ಮತ್ತೊಂದರ ಕಾಮಗಾರಿ ಇದೀಗ ವೇಗ ಪಡೆದುಕೊಂಡಿದೆ.
ಟೆಂಡರ್ ಶ್ಯೂರ್‌ನಲ್ಲಿ 32 ರಸ್ತೆಗಳ ಅಭಿವೃದ್ಧಿಯಲ್ಲಿಪ್ಯಾಕೇಜ್ ‘ಬಿ’ಯಲ್ಲಿರುವ ಎರಡು ರಸ್ತೆಗಳು ಇನ್ನೂ ಪೂರ್ಣಗೊಂಡಿಲ್ಲ. ಕ್ವೀನ್ಸ್ ರಸ್ತೆಯಿಂದ ರಸೆಲ್ ಮಾರುಕಟ್ಟೆವರೆಗಿನ ರಸ್ತೆ ಹಾಗೂ ಅವೆನ್ಯೂ ರಸ್ತೆ ಕಾಮಗಾರಿ ಮುಗಿದಿಲ್ಲ. ಬಿಡಬ್ಲ್ಯುಎಸ್‌ಎಸ್‌ಬಿ ಮಾರ್ಗವನ್ನು ಬದಲಿಸಬೇಕಿರುವುದರಿಂದ ಅವೆನ್ಯೂ ರಸ್ತೆ ಕಾಮಗಾರಿ ವಿಳಂಬವಾಗಿದ್ದು, ಈಗ ಆ ಕಾಮಗಾರಿಯನ್ನು ಮುಗಿಸಲು ಒಳಚರಂಡಿ ಮಂಡಳಿಗೇ ನೀಡಲಾಗಿದೆ. ಅವರು ಏಪ್ರಿಲ್‌ನೊಳಗೆ ಮುಗಿಸಲಿದ್ದಾರೆ ಎಂದು ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್ ದೊಡ್ಡಯ್ಯ ಹೇಳಿದರು.
₹932.10 ಕೋಟಿ
ಯೋಜನೆ ಒಟ್ಟಾರೆ ವೆಚ್ಚ
₹673 ಕೋಟಿ
ಹಣ ಬಿಡುಗಡೆ
ಒಂದೇ ನಂಬರ್, ಒಂದೇ ಪೋರ್ಟಲ್...
ನಾಗರಿಕರ ಎಲ್ಲ ಸಮಸ್ಯೆಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರ ಕಲ್ಪಿಸುವ ಐಸಿಸಿಸಿ ವ್ಯವಸ್ಥೆಯ ಪ್ರಕ್ರಿಯೆ ಶೇ 80ರಷ್ಟು ಮುಗಿದಿದೆ. ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಬಿಡಬ್ಲ್ಯೂಎಸ್‌ಎಸ್‌ಬಿ, ಪೊಲೀಸ್ ಸೇರಿದಂತೆ ಎಲ್ಲ ದೂರುಗಳನ್ನು ಒಂದೇ ಸಂಖ್ಯೆ ಅಥವಾ ಪೋರ್ಟಲ್‌ನಲ್ಲಿ ನಾಗರಿಕರು ಈ ಮೂಲಕ ದಾಖಲಿಸಬಹುದು. ಅದನ್ನು ಪರಿಹರಿಸುವ ಕೆಲಸ ಮಾಡುವ ಈ ಐಸಿಸಿಸಿ, ನಾಗರಿಕರಿಗೆ ಅದರ ನೈಜ ಮಾಹಿತಿಯನ್ನು ನೀಡುತ್ತದೆ. ಇದಕ್ಕಾಗಿ ಎಲ್ಲ ಇಲಾಖೆಗಳೊಂದಿಗೆ ಸಂಪರ್ಕ ಸಾಧಿಸಿದ್ದು, ಬಿಬಿಎಂಪಿಯಲ್ಲಿ ಈ ಕೇಂದ್ರ ಅನುಷ್ಠಾನವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
ಪ್ರಗತಿಯಲ್ಲಿರುವ ಕಾಮಗಾರಿಗಳು
ಕಾಮಗಾರಿ;ವೆಚ್ಚ (₹ಕೋಟಿಗಳಲ್ಲಿ);ಭೌತಿಕ ಪ್ರಗತಿ;ಆರ್ಥಿಕ ಪ್ರಗತಿ (₹ಕೋಟಿಗಳಲ್ಲಿ)
ಟೆಂಡರ್ ಶ್ಶೂರ್ ರಸ್ತೆ: ಎಚ್‌ಕೆಪಿ ರಸ್ತೆ– ಕ್ವೀನ್ಸ್ ರಸ್ತೆಯಿಂದ ರಸೆಲ್ ಮಾರುಕಟ್ಟೆ;41.40;90;31.07
ಟೆಂಡರ್ ಶ್ಶೂರ್‌ನಡಿ ರಸೆಲ್ ಪ್ಲಾಜಾದಲ್ಲಿ ಹೆಚ್ಚುವರಿ ಕಾಮಗಾರಿ;50.20;95;42.69
ಅವೆನ್ಯೂ ರಸ್ತೆ– ಮೈಸೂರು ಬ್ಯಾಂಕ್ ವೃತ್ತದಿಂದ ಎಸ್‌ಜೆಪಿ ರಸ್ತೆ;34.21;88;25.57
ಕಬ್ಬನ್ ಪಾರ್ಕ್ ಮರು ಅಭಿವೃದ್ಧಿ ಫೇಸ್–ಬಿ;21.42;90;7.55
ಜವಾಹರಲಾಲ್ ನೆಹರೂ ತಾರಾಲಯ ಸಭಾಂಗಣ;42;70;18.95
ಪ್ರಾಜೆಕ್ಟ್ ರಶ್ಮಿ– ಉದ್ಯೋಗಸ್ಥ ಮಹಿಳೆಯರ ತಾಣ;2;90;0.93;ಹೈಕೋರ್ಟ್ ಕಚೇರಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ
ಕೆ.ಆರ್. ಮಾರುಕಟ್ಟೆ ಮಾಂಸ ಮಾರುಕಟ್ಟೆ;6.70;25;2.08
ಕೆ.ಆರ್. ಮಾರುಕಟ್ಟೆ ವಾಣಿಜ್ಯ ಸೆಂಟರ್ ಮರುಅಭಿವೃದ್ಧಿ;40.05;75;21.80
ಐಸಿಸಿಸಿ (ಇಂಟಿಗ್ರೇಟೆಡ್ ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್);111.43;80;31.52
ಪಾದರಾಯನಪುರ ಶಾಲೆ ಉನ್ನತೀಕರಣ;2.34;85;0.53
ಪುಲಕೇಶಿನಗರ ಶಾಲೆ ಉನ್ನತೀಕರಣ;4.22;75;0.64
ಗಾಂಧಿಬಜಾರ್‌ನಲ್ಲಿ ಬಹು ಅಂತಸ್ತಿನ ಕಾರು ಪಾರ್ಕಿಂಗ್;22.13;0;0
ಸ್ಮಾರ್ಟ್ ವರ್ಚ್ಯುಯಲ್ ಕ್ಲಿನಿಕ್;21.65;90;2.27
ಇಂದಿರಾಗಾಂಧಿ ಇನ್‌ಸ್ಟಿಟ್ಯೂಟ್ ಮತ್ತು ಬಿಎಂಸಿಆರ್‌ಐಗೆ ವೈದ್ಯ ಉಪಕರಣ;8;90;5.26
ಒಟ್ಟು;409.75;;190.86
ಬಿಬಿಎಂಪಿ ಭೂಮಿ ಹಸ್ತಾಂತರಿಸಿಲ್ಲ!
‘ಗಾಂಧಿಬಜಾರ್‌ನಲ್ಲಿ ಬಹು ಅಂತಸ್ತಿನ ಕಾರು ಪಾರ್ಕಿಂಗ್ ನಿರ್ಮಾಣ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಬಿಬಿಎಂಪಿ ಭೂಮಿಯನ್ನು ಹಸ್ತಾಂತರಿಸಿಲ್ಲ. ಅಲ್ಲಿ ತಾತ್ಕಾಲಿಕ ಕಾರ್ಯ ಆರಂಭವಾಗಿದೆ. ಅಲ್ಲಿರುವ ವ್ಯಾಪಾರಿಗಳನ್ನು ಸ್ಥಳಾಂತರ ಮಾಡಿ ನಮಗೆ ಸ್ಥಳ ಹಸ್ತಾಂತರಿಸಿದರೆ ಕಾಮಗಾರಿ ಆರಂಭಿಸಲಾಗುತ್ತದೆ. ಇದಕ್ಕಾಗಿ ಟೆಂಡರ್ ಪೂರ್ಣಗೊಂಡಿದ್ದು, 11 ತಿಂಗಳಲ್ಲಿ ಕಾಮಗಾರಿ ಮುಗಿಸುವ ಉದ್ದೇಶವಿದೆ. ನಮ್ಮ ಗಡುವಿನೊಳಗೆ ಬಿಬಿಎಂಪಿ ಭೂಮಿ ಹಸ್ತಾಂತರಿಸದಿದ್ದರೆ ಯೋಜನೆಯನ್ನು ಅವರಿಗೇ ವಹಿಸಲಾಗುತ್ತದೆ’ ಎಂದು ಬೆಂಗಳೂರು
ಸ್ಮಾರ್ಟ್ ಸಿಟಿ ಯೋಜನೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.