ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಗಳಿಗೆಯಲ್ಲಿ ಮಣ್ಣು ಪರೀಕ್ಷೆ– ‘ಕೃಷಿತಂತ್ರ’ದ ಹೊಸ ಯಂತ್ರ

Last Updated 20 ನವೆಂಬರ್ 2019, 2:17 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಮಣ್ಣು ಪರೀಕ್ಷೆ ಪ್ರಯೋಗಾಲಯಗಳು ಸಾಕಷ್ಟು ಸಂಖ್ಯೆಯಲ್ಲಿಲ್ಲದ ಕಾರಣ ಕೃಷಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕೊರತೆ ನೀಗಿಸಲು ‘ಕೃಷಿತಂತ್ರ’ ನವೋದ್ಯಮವು ಹೊಸ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದು, ಇದು ಮಣ್ಣಿನ ಮಾದರಿಯನ್ನು ನೀಡಿದ ಅರೆಗಳಿಗೆಯಲ್ಲಿ ಫಲಿತಾಂಶವನ್ನು ಕೈಗೊಪ್ಪಿಸಲಿದೆ.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಗೋಷ್ಠಿಯೊಂದರಲ್ಲಿ ಮಂಗಳವಾರ ಭಾಗವಹಿಸಿದ ‘ಕೃಷಿತಂತ್ರ’ ನವೋದ್ಯಮದ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್‌ ಕೊಂಡಜ್ಜಿ ‘ಪ್ರಜಾವಾಣಿ’ ಜೊತೆ ಮಾತನಾಡಿದರು. ತಾವು ಅಭಿವೃದ್ಧಿಪಡಿಸಿರುವ ಮಣ್ಣು ಪರೀಕ್ಷೆ ಯಂತ್ರ ಹೇಗೆ ರೈತರಿಗೆ ಸಹಕಾರಿಯಾಗಬಲ್ಲುದು ಎಂಬುದನ್ನು ವಿವರಿಸಿದರು.

‘ದೇಶದಲ್ಲಿ ಮಣ್ಣು ಪರೀಕ್ಷೆಗೆ 3,887 ಸರ್ಕಾರಿ ಪ್ರಯೋಗಾಲಯಗಳಿವೆ. ತಲಾ 1.5 ಲಕ್ಷ ರೈತರಿಗೆ ಒಂದು ಪ್ರಯೋಗಾಲಯವೂ ನಮ್ಮಲ್ಲಿಲ್ಲ. ಮಣ್ಣಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸುವ ರೈತರು ಫಲಿತಾಂಶ ಕೈಸೇರಲು ತಿಂಗಳುಗಟ್ಟಲೆ ಕಾಯಬೇಕಾಗಿದೆ. ಆದರೆ, ನಾವು ಅಭಿವೃದ್ಧಿಪಡಿಸಿರುವ ಸ್ವಯಂಚಾಲಿತ ಯಂತ್ರವು ಮಣ್ಣಿನ ಮಾದರಿಗಳನ್ನು (ತೇವಾಂಶ ಇರಬಾರದು) ಹಾಕಿದ 10 ನಿಮಿಷದಲ್ಲಿ ವರದಿ ಸಿದ್ಧಪಡಿಸುತ್ತದೆ. ಕೃತಕ ಬುದ್ಧಿಮತ್ತೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಈ ಯಂತ್ರವು ಮಣ್ಣಿನಲ್ಲಿ ಎನ್‌ಪಿಕೆ (ಸಾರಜನಕ, ರಂಜಕ, ಪೊಟಾಷಿಯಂ) ಪ್ರಮಾಣ, ವಿದ್ಯುತ್‌ ವಾಹಕತೆ (ಇಸಿ), ಪಿಎಚ್‌ ಮೌಲ್ಯ, ಸಾವಯವ ಕಾರ್ಬನ್‌, ಗಂಧಕ, ತಾಮ್ರ, ಮೆಗ್ನೇಷಿಯಂ, ಮ್ಯಾಂಗನೀಸ್‌, ಬೋರಾನ್‌, ಸತು ಮುಂತಾದ ಧಾತುಗಳ ಪ್ರಮಾಣವನ್ನು ನಿಖರವಾಗಿ ತಿಳಿಸುತ್ತದೆ’ ಎಂದರು.

’ಈ ಯಂತ್ರಕ್ಕೆ ರಾಸಾಯನಿಕಗಳ ಕಾರ್ಟ್ರಿಜ್‌ ಜೋಡಿಸಬೇಕು. ಯಂತ್ರಕ್ಕೆ ₹ 50 ಸಾವಿರ ಹಾಗೂ ಪ್ರತಿ ಕಾರ್ಟ್ರಿಜ್‌ಗೆ ₹ 20 ಸಾವಿರ ದರ ಇದೆ. ಒಂದು ಕಾರ್ಟ್ರಿಜ್‌ನಿಂದ 100 ಪರೀಕ್ಷೆಗಳನ್ನು ನಡೆಸಬಹುದು. ಪ್ರತಿ ಪರೀಕ್ಷೆಗೆ ಕೇವಲ ₹ 200ರಿಂದ ₹ 250 ವೆಚ್ಚವಾಗಲಿದೆ’ ಎಂದು ಸಂದೀಪ್‌ ತಿಳಿಸಿದರು.

‘ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರೂ ಈ ಯಂತ್ರವನ್ನು ನಿರ್ವಹಣೆ ಮಾಡಬಹುದು. 3 ಅಡಿ ಎತ್ತರ, 2.5 ಅಡಿ ಉದ್ದದ ಈ ಯಂತ್ರವನ್ನು ಜೋಡಿಸಲು ಹೆಚ್ಚು ಸ್ಥಳಾವಕಾಶವೂ ಬೇಕಿಲ್ಲ. ಅದಕ್ಕೆ ಬೇಕಾದ ತಂತ್ರಾಂಶವನ್ನು ನಾವೇ ರೂಪಿಸಿದ್ದೇವೆ. ಯಾವುದಾದರೂ ಕೃಷಿ ಒಕ್ಕೂಟಗಳು ಸೇರಿ 500ಕ್ಕಿಂತ ಹೆಚ್ಚು ಮಣ್ಣು ಪರೀಕ್ಷೆ ನಡೆಸುವುದಾದರೆ ಯಂತ್ರವನ್ನು ಉಚಿತವಾಗಿ ನೀಡುತ್ತೇವೆ. ಆದರೆ, ಅವರು ಕಾರ್ಟ್ರಿಜ್‌ ಖರೀದಿಸಬೇಕಾಗುತ್ತದೆ’ ಎಂದರು.

‘ಪ್ರಸ್ತುತ ಕರ್ನಾಟಕದ ಜೊತೆ, ರಾಜಸ್ತಾನ, ಮಹಾರಾಷ್ಟ್ರ, ತಮಿಳುನಾಡು, ಹರಿಯಾಣ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶಗಳಲ್ಲಿ ನಮ್ಮ ಸಂಸ್ಥೆ ಸೇವೆ ಒದಗಿಸುತ್ತಿದೆ. ಬಿಪಿಸಿಎಲ್‌ ಸಂಸ್ಥೆಯ ‘ಉಮಂಗ್‌ ಕೇಂದ್ರ’ಗಳ ಮೂಲಕ 36 ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ದೇಶಪಾಂಡೆ ಪ್ರತಿಷ್ಠಾನದ ಜೊತೆ ಒಪ್ಪಂದ ಮಾಡಿಕೊಂಡು ಗ್ರಾಮೀಣ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೇವೆ. ಆಸ್ಟ್ರೇಲಿಯಾ ಸರ್ಕಾರವು ನಮ್ಮ ಸಂಸ್ಥೆಯನ್ನು ಅಗ್ರ ಆರು ನವೋದ್ಯಮಗಳಲ್ಲಿ ಒಂದು ಎಂದು ಗುರುತಿಸಿ, ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದೆ’ ಎಂದರು.

ಫಲಿತಾಂಶದ ಜೊತೆ ಕೃಷಿ ಸಲಹೆ
‘ಮಣ್ಣಿನಲ್ಲಿ ಯಾವ ಪೋಷಕಾಂಶಗಳ ಕೊರತೆ ಇದೆ, ಅದನ್ನು ನೀಗಿಸಲು ಪ್ರತಿ ಎಕರೆಗೆ ಯಾವ ಗೊಬ್ಬರವನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು, ಎಷ್ಟು ನೀರುಣಿಸಬೇಕು ಎಂಬ ಬಗ್ಗೆಯೂ ನಾವು ರೈತರಿಗೆ ಉಚಿತ ಸಲಹೆ ನೀಡುತ್ತೇವೆ. ಮಣ್ಣಿನ ಮಾದರಿ ಆಧರಿಸಿ ಆ ಪ್ರದೇಶಕ್ಕೆ ಯಾವ ಬೆಳೆ ಬೆಳೆದರೆ ಹೆಚ್ಚು ಲಾಭ ಪಡೆಯಬಹುದು ಸೂಕ್ತ ಎಂದು ಶಿಫಾರಸು ಮಾಡುತ್ತೇವೆ’ ಎಂದು ಸಂದೀಪ್‌ ತಿಳಿಸಿದರು.

‘ಮಣ್ಣಿನ ಆರೋಗ್ಯದ ಬಗ್ಗೆ ಅರಿವಿಲ್ಲದೆಯೇ ಬೆಳೆ ಬೆಳೆಯುತ್ತಿರುವ ರೈತರು ನಷ್ಟ ಎದುರಿಸುತ್ತಿದ್ದಾರೆ. ಮಣ್ಣಿಗೆ ಅನುಗುಣವಾದ ಬೆಳೆಯನ್ನು ಆಯ್ಕೆ ಮಾಡಿದರೆ ನಷ್ಟವನ್ನು ತಪ್ಪಿಸಬಹುದು’ ಎಂದರು.

*
ಸಾವಿರ ರೈತರಿಗೆ ಒಂದು ಮಣ್ಣು ಪರೀಕ್ಷೆ ಕೇಂದ್ರವಾದರೂ ಇರಬೇಕು ಎಂಬ ಉದ್ದೇಶದಿಂದ ಈ ಯಂತ್ರವನ್ನು ರೂಪಿಸಿದ್ದೇವೆ. ನಿಖರ ಹಾಗೂ ಗುಣಮಟ್ಟದ ಫಲಿತಾಂಶವನ್ನು ಈ ಯಂತ್ರದ ಮೂಲಕ ಪಡೆಯಬಹುದು.
–ಸಂದೀಪ್‌ ಕೊಂಡಜ್ಜಿ, ‘ಕೃಷಿತಂತ್ರ’ ನವೋದ್ಯಮದ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT