ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟೆಗೆ 15.5 ಕಿ.ಮೀ ಸಂಚಾರ! ಹೊಸ ವಾಹನ ನೋಂದಣಿ ರದ್ದು?

ದೇಶದ ಮೂರನೇ ಮಂದಗತಿ ಸಂಚಾರ ನಗರ ಬೆಂಗಳೂರು
Last Updated 2 ನವೆಂಬರ್ 2018, 20:08 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ದಟ್ಟಣೆ ಸಮಸ್ಯೆ ಹೆಚ್ಚಾಗುತ್ತಿದ್ದು, ಗಂಟೆಗೆ ಸರಾಸರಿ 15.5 ಕಿ.ಮೀ. ಸಂಚರಿಸಲಷ್ಟೇ ಸಾಧ್ಯವಾಗುತ್ತಿದೆ!

ದೇಶದ 20 ನಗರಗಳಲ್ಲಿ ‘ಈಸ್ ಆಫ್ ಮೂವಿಂಗ್‌’ ಹೆಸರಿನಲ್ಲಿ ಸಮೀಕ್ಷೆ ನಡೆಸಿದ್ದ ಓಲಾ ಸಂಸ್ಥೆ, ತನ್ನ ವರದಿಯನ್ನು ಬಿಡುಗಡೆ ಮಾಡಿದೆ.

ದಟ್ಟಣೆ ಹೆಚ್ಚಾಗಿ ವಾಹನಗಳು ಮಂದಗತಿಯಲ್ಲಿ ಸಂಚರಿಸುವ ನಗರಗಳ ಪೈಕಿ ಪಟ್ನಾ ಹಾಗೂ ಕೊಲ್ಕತ್ತಾ ಮೊದಲೆರಡು ಸ್ಥಾನದಲ್ಲಿವೆ. ಮೂರನೇ ಸ್ಥಾನದಲ್ಲಿ ಬೆಂಗಳೂರು ಇದೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ, ವಾಹನಗಳನ್ನು ನಿಂತಲೇ ನಿಲ್ಲಬೇಕಾದ ಪರಿಸ್ಥಿತಿ ಬರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

‘ಬೆಂಗಳೂರಿನ ಜನಸಂಖ್ಯೆ ಹೊರತುಪಡಿಸಿ, 20 ಲಕ್ಷ ವಲಸೆ ಕೆಲಸಗಾರರು ಇದ್ದಾರೆ. ಕಳೆದ ಹತ್ತು ವರ್ಷಕ್ಕೆ ಹೋಲಿಸಿದರೆ ಶೇ 52ರಷ್ಟು ಜನಸಂಖ್ಯೆ ಹೆಚ್ಚಳವಾಗಿದೆ’ ಎಂದು ವಿವರಿಸಲಾಗಿದೆ.

‘ಜನರು ಹೆಚ್ಚು ಓಡಾಡುವ ವೇಳೆಯಲ್ಲಿ ಬಸ್, ಕ್ಯಾಬ್‌, ಆಟೊ ಹಾಗೂ ಖಾಸಗಿ ವಾಹನಗಳನ್ನು ಬಳಸಲಾಗುತ್ತಿದೆ. ಅವೆಲ್ಲ ವಾಹನಗಳು ಏಕಕಾಲದಲ್ಲಿ ರಸ್ತೆಗೆ ಇಳಿಯುವುದರಿಂದ ದಟ್ಟಣೆ ಉಂಟಾಗುತ್ತಿದೆ’ ಎಂಬ ಅಂಶ ವರದಿಯಲ್ಲಿದೆ.

‘ಸಮೀಕ್ಷೆಯಲ್ಲಿ ಪಾಲ್ಗೊಂಡ ಐವರಲ್ಲಿ ನಾಲ್ವರು ಸಾರ್ವಜನಿಕ ಸಾರಿಗೆಗೆ ಪರ್ಯಾಯವಾಗಿ ಟ್ಯಾಕ್ಸಿ, ಕ್ಯಾಬ್, ಆಟೊ ಬಳಕೆ ಬಗ್ಗೆ ಒಲವು ಹೊಂದಿದ್ದಾರೆ. ಶೇ 15ರಷ್ಟು ಮಂದಿ ಮಾತ್ರ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರೆ. ಅವರಲ್ಲಿ ಶೇ 42ರಷ್ಟು ಮಹಿಳೆಯರಿದ್ದು, ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕ ಸಾರಿಗೆ ಬಳಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಶೇ 51ರಷ್ಟು ಮಂದಿ ಸಾರ್ವಜನಿಕ ಸಾರಿಗೆ ಅಸುರಕ್ಷಿತವಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ’ ಎಂದು ವಿವರಿಸಲಾಗಿದೆ.

‘ಸಾರ್ವಜನಿಕ ಸಾರಿಗೆ ಸಂಪರ್ಕ ಸರಿಯಿಲ್ಲವೆಂದು ಹಲವರು ಹೇಳಿದ್ದಾರೆ. ತಾವಿರುವ ಸ್ಥಳದಿಂದ ಅವರು 10 ನಿಮಿಷ ನಡೆದುಕೊಂಡು ಹೋಗಿ ಬೇರೊಂದು ಪ್ರದೇಶದಿಂದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾರೆ. ನಿಲ್ದಾಣ ಹಾಗೂ ತಂಗುದಾಣಗಳಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದಕ್ಕೆ ಅವರು ಅಸಮಾಧಾನಗೊಂಡಿದ್ದಾರೆ’ ಎಂಬ ಅಂಶ ವರದಿಯಲ್ಲಿದೆ.

ಹೊಸ ವಾಹನ ನೋಂದಣಿ ರದ್ದು?

ಬೆಂಗಳೂರು: ಹೆಚ್ಚುತ್ತಿರುವ ವಾಹನ ದಟ್ಟಣೆ, ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ನಗರದಲ್ಲಿ ಹೊಸ ವಾಹನಗಳ ನೋಂದಣಿಯನ್ನು ನಿಲ್ಲಿಸಲಾಗುವುದೇ?

– ಇಂಥದ್ದೊಂದು ಚರ್ಚೆ ಮುನ್ನೆಲೆಗೆ ಬಂದಿದೆ. ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರು ಈ ಚಿಂತನೆಯನ್ನು ಸೂಕ್ಷ್ಮವಾಗಿ ಸುದ್ದಿಗೋಷ್ಠಿಯಲ್ಲಿ ಹರಿಯಬಿಟ್ಟರು.

‘ಬೆಂಗಳೂರಿನ ಗಾಳಿಯನ್ನು ದೆಹಲಿಯಷ್ಟು ಕಲುಷಿತಗೊಳ್ಳಲು ಬಿಡಬಾರದು. ಈ ನಿಟ್ಟಿನಲ್ಲಿ ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎಂದ ಅವರು, ಎರಡು ವರ್ಷಗಳವರೆಗೆ ಹೊಸ ವಾಹನಗಳ ನೋಂದಣಿಯನ್ನೇ ನಿಲ್ಲಿಸುವುದು, ವಿದ್ಯುತ್‌ ವಾಹನಗಳನ್ನು ರಸ್ತೆಗಿಳಿಸುವುದು ಇತ್ಯಾದಿ ಚಿಂತನೆ ಇದೆ. ಹಾಗೆಂದು ಇದನ್ನು ತಕ್ಷಣವೇ ಜಾರಿಗೊಳಿಸಲು ಹೊರಟಿಲ್ಲ. ಸಾರಿಗೆ ಸಚಿವರು, ಇಲಾಖೆ, ಸಂಬಂಧಪಟ್ಟ ತಜ್ಞರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು' ಎಂದು ಹೇಳಿದರು.

ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಬೇಕು. ಪ್ರತಿದಿನ 2,500ರಿಂದ 3 ಸಾವಿರದಷ್ಟು ವಾಹನಗಳು ನಗರದಲ್ಲಿ ನೋಂದಣಿಯಾಗುತ್ತಿವೆ. ಈ ಬಗ್ಗೆ ಎಲ್ಲ ಆಯಾಮಗಳಿಂದಲೂ ನೋಡಿಕೊಂಡು ನಿರ್ಧರಿಸಬೇಕು ಎಂದರು.

ಒಂದುವೇಳೆ ನೋಂದಣಿ ನಿಲ್ಲಿಸಿದರೆ ಆದಾಯದ ಮೇಲೆ ದೊಡ್ಡ ಹೊಡೆತ ಬೀಳುತ್ತದೆಯಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅದಕ್ಕಾಗಿಯೇ ಈ ಬಗ್ಗೆ ಇನ್ನಷ್ಟೇ ಚರ್ಚೆ ನಡೆಯಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT