ಬೆಂಗಳೂರು: ಕಟ್ಟಡವೊಂದಕ್ಕೆ 23 ಕಿಲೋವಾಟ್ ಸಾಮರ್ಥ್ಯದ ವಿದ್ಯುತ್ ಸಂಪರ್ಕಕ್ಕೆ ಮಂಜೂರಾತಿ ನೀಡಲು ₹ 3.5 ಲಕ್ಷ ಲಂಚ ಪಡೆಯುತ್ತಿದ್ದ ಬೆಸ್ಕಾಂ ಎಸ್–1 ಜಯನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಧನಂಜಯ ವಿ. ಮತ್ತು ಅವರ ಪರವಾಗಿ ಹಣ ಪಡೆದ ಸೈಯದ್ ನಿಜಾಮ್ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.
ಜಯನಗರ ಎಂಟನೇ ಬ್ಲಾಕ್‌ನಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ವಸತಿ ಕಟ್ಟಡಕ್ಕೆ 23 ಕೆವಿ ಸಾಮರ್ಥ್ಯದ ವಿದ್ಯುತ್ ಸಂಪರ್ಕ ಕೋರಿ ಭರತ್ ಕುಮಾರ್ ಎನ್.ಎಂ. ಎಂಬ ಎಲೆಕ್ಟ್ರಿಕ್ ಕಾಮಗಾರಿಗಳ ಗುತ್ತಿಗೆದಾರ ಬೆಸ್ಕಾಂನ ಜಯನಗರ ಉಪ ವಿಭಾಗ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಮಂಜೂರಾತಿ ನೀಡಲು ₹ 13 ಲಕ್ಷ ಲಂಚ ನೀಡುವಂತೆ ಧನಂಜಯ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನಲ್ಲಿ ₹ 3.5 ಲಕ್ಷವನ್ನು ಬುಧವಾರವೇ ತಲಪಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದರು.
ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಎಸ್‌ಪಿ ಕೆ.ವಿ. ಅಶೋಕ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ವೆಂಕಟೇಶ್ ಕೆ., ವಿಜಯಕೃಷ್ಣ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.