ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ–ಮಗು ಸಾವು: ‘ಬೆಸ್ಕಾಂ’ ವಿರುದ್ಧ ನಾಗರಿಕರ ಆಕ್ರೋಶ

ಕರೆ ಮಾಡಿದರೂ ಸ್ಥಳಕ್ಕೆ ಬಾರದ ಸಿಬ್ಬಂದಿ
Published 21 ನವೆಂಬರ್ 2023, 0:23 IST
Last Updated 21 ನವೆಂಬರ್ 2023, 0:23 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್ ತಂತಿ ತುಳಿದು ತಾಯಿ – ಮಗು ಮೃತಪಟ್ಟ ಪ್ರಕರಣದಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಘಟನೆ ಬಳಿಕ ಕರೆ ಮಾಡಿದರೂ ಬೆಸ್ಕಾಂ ಸ್ಪಂದಿಸಲಿಲ್ಲವೆಂದು ಸ್ಥಳೀಯರು ದೂರುತ್ತಿದ್ದಾರೆ.

ಈ ಘಟನೆಯಿಂದ ಆತಂಕಗೊಂಡಿರುವ ಸ್ಥಳೀಯರು, ತುಂಡರಿಸಿ ಬೀಳುವ ಹಂತದಲ್ಲಿರುವ ವಿದ್ಯುತ್‌ ತಂತಿಗಳು ಹಾಗೂ ಬಾಗಿರುವ ವಿದ್ಯುತ್ ಕಂಬಗಳ ಬದಲಾವಣೆಗಾಗಿ ಒತ್ತಾಯಿಸುತ್ತಿದ್ದಾರೆ.

‘ಸೌಂದರ್ಯ ಹಾಗೂ ಅವರ 9 ತಿಂಗಳ ಮಗು ಮೃತಪಟ್ಟ ಜಾಗ, ಬೆಸ್ಕಾಂ ಕಚೇರಿಯಿಂದ ಕೇವಲ 100 ಮೀಟರ್ ದೂರದಲ್ಲಿದೆ. ಘಟನೆ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯರು ಬೆಸ್ಕಾಂ ಕಚೇರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆದರೆ, ತುರ್ತಾಗಿ ಯಾರೊಬ್ಬರೂ ಸ್ಥಳಕ್ಕೆ ಬರಲಿಲ್ಲ’ ಎಂದು ಸ್ಥಳೀಯರು ಆರೋಪಿಸಿದರು.

ನಸುಕಿನಲ್ಲಿ ಸಾವು: ‘ಸೌಂದರ್ಯ, ತಮ್ಮ ಪತಿ ಸಂತೋಷ್‌ಕುಮಾರ್ ಹಾಗೂ ಮಗು ಸುವಿಕ್ಷಾ ಲಿಯಾ ಜೊತೆಯಲ್ಲಿ ನಸುಕಿನ 3.50ರ ಸುಮಾರಿಗೆ ಹೋಪ್‌ ಫಾರ್ಮ್ ಜಂಕ್ಷನ್‌ನ ತಂಗುದಾಣಕ್ಕೆ ಬಸ್‌ನಲ್ಲಿ ಬಂದಿಳಿದಿದ್ದರು. ತಂಗುದಾಣದಿಂದ ಒಂದೂವರೆ ಕಿ.ಮೀ ದೂರದಲ್ಲಿರುವ ಎ.ಕೆ.ಗೋಪಾಲ್ ಕಾಲೊನಿಯಲ್ಲಿ ಪೋಷಕರ ಮನೆ ಇದ್ದು, ಅಲ್ಲಿಗೆ ನಡೆದುಕೊಂಡು ಹೊರಟಿದ್ದರು ಎಂದು ಸ್ಥಳೀಯರು ಹೇಳಿದರು.

‘ಪಾದಚಾರಿ ಮಾರ್ಗದಲ್ಲಿ ದೀಪವಿರಲಿಲ್ಲ. ಪತಿ ಸಂತೋಷ್‌ಕುಮಾರ್‌ ಕತ್ತಲಲ್ಲೇ ಮುಂದೆ ಹೋಗುತ್ತಿದ್ದರು, ಸೌಂದರ್ಯ ಮಗು ಎತ್ತಿಕೊಂಡು ಅವರ ಹಿಂದೆ ಸಾಗುತ್ತಿದ್ದರು. ಕತ್ತಲಾಗಿದ್ದರಿಂದ ವಿದ್ಯುತ್ ತಂತಿ ಗಮನಿಸದ ಸೌಂದರ್ಯ, ಅದರ ಮೇಲೆ ಕಾಲಿಟ್ಟಿದ್ದರು. ಕ್ಷಣಮಾತ್ರದಲ್ಲಿ ವಿದ್ಯುತ್ ತಗುಲಿ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿತ್ತು. ಪತಿ, ರಕ್ಷಣೆಗೆ ಹೋಗುವಷ್ಟರಲ್ಲಿ ಬೆಂಕಿಯ ಕೆನ್ನಾಲಗೆ ಹೆಚ್ಚಾಗಿತ್ತು. ರಕ್ಷಣೆಗಾಗಿ ಪತಿ ಚೀರಾಡಿದ್ದರು. ದಾರಿಹೋಕರು ಸ್ಥಳಕ್ಕೆ ಬಂದರೂ ತಾಯಿ–ಮಗುವನ್ನು ರಕ್ಷಿಸಲು ಆಗಲಿಲ್ಲ. ತಾಯಿ–ಮಗು ಸ್ಥಳದಲ್ಲೇ ಮೃತಪಟ್ಟರು’ ಎಂದು ಸ್ಥಳೀಯರು ಮಾಹಿತಿ ನೀಡಿದರು.

7 ಗಂಟೆಗೆ ಬಂದ ಬೆಸ್ಕಾಂ ಸಿಬ್ಬಂದಿ: ‘ಘಟನೆ ಸಂಭವಿಸಿದ ಕೆಲ ನಿಮಿಷಗಳಲ್ಲೇ ಬೆಸ್ಕಾಂ ಕಚೇರಿಗೆ ಮಾಹಿತಿ ನೀಡಲಾಗಿತ್ತು. ಸಹಾಯವಾಣಿಗೂ ತಿಳಿಸಲಾಗಿತ್ತು. ಆದರೆ, ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬರಲಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

‘ಬೆಳಗಾಗುವವರೆಗೂ ತಾಯಿ–ಮಗುವಿನ ಮೃತದೇಹಗಳು ಪಾದಚಾರಿ ಮಾರ್ಗದಲ್ಲಿದ್ದವು. ಬೆಳಿಗ್ಗೆ 6.30ಕ್ಕೆ ಕಾಡುಗೋಡಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದರು. ಬೆಳಿಗ್ಗೆ 7 ಗಂಟೆಗೆ ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದರು. ಅಧಿಕಾರಿಗಳ ವರ್ತನೆಯನ್ನು ಖಂಡಿಸಿದ್ದ ಸ್ಥಳೀಯರು, ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು’ ಎಂದು ಹೇಳಿದರು.

ಮುಗಿಲು ಮುಟ್ಟಿದ ಆಕ್ರಂದನ: ತಾಯಿ ಹಾಗೂ ಮಗುವಿನ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ, ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಆಸ್ಪತ್ರೆ ಬಳಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

‘ಬೆಂಗಳೂರು ಸಾಫ್ಟ್‌ವೇರ್ ಕಂಪನಿಗಳ ನಗರ ಎನ್ನುತ್ತಾರೆ. ಆದರೆ, ಇಲ್ಲಿ ಪಾದಚಾರಿ ಮಾರ್ಗದಲ್ಲಿ ವಿದ್ಯುತ್ ತಂತಿಗಳು ತುಂಡರಿಸಿ ಬಿದ್ದರೂ ತೆಗೆಯುವವರು ಇಲ್ಲ. ನನ್ನ ಪತ್ನಿ ಹಾಗೂ ಮಗುವಿಗೆ ಬಂದ ಸ್ಥಿತಿ ಯಾರಿಗೂ ಬರಬಾರದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸೌಂದರ್ಯ ಪತಿ ಸಂತೋಷ್ ಕುಮಾರ್ ಒತ್ತಾಯಿಸಿದರು.

ಬೆಸ್ಕಾಂ ನಿರ್ಲಕ್ಷ್ಯ; 6 ವರ್ಷಗಳಲ್ಲಿ 70 ಸಾವು

ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕಳೆದ 6 ವರ್ಷಗಳಲ್ಲಿ ಸಂಭವಿಸಿದ್ದ ವಿದ್ಯುತ್ ಅವಘಡಗಳಲ್ಲಿ 70 ಮಂದಿ ಮೃತಪಟ್ಟಿದ್ದು 11 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ‘ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ಕೋಲಾರ ದಾವಣಗೆರೆ ತುಮಕೂರು ಚಿತ್ರದುರ್ಗ ಹಾಗೂ ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡಗಳು ಮೇಲಿಂದ ಮೇಲೆ ಸಂಭವಿಸುತ್ತಿವೆ. ಎಲ್ಲ ಕಡೆಯಲ್ಲೂ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ’ ಎಂದು ಸಾರ್ವಜನಿಕರು ದೂರಿದರು. ‘ತುಂಡರಿಸಿ ಬೀಳುವ ತಂತಿಗಳು ಮನೆ ಮೇಲೆ ಹಾದು ಹೋಗಿರುವ ತಂತಿಗಳು ಕಂಬಗಳಲ್ಲಿ ಪ್ರವಹಿಸುವ ವಿದ್ಯುತ್ ಹಾಗೂ ಇತರೆ ಪ್ರಕಾರಗಳಲ್ಲಿ ಅವಘಡಗಳು ಸಂಭವಿಸುತ್ತಿವೆ. ಇಂಥ ಅವಘಡ ತಡೆಗೆ ಬೆಸ್ಕಾಂ  ಸಮರ್ಪಕ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.   ಬೆಸ್ಕಾಂ ನಿರ್ಲಕ್ಷ್ಯ; ಯಾವ ವರ್ಷ ಎಷ್ಟು ಸಾವು ವರ್ಷ;ಸಾವು;ಗಾಯಾಳು 2018-19; 11; 1 2019-20; 10; 3 2020-21; 9; 3 2021-22; 13; 2 2022-23; 19; 2 2023-24 (ಅಕ್ಟೋಬರ್​ವರೆಗೆ); 8; 0

ಬೆಸ್ಕಾಂ ನೌಕರರನ್ನು ಬಂಧಿಸಿ ಬಿಡುಗಡೆ ಮಾಡಿದ ಪೊಲೀಸರು

ಬೆಂಗಳೂರು: ತಾಯಿ–ಮಗು ಮೃತಪಟ್ಟ ಪ್ರಕರಣದಲ್ಲಿ ಬೆಸ್ಕಾಂನ ಐವರು ನೌಕರರನ್ನು ಬಂಧಿಸಿದ್ದ ಕಾಡುಗೋಡಿ ಠಾಣೆ ಪೊಲೀಸರು ಠಾಣೆ ಜಾಮೀನು ಮೇಲೆ ಎಲ್ಲರನ್ನೂ ಬಿಟ್ಟು ಕಳುಹಿಸಿದ್ದಾರೆ. ನಿರ್ಲಕ್ಷ್ಯ ಆರೋಪದಡಿ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀರಾಮ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸುಬ್ರಹ್ಮಣ್ಯ ಸಹಾಯಕ ಎಂಜಿನಿಯರ್ ಚೇತನ್ ಕಿರಿಯ ಎಂಜಿನಿಯರ್ ರಾಜಣ್ಣ ಹಾಗೂ ಸ್ಟೇಷನ್ ಆಪರೇಟರ್ ಮಂಜುನಾಥ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ‘ಆರೋಪಿಗಳ ವಿರುದ್ಧ ನಿರ್ಲಕ್ಷ್ಯ (304 ಎ) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದೊಂದು ಠಾಣೆ ಜಾಮೀನು ಇರುವ ಪ್ರಕರಣ. ಹೀಗಾಗಿ ಆರೋಪಿಗಳ ಹೇಳಿಕೆ ಪಡೆದು ಬಿಟ್ಟು ಕಳುಹಿಸಲಾಗಿದೆ. ಜೊತೆಗೆ ಪುನಃ ವಿಚಾರಣೆಗೆ ಬರುವಂತೆ ನೋಟಿಸ್ ಸಹ ನೀಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಯಿ ಮನೆಗೆ ಶಾಸಕಿ ಭೇಟಿ

ಕೆ.ಆರ್‌.ಪುರ: ಮೃತ ಸೌಂದರ್ಯ ಅವರ ತಾಯಿ ರಾಜೇಶ್ವರಿ ಅವರ ಮನೆಗೆ ಮಹದೇವಪುರ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಸೋಮವಾರ ಭೇಟಿ ನೀಡಿ ಸಾಂತ್ವನ ಹೇಳಿದರು. ‘ಮಗಳ ಸಾವಿಗೆ ನ್ಯಾಯ ಬೇಕು’ ಎಂದು ಒತ್ತಾಯಿಸಿದ ತಾಯಿ ರಾಜೇಶ್ವರಿ ‘ಬಡವರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಜರುಗಿಸದೇ ಕಿರಿಯ ಸಿಬ್ಬಂದಿ ಮೇಲೆ ಕ್ರಮ ಕೈಗೊಂಡಿರುವುದು ನ್ಯಾಯ ಸಮ್ಮತವಲ್ಲ. ಹಿರಿಯ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು. ಶಾಸಕಿ ಮಂಜುಳಾ ಮಾತನಾಡಿ ‘ಮುಂದಿನ ದಿನಗಳಲ್ಲಿ ಈ ರೀತಿಯ ಅವಘಡಗಳು ಜರುಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಕರಣವನ್ನು ನ್ಯಾಯಬದ್ಧವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ತಾಯಿ–ಮಗು ಸಾವಿಗೆ ನ್ಯಾಯ ಒದಗಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT