ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕೊವಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಚಾಲನೆ

ಕೋವಿಡ್ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ, ಪರೀಕ್ಷೆ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್
Last Updated 2 ಡಿಸೆಂಬರ್ 2020, 11:35 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಕೊವಾಕ್ಸಿನ್ ಲಸಿಕೆ ಯಶಸ್ವಿಯಾಗುವ ನಿರೀಕ್ಷೆಯಿದ್ದು, ಲಸಿಕೆ ವಿತರಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಭಾರತ್ ಬಯೋಟೆಕ್ ಸಹಯೋಗದಲ್ಲಿ ಕೊವಾಕ್ಸಿನ್ ಕೋವಿಡ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, ‘ದೇಶದ 12 ರಾಜ್ಯಗಳ 25 ಭಾಗಗಳಲ್ಲಿ ಪ್ರಯೋಗ ನಡೆಯುತ್ತಿದ್ದು, ಸುಮಾರು 26 ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ. ರಾಜ್ಯದಲ್ಲಿ 1,600-1,800 ಜನರಿಗೆ ಲಸಿಕೆಯನ್ನು ಪ್ರಾಯೋಗಿಕವಾಗಿ ನೀಡಲು ನಿರ್ಧರಿಸಲಾಗಿದೆ. ಲಸಿಕೆ ನೀಡುವ ಸಮಯದಲ್ಲಿ ಊಹಾಪೋಹಗಳು ಕೇಳಿಬರುತ್ತವೆ. ಆದರೆ ಇದಕ್ಕೆ ಯಾರೂ ಕಿವಿಗೊಡಬಾರದು’ ಎಂದರು.

‘ಪ್ರಪಂಚದಲ್ಲಿ ಶೇ 15 ರಿಂದ ಶೇ 20 ರಷ್ಟು ಭಾರತೀಯ ಕಂಪನಿಗಳೇ ಲಸಿಕೆ ನೀಡುವ ಮಟ್ಟಿಗೆ ಬೆಳೆದಿದೆ. ಲಸಿಕೆಯಿಂದ ಕೆಲ ಅಡ್ಡ ಪರಿಣಾಮಗಳು ಬರಬಹುದು. ಆದರೆ, ಇದನ್ನು ನಮ್ಮ ತಜ್ಞರು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಆದ್ದರಿಂದ ಯಾವುದೇ ಆತಂಕ ಇಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಸಂಶೋಧನೆಗೆ ₹ 900 ಕೋಟಿ ಮೀಸಲಿಟ್ಟಿದ್ದಾರೆ. ಲಸಿಕೆ ಪ್ರಯೋಗ ನಡೆಯುತ್ತಿರುವ ಸಂಸ್ಥೆಗಳಿಗೆ ಖುದ್ದಾಗಿ ಪ್ರಧಾನಿ ಮೋದಿಯವರೇ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಖ್ಯಮಂತ್ರಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ಕೋವಿಡ್ ಚಿಕಿತ್ಸೆಗಾಗಿ ₹ 300 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದೆ. ದಿನಕ್ಕೆ 1.25 ಲಕ್ಷ ಪರೀಕ್ಷೆ ಮಾಡುತ್ತಿದ್ದು, ಈವರೆಗೆ 1.20 ಕೋಟಿ ಉಚಿತ ಪರೀಕ್ಷೆ ಮಾಡಲಾಗಿದೆ’ ಎಂದರು.

‘ರಾಜ್ಯದಲ್ಲಿ 29,451 ಲಸಿಕೆ ವಿತರಣೆ ಕೇಂದ್ರ ಹಾಗೂ 10,008 ಸಿಬ್ಬಂದಿಯನ್ನು ಗುರುತಿಸಲಾಗಿದೆ. ಲಸಿಕೆ ಸಂಗ್ರಹ ಹಾಗೂ ವಿತರಣೆಗೆ 2,855 ಕೋಲ್ಡ್ ಚೇನ್ ಕೇಂದ್ರಗಳು ಲಭ್ಯವಿದೆ. ಹೊಸದಾಗಿ ಬೆಂಗಳೂರು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾದೇಶಿಕ ಲಸಿಕೆ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಲಸಿಕೆ ದೊರೆತ ಬಳಿಕ ಹೆಚ್ಚು ಜನರಿಗೆ ನೀಡಲಾಗುವುದು. ಕೊರೊನಾ ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಮೊದಲು ಲಸಿಕೆ ನೀಡಲಾಗುವುದು. ನಂತರ 50 ವರ್ಷ ದಾಟಿದವರಿಗೆ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT