ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೋವಿ ನಿಗಮ: ಮಾಜಿ ಎಂ.ಡಿಯ ತಂಗಿ ಬಂಧನ

ಬ್ಯಾಂಕ್‌ ಖಾತೆಗೆ ₹1.25 ಕೋಟಿ ಜಮೆ: ಐಐಎಸ್‌ಸಿ ಉದ್ಯೋಗಿ ಆರ್‌.ಮಂಜುಳಾ
Published 22 ಆಗಸ್ಟ್ 2024, 15:57 IST
Last Updated 22 ಆಗಸ್ಟ್ 2024, 22:15 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹ 87 ಕೋಟಿ ಅಕ್ರಮ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ ಎರಡಕ್ಕೇರಿದೆ. 

ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಆರ್.ಲೀಲಾವತಿ ಅವರ ತಂಗಿ, ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ಉದ್ಯೋಗಿ ಆರ್‌.ಮಂಜುಳಾ ಬಂಧಿತರು.

ಕಳೆದ ವಾರ ಕಾರ್ಯಾಚರಣೆ ನಡೆಸಿದ ತನಿಖಾಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದರು. ಮಂಜುಳಾ ಅವರು ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಮಹಾಲಕ್ಷ್ಮೀಪುರದ ಭೋವಿಪಾಳ್ಯದ ಕಚೇರಿ ಅಧೀಕ್ಷಕ ಸುಬ್ಬಪ್ಪ ಅವರನ್ನು ಈ ಪ್ರಕರಣದಲ್ಲಿ ಹಿಂದೆ ಬಂಧಿಸಲಾಗಿತ್ತು.

‘ನಿಗಮದಲ್ಲಿ ನಡೆದ ಅಕ್ರಮದಲ್ಲಿ ಬಂದ ಹಣದ ಪೈಕಿ ₹1.25 ಕೋಟಿಯನ್ನು ಮಂಜುಳಾ ಅವರು ಸಹೋದರಿಯ ಪರವಾಗಿ ಪಡೆದುಕೊಂಡಿದ್ದರು. ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆಗೊಂಡಿತ್ತು. ಆರೋಪಿಗಳ ಬ್ಯಾಂಕ್‌ಗಳನ್ನು ಪರಿಶೀಲಿಸಿದಾಗ ಅಕ್ರಮ ಪತ್ತೆ ಆಯಿತು’ ಎಂದು ಪೊಲೀಸರು ಹೇಳಿದರು.

‘ಐಐಎಸ್‌ಸಿಯಲ್ಲಿ ಆರ್.ಮಂಜುಳಾ ಉನ್ನತ ಹುದ್ದೆಯಲ್ಲಿದ್ದಾರೆ. ಲೀಲಾವತಿ ಅವರು ಮಂಜುಳಾ ಅವರಿಗೆ ಹಿರಿಯ ಅಕ್ಕ. 2021–22ನೇ ಸಾಲಿನಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿದ್ದ ಲೀಲಾವತಿ ಅವರು ಅಕ್ರಮದ ಹಣದಲ್ಲಿ ಬಂದ ಸ್ವಲ್ಪ ಪಾಲನ್ನು ಇವರ ಖಾತೆಗೂ ಹಾಕಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಾಲ ಮಂಜೂರಾತಿ ನೆಪದಲ್ಲಿ ನಕಲಿ ದಾಖಲೆ ಸೃ‌ಷ್ಟಿಸಿ ಹನ್ಸಿಕಾ ಎಂಟರ್‌ಪ್ರೈಸಸ್‌, ನ್ಯೂ ಡ್ರೀಮ್ಸ್‌ ಎಂಟರ್‌ಪ್ರೈಸಸ್‌, ಹರ್ನಿತಾ ಕ್ರಿಯೇಷನ್ಸ್‌ ಹಾಗೂ ಸೋಮನಾಥೇಶ್ವರ ಎಂಟರ್‌ಪ್ರೈಸಸ್‌ಗಳಿಗೆ ನಿಗಮದ ಹಣ ವರ್ಗಾವಣೆ ಮಾಡಲಾಗಿತ್ತು. ಈ ಕಂಪನಿಗಳ ಖಾತೆಯಿಂದ ಮಂಜುಳಾ ಅವರ ಖಾತೆಗೆ ಹಂತ ಹಂತವಾಗಿ ಹಣ ವರ್ಗಾವಣೆ ಆಗಿದೆ. ಕಂಪನಿಗಳ ಜೊತೆಗೆ ಬಂಧಿತ ಆರೋಪಿಗೆ ಯಾವುದೇ ಆರ್ಥಿಕ ವ್ಯವಹಾರ ಇರುವುದು ಪತ್ತೆಯಾಗಿಲ್ಲ. ಲೀಲಾವತಿ ಸೂಚನೆ ಮೇರೆಗೆ ಮಂಜುಳಾ ಖಾತೆಗೂ ಹಣ ಹಾಕಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಬಂಧನದ ಭೀತಿಯಿಂದ ಆರೋಪಿ ನ್ಯಾಯಾಲಯದ ಮೊರೆ ಹೋಗಿದ್ದರು. ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿ ನ್ಯಾಯಾಲಯದಲ್ಲಿ ವಜಾಗೊಂಡ ಬಳಿಕ ಬಂಧಿಸಲಾಯಿತು’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಲೀಲಾವತಿ ಮತ್ತು ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಬಿ.ಕೆ. ನಾಗರಾಜಪ್ಪ ತಲೆಮರೆಸಿಕೊಂಡಿದ್ದು, ಪತ್ತೆಗೆ ಶೋಧ ಮುಂದುವರೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT