ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್ಥಿಕ ಸಲಹೆಗೆ ವಿದೇಶಿ ಕಂಪನಿ ಬೇಕೆ: ಲಹರ್‌ ಸಿಂಗ್ ಸಿರೋಯ ಪ್ರಶ್ನೆ

Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲೇ ನಿವೃತ್ತ ಐಎಎಸ್‌ ಅಧಿಕಾರಿಗಳೂ ಸೇರಿದಂತೆ ಅನುಭವಿ ತಜ್ಞರು ಇರುವಾಗ ರಾಜ್ಯ ಸರ್ಕಾರವು ಸಂಪನ್ಮೂಲ ಸಂಗ್ರಹಕ್ಕೆ ಸಲಹೆ ಪಡೆಯಲು ವಿದೇಶಿ ಕಂಪನಿಯನ್ನು ನೇಮಿಸಿಕೊಳ್ಳುವ ಅಗತ್ಯವಿದೆಯೆ’ ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಲಹರ್‌ ಸಿಂಗ್‌ ಸಿರೋಯ ಪ್ರಶ್ನಿಸಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರಾಜ್ಯ ಸರ್ಕಾರವು ವರಮಾನ ಸಂಗ್ರಹದ ಕುರಿತು ಸಲಹೆ ಪಡೆಯಲು ಬಾಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ ಎಂಬ ಕಂಪನಿಗೆ ₹ 10 ಕೋಟಿ ಪಾವತಿಸುತ್ತಿದೆ ಎಂಬ ಮಾಹಿತಿ ನೋಡಿ ಆಶ್ಚರ್ಯವಾಯಿತು. ಸರ್ಕಾರ ಇಂತಹ ದುಬಾರಿ ವೆಚ್ಚದ ನಿರ್ಧಾರಗಳನ್ನು ಕೈಗೊಳ್ಳುವ ಅಗತ್ಯವಿದೆಯೆ’ ಎಂದು ಕೇಳಿದ್ದಾರೆ.

ನಿವೃತ್ತ ಐಎಎಸ್‌ ಅಧಿಕಾರಿಗಳಾದ ಐ.ಎಸ್‌.ಎನ್. ಪ್ರಸಾದ್, ಚಿರಂಜೀವಿ ಸಿಂಗ್‌, ವಿ. ಬಾಲಸುಬ್ರಮಣಿಯನ್‌, ಎಂ.ಆರ್‌. ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಅನುಭವಿಗಳು ವರಮಾನ ಸಂಗ್ರಹ ಹೆಚ್ಚಳಕ್ಕೆ ಸಲಹೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ರಾಜ್ಯದಲ್ಲೇ ಇಂತಹ ಪ್ರತಿಭಾವಂತರು ಇರುವಾಗ ವಿದೇಶಿ ಕಂಪನಿಯ ಸಲಹೆ ಅನಿವಾರ್ಯವಾಗದು ಎಂದಿದ್ದಾರೆ.

‘ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರದ ಆರ್ಥಿಕತೆ ಸಂಕಷ್ಟದಲ್ಲಿದೆ ಎಂಬುದು ಈ ತೀರ್ಮಾನದಿಂದ ಬಹಿರಂಗವಾಗಿದೆ. ರಾಜ್ಯದ ದೀರ್ಘಾವಧಿಯ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಗ್ಯಾರಂಟಿಗಳನ್ನು ಹಿಂಪಡೆಯುವುದಕ್ಕೂ ಸರ್ಕಾರ ಹಿಂದೇಟು ಹಾಕಬಾರದು. ಸರ್ಕಾರ ಈ ವಿಚಾರದಲ್ಲಿ ಪ್ರತಿಷ್ಠೆಗೆ ಬೀಳಬಾರದು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT