ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂ ಭಂಡತನ ಬಿಟ್ಟು ರಾಜೀನಾಮೆ ಕೊಡಲಿ: ವಿಜಯೇಂದ್ರ

Published 18 ಆಗಸ್ಟ್ 2024, 0:30 IST
Last Updated 18 ಆಗಸ್ಟ್ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಂಡತನ ಬಿಟ್ಟು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಈ ಕುರಿತು ‘ಎಕ್ಸ್’ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಮುಡಾ’ ನಿವೇಶನ ಹಗರಣದ ದೂರು ಆಧರಿಸಿ ರಾಜ್ಯಪಾಲರು ಸಂವಿಧಾನದತ್ತ ಅಧಿಕಾರ ಚಲಾಯಿಸಿ, ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದ್ದಾರೆ. ಸರ್ಕಾರದ ಭ್ರಷ್ಟ ಹಗರಣಗಳ ವಿರುದ್ಧ ಹಾಗೂ ಮುಖ್ಯಮಂತ್ರಿ ಸ್ವಜನ ಪಕ್ಷಪಾತ ವಿರುದ್ಧ ಸಾಕಷ್ಟು ದಾಖಲೆ, ಪುರಾವೆಗಳು ಇರುವುದನ್ನು ದೃಢಪಡಿಸಿಕೊಂಡಿದ್ದಾರೆ ಎಂದಿದ್ದಾರೆ. 

ಎಷ್ಟೇ ಹೋರಾಟ ನಡೆಸಿದರೂ ತಮ್ಮನ್ನು ಜಗ್ಗಿಸುವವರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಂಡತನ ಪ್ರದರ್ಶಿಸುತ್ತಿದ್ದರು. ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಲು ಅನುವಾಗುವಂತೆ ಈಗಲಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಸ್ಥಾನದ ಘನತೆ ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾನೂನು ಕ್ರಮ ಎದುರಿಸಿ: ಶೋಭಾ ಕರಂದ್ಲಾಜೆ 
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು, ಕಾನೂನು ಕ್ರಮ ಎದುರಿಸಬೇಕು ಎಂದು ಕೇಂದ್ರ ಸಣ್ಣ, ಮಧ್ಯಮ ಕೈಗಾರಿಕೆ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು. ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಸಿದ್ದರಾಮಯ್ಯ 2013ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಅವರ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣ ಲೋಕಾಯುಕ್ತದಲ್ಲಿದ್ದವು. ತನ್ನನ್ನು ತಾನು ರಕ್ಷಿಸಿಕೊಳ್ಳಲು ಲೋಕಾಯುಕ್ತವನ್ನೇ ದುರ್ಬಲಗೊಳಿಸಿದ್ದರು. ಪ್ರಕರಣಗಳನ್ನು ಎಸಿಬಿಗೆ ವರ್ಗಾವಣೆ ಮಾಡಿ ಮುಚ್ಚಿಹಾಕಿದ್ದರು ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT