ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕೂಟ ವ್ಯವಸ್ಥೆ ದಮನಕ್ಕೆ ಯತ್ನ: ರಮೇಶ ಬಾಬು

ಲೋಕಸಭಾ ಚುನಾವಣೆ: ನಾಗರಿಕ ಸಮಾಜ ವೇದಿಕೆಯಿಂದ ಪ್ರಣಾಳಿಕೆ ಬಿಡುಗಡೆ
Published 9 ಫೆಬ್ರುವರಿ 2024, 14:18 IST
Last Updated 9 ಫೆಬ್ರುವರಿ 2024, 14:18 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನೇ ಕೊಲ್ಲುವ ಪ್ರಯತ್ನ ನಡೆಸುತ್ತಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆ.ಪಿ.ಸಿ.ಸಿ) ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ ಬಾಬು ಆಪಾದಿಸಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಗರಿಕ ಸಮಾಜ ವೇದಿಕೆಯು ಹೊರತಂದಿರುವ ಲೋಕಸಭೆ ಚುನಾವಣೆ–2024ರ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಒಕ್ಕೂಟ ವ್ಯವಸ್ಥೆ ದಮನವಾದರೆ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ. ಪ್ರಾದೇಶಿಕ ಭಾವನೆಗಳು ಉಳಿಯಬೇಕು. ಯಾವುದೇ ಸರ್ಕಾರ ಇರಲಿ; ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಏಕಧರ್ಮ, ಏಕ ಜಾತಿ ಇರುವಂತೆ ಮಾಡುತ್ತೇವೆ ಎಂಬುದು ಸರಿಯಾದ ಕ್ರಮವಲ್ಲ. ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಪ್ರತಿಯೊಂದು ಜಾತಿ ಹಾಗೂ ಧರ್ಮಗಳೂ ಉಳಿಯಬೇಕು’ ಎಂದು ಪ್ರತಿಪಾದಿಸಿದರು.

‘ದೇಶಕ್ಕೆ ಮಾದಕ ವಸ್ತುಗಳ ಮಾರಾಟವು ಶಾಪವಾಗಿ ಪರಿಣಮಿಸಿದೆ. ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು. ಈ ಸಂಬಂಧ ಮುಖ್ಯಮಂತ್ರಿಗೂ ಪತ್ರ ಬರೆದಿದ್ದೆ. ಸಭೆ ನಡೆಸಿ, ಡ್ರಗ್ಸ್‌ ಮಾರಾಟ ಜಾಲಕ್ಕೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿಯವರು ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಸೂಚಿಸಿದ್ದರು. ಆದರೆ, ಪೊಲೀಸರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ‘ ಎಂದು ಆಪಾದಿಸಿದರು.

‘ನಾಗರಿಕ ಸಮಾಜ ವೇದಿಕೆ ಹೊರತಂದಿರುವ ಪ್ರಣಾಳಿಕೆಯನ್ನು ಎಐಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪಿ.ಚಿದಂಬರಂ ಅವರಿಗೆ ಸಲ್ಲಿಸಲಾಗುವುದು. ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಪ್ರಣಾಳಿಕೆಗಳು ಸಿದ್ಧವಾಗಬೇಕು’ ಎಂದು ಹೇಳಿದರು.

ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ‘ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡುತ್ತವೆ. ಆದರೆ, ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಅನುಷ್ಠಾನಕ್ಕೆ ತರುತ್ತಿಲ್ಲ’ ಎಂದು ಆಪಾದಿಸಿದರು.

‘ಧರ್ಮ, ವೈಯಕ್ತಿಕ ವಿಚಾರಗಳನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬಡವರಿಗೆ ನ್ಯಾಯಾಂಗದಿಂದ ನ್ಯಾಯ ಸಿಗುತ್ತಿಲ್ಲ. ಮಾಧ್ಯಮಗಳು ವ್ಯಾಪಾರೀಕರಣಗೊಂಡಿವೆ. ಮಾಧ್ಯಮದಿಂದಲೂ ನ್ಯಾಯ ದೊರೆಯುತ್ತಿಲ್ಲ’ ಎಂದು ಹೇಳಿದರು.

‘ಯಾರೂ ಉಚಿತ ಕೊಡುಗೆಗಳನ್ನೂ ದೂಷಿಸುತ್ತಿಲ್ಲ. ಉಚಿತ ಕೊಡುಗೆಗಳಿಗೆ ಆದ್ಯತೆ ಮುಖ್ಯ. ಶಿಕ್ಷಣ ಹಾಗೂ ಆರೋಗ್ಯ ಸೇವೆಯೂ ಉಚಿತವಾಗಿ ದೊರೆತರೆ ಜನರಿಗೆ ಹೆಚ್ಚು ಅನುಕೂಲ’ ಎಂದು ಪ್ರತಿಪಾದಿಸಿದರು.

ಬಿಜೆಪಿ ವಕ್ತಾರೆ ಸುರಭಿ ಪಾಲ್ಗೊಂಡಿದ್ದರು.

ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬರಗಾಲಕ್ಕೆ ಅನುದಾನ ಕೊಟ್ಟಿಲ್ಲ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದರು. ಈಗ ಅವರೇ ಪಿ.ಎಂ ಆಗಿದ್ದು ಒಕ್ಕೂಟ ವ್ಯವಸ್ಥೆಗೆ ಅನ್ಯಾಯ ಮಾಡುತ್ತಿದ್ದಾರೆ.

- ‘ಮುಖ್ಯಮಂತ್ರಿ‘ ಚಂದ್ರು ಅಧ್ಯಕ್ಷ ಎಎಪಿ

ಪ್ರಣಾಳಿಕೆಯ ಪ್ರಮುಖಾಂಶಗಳು

* ರೈತರ ಕನಿಷ್ಠ ಬೆಂಬಲ ಬೆಲೆ ಖಾತರಿ ಹಕ್ಕು ಮಸೂದೆ–2018 ಅನ್ನು ಜಾರಿಗೆ ತರಬೇಕು.

* ಕೃಷಿಯನ್ನು ಖಾಸಗಿ ಕ್ಷೇತ್ರಕ್ಕೆ ವಹಿಸುವ ಯಾವುದೇ ಪ್ರಯತ್ನ ಮಾಡಬಾರದು.

* ದಲಿತರು ಹಾಗೂ ಬುಡಕಟ್ಟು ಜನರನ್ನು ಬಲವಂತದಿಂದ ಸ್ಥಳಾಂತರ ಮಾಡಬಾರದು.

* ಪ್ರತಿ ರಾಜ್ಯದಲ್ಲಿ ವಲಸೆ ಕಾರ್ಮಿಕರ ಮಂಡಳಿಯನ್ನು ಕಡ್ಡಾಯವಾಗಿ ರಚಿಸಬೇಕು.

* ಕೊಳೆಗೇರಿ ನಿವಾಸಿಗಳಿಗೆ ಆಸ್ತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರಬೇಕು.

* ಕುಡಿಯುವ ನೀರಿನ ಹಕ್ಕು ಆರೋಗ್ಯದ ಹಕ್ಕು ಹಾಗೂ ಶಿಕ್ಷಣದ ಹಕ್ಕು ಎಲ್ಲರಿಗೂ ದೊರೆಯಬೇಕು.

* ಶೇ 33ರಷ್ಟು ಮಹಿಳಾ ಮೀಸಲಾತಿಯನ್ನು ಹೊಸ ಜನಗಣತಿ ಹಾಗೂ ಕ್ಷೇತ್ರಗಳ ಪುನರ್‌ ವಿಂಗಡಣೆಗೂ ಮೊದಲು ಜಾರಿಗೆ ತರಬೇಕು.

* ಅರಣ್ಯ ಹಕ್ಕು ಕಾಯ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಬೇಕು.

* ಅಂಗವಿಕಲರ ಕಲ್ಯಾಣಕ್ಕೆ ಶೇ 5ರಷ್ಟು ಅನುದಾನ ಮೀಸಲಿಡಬೇಕು. ಶೇ 3ರಷ್ಟು ಕ್ಷೇತ್ರಗಳಲ್ಲಿ ಅಂಗವಿಕಲರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು.

* ಎಲ್ಲ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ತಮ್ಮ ಭಾಷಣದಲ್ಲಿ ದ್ವೇಷ ಬಿತ್ತುವುದು ಜನಾಂಗೀಯ ಹತ್ಯೆಗಳಿಗೆ ಕರೆ ನೀಡುವುದು ಜಾತಿ–ಧರ್ಮಗಳ ಹೆಸರಿನಲ್ಲಿ ಮತಯಾಚನೆ ಮಾಡಿದರೆ ಕ್ರಮ ಕೈಗೊಳ್ಳಬೇಕು. * ಕ್ರಿಮಿನಲ್‌ ಆರೋಪಗಳನ್ನು ಹೊತ್ತಿರುವ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT