ಗುರುವಾರ , ಜೂನ್ 30, 2022
24 °C

ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಗೂ ಬ್ಲ್ಯಾಕ್‌ಮೇಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್ಪಿ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಇದೇ ಆರೋಪಿಗಳು ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಂ. ಧನಂಜಯ್ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.

‘ರಾಜ್ಯದ 40ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ಬೆಳಗಾವಿ ಜಿಲ್ಲೆಯ ಸದಲಗಾದ ಮುರಿಗೆಪ್ಪ ಕುಂಬಾರ (56) ಹಾಗೂ ಹಾಸನ ಜಿಲ್ಲೆಯ ಬಾಗೇಹೋಬಳಿಯ ರಜನಿಕಾಂತ್ (46) ಅವರನ್ನು ಬಂಧಿಸಲಾಗಿದೆ. ಇದೇ ಆರೋಪಿಗಳು ಎಂ. ಧನಂಜಯ್ ಹಾಗೂ ಅವರ ಸಹೋದ್ಯೋಗಿಗಳಿಗೂ ಕರೆ ಮಾಡಿ ಬೆದರಿಸಿದ್ದು, ಈ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರವಾಸಕ್ಕೆ ಹಣ ಕೇಳಿದ್ದ: ‘ಮೇ 23ರಂದು ಧನಂಜಯ್ ಅವರಿಗೆ ಕರೆ ಮಾಡಿದ್ದ ಆರೋಪಿ, ‘ರಾಜ್ಯದ ಕೆಲ ಜಿಲ್ಲೆಗಳ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಮ್ಮ ಮೇಲೆ ದೂರು ನೀಡಿದ್ದಾರೆ. ಈಗಾಗಲೇ ಪ್ರಕರಣ ದಾಖಲಿಸಿಕೊಂಡು, ಸಮೀಕ್ಷೆ ಮಾಡುತ್ತಿದ್ದೇವೆ. ಸದ್ಯದಲ್ಲೇ ನಿಮ್ಮ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಿದ್ದೇವೆ’ ಎಂಬುದಾಗಿ ಬೆದರಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಿಮ್ಮ ಮೇಲೆ ದಾಳಿ ನಡೆಯದಂತೆ ನೋಡಿಕೊಳ್ಳುತ್ತೇನೆ. ಸದ್ಯ ನಮ್ಮ ತನಿಖಾಧಿಕಾರಿ ಹಾಗೂ ಇತರರು, ಶ್ರೀಲಂಕಾ ಪ್ರವಾಸಕ್ಕೆ ಹೊರಟಿದ್ದಾರೆ. ಅದಕ್ಕೆ ಹಣದ ವ್ಯವಸ್ಥೆ ಮಾಡಿಸಿ’ ಎಂದೂ ಆರೋಪಿ ಬೇಡಿಕೆ ಇರಿಸಿದ್ದ. ಈ ಬಗ್ಗೆ ಧನಂಜಯ್, ಸಹೋದ್ಯೋಗಿಗಳ ಜೊತೆ ಚರ್ಚಿಸಿದ್ದರು. ತಮಗೂ ಬ್ಲ್ಯಾಕ್‌ಮೇಲ್ ಕರೆ ಬಂದಿರುವುದಾಗಿ ಅವರು ಹೇಳಿದ್ದರು’ ಎಂದೂ ತಿಳಿಸಿವೆ.

‘ಮುರಿಗೆಪ್ಪ ಹಾಗೂ ರಜನಿಕಾಂತ್ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲಿಗೂ ಹೋಗಿ ಜಾಮೀನು ಮೇಲೆ ಆರೋಪಿಗಳು ಹೊರಬಂದಿದ್ದರು’ ಎಂದೂ ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು