ಬುಧವಾರ, ಆಗಸ್ಟ್ 4, 2021
28 °C
ಅಂತರ ಕಾಯ್ದುಕೊಳ್ಳುವ ಜನ

ಸೋಂಕು ತಗುಲುವ ಆತಂಕ l ಕೆಲಸದಿಂದ ವಿನಾಯಿತಿಗೆ ಅಂಧರ ಒತ್ತಾಯ

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ‘ಅಂಧ- ಅಂಗವಿಕಲ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರಾದರೂ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮೊದಲಿನಂತೆ ಯಾರೂ ಅವರ ಸಹಾಯಕ್ಕೆ ಬರುತ್ತಿಲ್ಲ. ನೆರವಾಗುವ ಮನಸ್ಸಿದ್ದರೂ ಸೋಂಕು ಹರಡುವ ಭಯದಿಂದ ನಮ್ಮನ್ನು ಮುಟ್ಟಲೂ ಹೆದರುತ್ತಾರೆ.’

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂಧ ನೌಕರರ ಅಳಲು ಇದು.

‘ಕಚೇರಿ ತಲುಪಲು ಇತ್ತೀಚೆಗೆ ಮೆಜೆಸ್ಟಿಕ್‍ನಿಂದ ಸ್ಯಾಟಲೈಟ್‍ಗೆ ತೆರಳುವ ಬಸ್ ಹತ್ತಿದ್ದೆ. ಕುಳಿತುಕೊಳ್ಳುವುದಕ್ಕೆ ನೆರವಾಗಲು ಯಾರೂ ಮುಂದಾಗಲಿಲ್ಲ. ‘ಈ ಸಮಯದಲ್ಲಿ ಏಕೆ ಸಂಚರಿಸುತ್ತೀರಿ' ಎಂದು ಬಸ್ ನಿರ್ವಾಹಕ ಗದರಿದರು. ಬಸ್‍ನಲ್ಲಿದ್ದ ಪ್ರಯಾಣಿಕರು ‘ಇವರನ್ನು ಬಹಳ ಮಂದಿ ಸ್ಪರ್ಶಿಸಿರುತ್ತಾರೆ. ಇವರಿಗೆ ನೆರವಾದರೆ ಕೊರೊನಾ ಸೋಂಕು ನಮಗೂ ಹರಡಿದರೆ ಏನು ಮಾಡುವುದು.. ಎಂದು ಮಾತನಾಡಿ
ಕೊಂಡರು’ ಎಂದು ತಮಗಾದ ಅನುಭವವನ್ನು ಅಂಧ ಉದ್ಯೋಗಿಯೊಬ್ಬರು ನೊಂದು ತಿಳಿಸಿದರು.

‘ಈಗಿನ ಸಂದರ್ಭದಲ್ಲೂ ಅಂಧ ನೌಕರರು ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವುದು ಸವಾಲಿನ ಕೆಲಸ. ಇವರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಹಾಗಾಗಿ ಇವರು ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು. ವೇತನ ಕಡಿತಗೊಳಿಸಬಾರದು’ ಎಂದು ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಸಂಕರೆಡ್ಡಿ ಒತ್ತಾಯಿಸಿದರು.

‘ಸರ್ಕಾರದ ವಿವಿಧ ಇಲಾಖೆಗಳು, ನಿಗಮ, ಮಂಡಳಿಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ 1,500ಕ್ಕೂ ಹೆಚ್ಚು ಅಂಧ ನೌಕರರಿದ್ದಾರೆ. ಕಚೇರಿಗೆ ತೆರಳುವಾಗ ರಸ್ತೆ ದಾಟಿಸಲು, ಬಸ್‍ಗಳಲ್ಲಿ ಕುಳಿತು
ಕೊಳ್ಳಲು, ಕಚೇರಿಗಳಲ್ಲಿ ವೈಯಕ್ತಿಕ ಕೆಲಸಗಳಿಗೆ ಇತರರ ನೆರವು ಬೇಕು. ನೆರವಿಗೆ ಧಾವಿಸುವ ಮನಸಿದ್ದರೂ ಜನ ಕೊರೊನಾ ಕಾರಣದಿಂದಾಗಿ ಹಿಂಜರಿಯುತ್ತಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಗರ್ಭಿಣಿಯರು ಹಾಗೂ ಹಿರಿಯ ಸಿಬ್ಬಂದಿಗೆ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದ್ದು, ಅಂಗವಿಕಲರನ್ನು ಕಡೆಗಣಿಸಲಾಗಿದೆ. ಅಂಗವಿಕಲ ನೌಕರರ ಸುರಕ್ಷತೆ ಖಾತರಿಪಡಿಸುವ ಮಾರ್ಗದರ್ಶಿಗಳನ್ನೂ ಪ್ರಕಟಿಸಿಲ್ಲ. ಈಗಾಗಲೇ ವಿವಿಧ ಬ್ಯಾಂಕ್‍ಗಳು ಇವರಿಗೆ ಕರ್ತವ್ಯದಿಂದ ವಿನಾಯಿತಿ ನೀಡಿವೆ’ ಎಂದು ಅವರು ಗಮನ ಸೆಳೆದರು. 

ಇ–ಮೇಲ್ ಅಭಿಯಾನ: ‘ಅಂಗವಿಕಲರಿಗೆ ಕರ್ತವ್ಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡುವ ಬಗ್ಗೆ ಅಂಗವಿಕಲರ ಕಾಯ್ದೆಯ ಆಯುಕ್ತರಿಗೆ ಜೂನ್‍ನಲ್ಲೇ ಮನವಿ ಮಾಡಿದ್ದೆವು. ಅವರಿಂದ ಪ್ರತಿಕ್ರಿಯೆ ಬರಲಿಲ್ಲ. ಹಾಗಾಗಿ ಆಯುಕ್ತರಿಗೆ ಇಮೇಲ್‌ನಲ್ಲಿ ಮನವಿ ಸಲ್ಲಿಸುವ ಅಭಿಯಾನ ಕೈಗೊಂಡಿದ್ದೇವೆ’ ಎಂದರು.

‘ಸಹಾಯವಾಣಿಗಳಿಗೆ ನಿಯೋಜಿಸಿ’

‘ಕೊರೊನಾ ನಿಯಂತ್ರಣಕ್ಕೆ ಅನುಕೂಲವಾಗುವಂತೆ ಸರ್ಕಾರ ಹಲವು ಸಹಾಯವಾಣಿಗಳನ್ನು ಆರಂಭಿಸಿದೆ. ಇವುಗಳನ್ನು ಹೊರಗುತ್ತಿಗೆ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ತರಬೇತಿ ಮತ್ತು ತಂತ್ರಜ್ಞಾನದ ನೆರವಿನಿಂದ ಮನೆಯಲ್ಲೇ ಕೂತು ಸಹಾಯವಾಣಿಗಳನ್ನು ನಾವೂ ನಿರ್ವಹಿಸಬಹುದು.  ಅಂಧರನ್ನು ಕಚೇರಿ ಕೆಲಸಗಳ ಬದಲಿಗೆ ಇಂತಹ ಪರ್ಯಾಯ ಕೆಲಸಗಳಿಗೆ ನಿಯೋಜಿಸಬಹುದು’ ಎಂದು ರಮೇಶ್ ಸಂಕರೆಡ್ಡಿ ಸಲಹೆ ನೀಡಿದರು.

***

ಅಂಗವಿಕಲರಿಗೆ ಕರ್ತವ್ಯದಿಂದ ತಾತ್ಕಾಲಿಕ ವಿನಾಯಿತಿ ನೀಡುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಶೀಘ್ರವೇ ಚರ್ಚಿಸಲಾಗುವುದು

- ಬಸವರಾಜು, ಅಂಗವಿಕಲರ ಹಕ್ಕುಗಳ ಕಾಯ್ದೆಯ ರಾಜ್ಯ ಆಯುಕ್ತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು